
ಬೆಂಗಳೂರು, ಡಿಸೆಂಬರ್ 4: ಬೆಂಗಳೂರಿನ (Bengaluru) ಕೆಆರ್ ಪುರಂ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ, ಕಳವಾಗಿದ್ದ ಬರೋಬ್ಬರಿ 70 ಲಕ್ಷ ರೂಪಾಯಿ ಮೌಲ್ಯದ 500 ಗ್ರಾಂ ಚಿನ್ನಾಭರಣ ಹಾಗೂ 1.5 ಕೆ.ಜಿ. ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಒಟ್ಟು 17 ಮನೆಗಳ ಕಳ್ಳತನ ಮಾಡಿದ್ದ ಆರೋಪಿ ಮೊಹಮ್ಮದ್ ಇಸ್ರಾರ್ ಎಂಬಾತನನ್ನು ಮಾಲು ಸಮೇತ ಬಂಧಿಸಲಾಗಿದೆ. ಬಂಧಿತ ಆರೋಪಿ ತಡರಾತ್ರಿ ಮನೆಗಳ್ಳತನ ಮಾಡುತ್ತಿದ್ದ. ಗುರುತು ಪತ್ತೆಯಾಗದಂತೆ ತಡೆಯಲು ಹಲವು ಚಾಣಾಕ್ಷ ತಂತ್ರಗಳನ್ನು ಅನುಸರಿಸುತ್ತಿದ್ದ. ಕಳ್ಳತನ ಮಾಡುವ ಮುನ್ನ ಮತ್ತು ನಂತರ ಬಟ್ಟೆಗಳನ್ನು ಬದಲಾಯಿಸುತ್ತಿದ್ದ. ಅಷ್ಟೇ ಅಲ್ಲದೆ, ಕೃತ್ಯ ಎಸಗಿದ ಮೇಲೆ ತನ್ನ ಬೈಕ್‌ನ ನಂಬರ್ ಪ್ಲೇಟ್ ಅನ್ನು ಕೂಡ ಬದಲಾಯಿಸಿ ಪೊಲೀಸರ ಕಣ್ಣು ತಪ್ಪಿಸಿಕೊಳ್ಳುತ್ತಿದ್ದ ಎಂಬುದು ತಿಳಿದುಬಂದಿದೆ.
ಕಳೆದ ಮೂರು ವರ್ಷಗಳಿಂದ ಈ ಕಳ್ಳ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ. ಆದರೆ, ಕೆ.ಆರ್. ಪುರಂ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಕೊನೆಗೂ ಮೊಹಮ್ಮದ್ ಇಸ್ರಾರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಮೊಬೈಲ್ ಕಸಿದು ಖರೀದಿ, ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಗೋವಿಂದ ರಾಜನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 18 ಲಕ್ಷ ರೂ. ಮೌಲ್ಯದ ಫೋನ್‌ಗಳನ್ನು ಸೀಜ್ ಮಾಡಲಾಗಿದೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳು ನಗರದ ರಸ್ತೆ, ಗಲ್ಲಿ ಗಳಲ್ಲಿ, ಬೀದಿಗಳಲ್ಲಿ ಸಂಚರಿಸಿ, ಜನರಿಂದ ಮೊಬೈಲ್‌ಗಳನ್ನು ಕಸಿದುಕೊಂಡು ಪರಾರಿಯಾಗುತ್ತಿದ್ದರು. ನಂತರ, ಕದ್ದ ಮೊಬೈಲ್‌ಗಳನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಬಂಧಿತ ಆರೋಪಿಗಳನ್ನು ಪರ್ವೇಜ್, ಜುಬೇರುದ್ದೀನ್, ಸದ್ದಾಂ ಮತ್ತು ಅಮ್ಜದ್ ಪಾಷಾ ಎಂದು ಗುರುತಿಸಲಾಗಿದೆ.
ಇವರಲ್ಲಿ ಪರ್ವೇಜ್ ಮತ್ತು ಜುಬೇರುದ್ದೀನ್ ಹಲವು ಮೊಬೈಲ್ ಕಳ್ಳತನ ಪ್ರಕರಣಗಳಲ್ಲಿ ಶಾಮೀಲಾಗಿದ್ದರು. ಸದ್ದಾಂ ಮತ್ತು ಅಮ್ಜದ್ ಪಾಷಾ ಕದ್ದ ಮೊಬೈಲ್‌ಗಳನ್ನು ಖರೀದಿಸಿ ಮರುಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸಿಸಿ ಕ್ಯಾಮರಾ ದೃಶ್ಯಗಳ ಆಧರಿಸಿ ಆರೋಪಿಗಳು ಲಾಕ್ ಆಗಿದ್ದಾರೆ. ಸದ್ಯ, ಗೋವಿಂದರಾಜನಗರ ಪೊಲೀಸರು ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಮನೆಯ ಎಸಿ ಸರ್ವಿಸ್ ಮಾಡಲು ಬಂದು ಕಾರಿಗೆ ಕಲ್ಲು ಹೊಡೆದ್ರು: ಘಟನೆ ಬಿಚ್ಚಿಟ್ಟ ನಿವೃತ್ತ ಪೊಲೀಸ್
ದಿನದಿಂದ ದಿನಕ್ಕೆ ಮೊಬೈಲ್ ಕಳವು ಪ್ರಕರಣ ಸಂಖ್ಯೆ ಏರುತ್ತಲೇ ಇದೆ. ಆಗಿದ್ದಾಂಗ್ಗೆ ಪೊಲೀಸರು ಮೊಬೈಲ್ ಕಳ್ಳರನ್ನು ಬಂಧಿಸುತ್ತಿದ್ದರು. ಆದರೆ, ಜೈಲಿನಿಂದ ನಿರಾಯಸವಾಗಿ ಜಾಮೀನು ಪಡೆದು ಹೊರ ಬರುವ ವೊಬೈಲ್ ಸ್ನಾಚರ್ಸ್ ಮತ್ತದೇ ಕೃತ್ಯಗಳಲ್ಲಿ ಶಾಮೀಲಾಗುತ್ತಿರುವುದು ಪೊಲೀಸರಿಗೆ ಮತ್ತಷ್ಟು ತಲೆನೋವು ತಂದಿದೆ.