ಅರ್ಥ ಕಳೆದುಕೊಂಡ ಸೇವಾ ಸಿಂಧು ಪೋರ್ಟಲ್​: ಸರಳ ಸೇವೆಗಳನ್ನು ಪಡೆದುಕೊಳ್ಳಲು ಜನರ ಪರದಾಟ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 16, 2022 | 6:00 AM

ಈ ಮೊದಲು ಒಂದೇ ಸೂರಿನಡಿ 700ಕ್ಕೂ ಹೆಚ್ಚು ಸೇವೆ ಮತ್ತು ಸೌಲಭ್ಯಗಳನ್ನು ನಾಗರಿಕರು ಪಡೆದುಕೊಳ್ಳಬಹುದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸೇವಾ ಸಿಂಧು ಪೋರ್ಟಲ್​ನಿಂದ ಹಲವು ಸೇವೆಗಳನ್ನು ಹಿಂಪಡೆಯಲಾಗಿದೆ.

ಅರ್ಥ ಕಳೆದುಕೊಂಡ ಸೇವಾ ಸಿಂಧು ಪೋರ್ಟಲ್​: ಸರಳ ಸೇವೆಗಳನ್ನು ಪಡೆದುಕೊಳ್ಳಲು ಜನರ ಪರದಾಟ
ಗ್ರಾಮ ಒನ್ ಆರಂಭವಾದ ನಂತರ ಸೇವಾ ಸಿಂಧು ಪೋರ್ಟಲ್​ನಿಂದ ಸೇವೆಗಳನ್ನು ಹಿಂಪಡೆಯಲಾಗಿದೆ.
Follow us on

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸವಲತ್ತುಗಳು ಜನರಿಗೆ ಸುಲಭವಾಗಿ, ಒಂದೇ ಸೂರಿನಡಿ ಸಿಗಬೇಕು ಎನ್ನುವ ಕಾರಣಕ್ಕೆ ಆರಂಭವಾಗಿದ್ದ ಸಾಮಾನ್ಯ ಸೇವಾ ಕೇಂದ್ರಗಳು (Comman Service Centres – CSC) ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಈ ಮೊದಲು ಸೇವಾ ಕೇಂದ್ರಗಳಲ್ಲಿ ಕರ್ನಾಟಕ ರಾಜ್ಯದ ಸೇವೆಗಳು ಸೇವಾ ಸಿಂಧು ಎಂಬ ಪೋರ್ಟಲ್ ಅಡಿಯಲ್ಲಿ ದೊರೆಯುತ್ತಿದ್ದವು. ಇದಕ್ಕಾಗಿಯೇ ಸೇವಾದಾತರಿಗೆ ವಿಶೇಷ ಲಾಗಿನ್ ಐಡಿ ಸಾರ್ವಜನಿಕರಿಗೆ ಅಗತ್ಯ ಸೇವೆ ಒದಗಿಸಲು ವ್ಯವಸ್ಥೆ ಮಾಡಲಾಗಿತ್ತು. ಒಂದೇ ಸೂರಿನಡಿ 700ಕ್ಕೂ ಹೆಚ್ಚು ಸೇವೆ ಮತ್ತು ಸೌಲಭ್ಯಗಳನ್ನು ನಾಗರಿಕರು ಪಡೆದುಕೊಳ್ಳಬಹುದಿತ್ತು.

ಆದರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗ್ರಾಮ ಒನ್ ಯೋಜನೆ ಘೋಷಿಸಿದ ನಂತರ ಸೇವಾ ಸಿಂಧು ಪೋರ್ಟಲ್​ಗಳಿಂದ ಒಂದೊಂದೇ ಸೇವೆಗಳನ್ನು ಹಿಂಪಡೆಯಲಾಯಿತು. ಪ್ರಸ್ತುತ ಅತಿ ಅವಶ್ಯಕವೆನಿಸುವ ಜಾತಿ, ಆದಾಯ ಪ್ರಮಾಣ ಪತ್ರ, ವಂಶವೃಕ್ಷ, ಕಾರ್ಮಿಕರ ಕಾರ್ಡ್, ಪೊಲೀಸ್ ವೆರಿಫಿಕೇಷನ್ ಸೇರಿದಂತೆ ಹಲವು ಅತ್ಯಗತ್ಯ ಸೇವೆಗಳು ಸೇವಾ ಸಿಂಧು ಕೇಂದ್ರಗಳಲ್ಲಿ ಲಭ್ಯವಿಲ್ಲ.

ಭಾರತ ಸರ್ಕಾರದ ಪ್ರಮುಖ ಯೋಜನೆಯಾದ ಆಯುಷ್ಮಾನ್ ಭಾರತ ಆರೋಗ್ಯ ವಿಮೆಗೆ ನೋಂದಣಿಯಾಗಲು ಆರೋಗ್ಯ ಕರ್ನಾಟಕ ಎಂಬ ಯೋಜನೆಯಡಿ ನಾಗರಿಕರಿಗೆ ಅವಕಾಶವಿತ್ತು. ನೋಂದಣಿ ಮಾಡಲು ಸೇವಾ ಕೇಂದ್ರಗಳಿಗೆ ವಿಶೇಷ ಐಡಿ ಸಹ ನೀಡಲಾಗಿತ್ತು. ಈಗ ಆ ಸೌಲಭ್ಯವನ್ನು ಸಹ ಸೇವಾಸಿಂಧು ಪೋರ್ಟಲ್​ಗಳಿಂದ ಹಿಂಪಡೆಯಲಾಗಿದೆ. ಈ ಸೌಲಭ್ಯವನ್ನು ಕೇವಲ ಗ್ರಾಮ ಒನ್ ಕೇಂದ್ರಗಳಿಗಷ್ಟೇ ಮೀಸಲಿಡಲಾಗಿದೆ. ನಗರ ಭಾಗದಲ್ಲಿರುವ ಜನರು ಆಯುಷ್ಮಾನ್ ಭಾರತ ಯೋಜನೆಗೆ ನೋಂದಾಯಿಸಿಕೊಳ್ಳಲು ಗ್ರಾಮೀಣ ಭಾಗಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸೇವಾ ಸಿಂಧುವಿನಲ್ಲಿ ನಾಗರಿಕರ ವೈಯಕ್ತಿಕ ಲಾಗಿನ್ ಮೂಲಕ ಸೇವೆಗಳಿಗೆ ಅರ್ಜಿ ಹಾಕಲು ಅವಕಾಶವಿದ್ದರೂ ಅದರಲ್ಲಿ ಆಧಾರ್ ಕಾರ್ಡ್ ವೆರಿಫೈ (ಪರಿಶೀಲಿಸಲು) ಕೇವಲ ಮೊಬೈಲ್ ಮೂಲಕ ಮಾತ್ರ ಸಾಧ್ಯ. ಒಂದೊಮ್ಮೆ ಮೊಬೈಲ್ ವೆರಿಫಿಕೇಷನ್ ಮಾಡಲು ಸಾಧ್ಯವಿಲ್ಲದೆ ಇದ್ದಲ್ಲಿ ಬೆರಳಚ್ಚು ನೀಡಿ ವೆರಿಫೈ ಮಾಡಲು ಸಾಧ್ಯವಿಲ್ಲ. ನಗರ ಭಾಗದಲ್ಲಿ ಜನಸಂಖ್ಯೆ ಜಾಸ್ತಿ ಇದ್ದರೂ ಸೇವಾಸಿಂಧು ಪೋರ್ಟಲ್​ಗಳಲಲ್ಲಿ ಸೇವೆಯನ್ನು ಹಿಂಪಡೆದ ಕಾರಣ ತಾಲ್ಲೂಕು ಕಚೇರಿ ಎದುರು ಪ್ರತಿ ಸೇವೆಗೂ ಸಾಲುಗಟ್ಟಿ ನಿಲ್ಲುವಂತೆ ಆಗಿದೆ.

ಸೇವಾ ಸಿಂಧು ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದವರಿಗೆ ಮಾತ್ರವೇ ಅಲ್ಲ, ಸಾರ್ವಜನಿಕರಿಗೂ ಇದರಿಂದ ತೊಂದರೆಯಾಗಿದೆ. ಸೇವಾ ಸಿಂಧು ಕೇಂದ್ರಗಳನ್ನು ನಂಬಿ ಜೀವನ ನಡೆಸುತ್ತಿದ್ದ ಎಷ್ಟೋ ಸೇವಾದಾರ ವಹಿವಾಟು ಈಗ ಕುಸಿದಿದೆ. ಲಾಕ್​ಡೌನ್​ನಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಹಣದುಬ್ಬರವೂ ಹೆಚ್ಚಾಗಿದ್ದು, ಸೇವಾ ಕೇಂದ್ರಗಳನ್ನೇ ಬದುಕಿಗೆ ನಂಬಿಕೊಂಡಿದ್ದವರ ಪರಿಸ್ಥಿತಿ ಸಂಕಷ್ಟ ಅನುಭವಿಸುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ; ರಾಜ್ಯದ ಬೇರೆ ಭಾಗಗಳಲ್ಲಿಯೂ ‘ಗ್ರಾಮ ಒನ್’ ಯೋಜನೆ ವಿಸ್ತರಣೆ

ಇದನ್ನೂ ಓದಿ: ಗ್ರಾಮ ಒನ್ ಕೇಂದ್ರ ಉದ್ಘಾಟನೆ; ಒಂದೇ ಸೂರಿನಡಿ ಪ್ರಮುಖ ನಾಗರಿಕ ಸೇವೆಗಳು ಲಭ್ಯ