ಬೆಂಗಳೂರು, (ಆಗಸ್ಟ್ 10): ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ ದಿನ ದಿನಕ್ಕೆ ಬೆಳೆಯುತ್ತಲೇ ಇದೆ. ಇದರ ಜೊತೆಗೆ ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಲೇ ಇವೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಯ ಕಬಂಧ ಬಾಹುಗಳು ದಿನದಿಂದ ದಿನಕ್ಕೆ ಹಬ್ಬುತ್ತಲೇ ಇವೆ. ಇದರಿಂದ ಮಾದಕ ವ್ಯಸನಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಒಂದೆಡೆ ಪೊಲೀಸರು ಡ್ರಗ್ ಪೆಡ್ಲರ್ಗಳನ್ನು ಸೆರೆಯುತ್ತಿದ್ದರೆ, ಮತ್ತೊಂದೆಡೆ ಹೊಸ ಪೆಡ್ಲರ್ಗಳು ಹುಟ್ಟಿಕೊಳ್ಳುತ್ತಿದ್ದಾರೆ. ಡ್ರಗ್, ಜಾಂಗಾ ಸೇರಿದಂತೆ ಮಾದಕ ದ್ರವ್ಯಗಳನ್ನು ಬೇರೆ-ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ತಂದು ಸಪ್ಲೈ ಮಾಡಲಾಗುತ್ತದೆ. ಇದೀಗ ಅಂತದ್ದೇ ಒಂದು ಸಪ್ಲೈ ಮಾಡುತ್ತಿದ್ದ ಜಾಲವನ್ನು ಶೇಷಾದ್ರಿಪುರ ಪೊಲೀಸರು ಪತ್ತೆ ಮಾಡಿ ಸೆರೆ ಹಿಡಿದಿದ್ದಾರೆ.
ಶೇಷಾದ್ರಿಪುರ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ವಿದೇಶಿ ಪ್ರಜೆ ಸೇರಿ 7 ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಆರೋಪಿಗಳಾದ ಸಾಹಿಲ್, ನಾಸಿರ್, ಆದಂ ಖಾನ್, ಸಮೀರ್, ನೈಜೀರಿಯಾ ಮೂಲದ ಹ್ಯಾಪಿನೆಸ್ ಎಂಬ ಮಹಿಳೆ ಸೇರಿ 7 ಜನರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 300 ಗ್ರಾಂ ಎಂಡಿಎಂಎ ಮಾತ್ರೆ ಜಪ್ತಿ ಮಾಡಿಕೊಂಡಿದ್ದಾರೆ. ದೆಹಲಿಯಿಂದ ಡ್ರಗ್ಸ್ ಆಮದು ಮಾಡಿಕೊಳ್ಳುತ್ತಿದ್ದ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಪ್ಲೈ ಮಾಡುತ್ತಿರುವ ಜಾಲವನ್ನು ಪತ್ತೆ ಮಾಡಲು ಪೊಲೀಸರು ಸೂಕ್ಷ್ಮವಾಗಿ ಕಾರ್ಯಚರಣೆ ನಡೆಸುತ್ತಿದ್ದರು. ಕೊನೆಗೆ ಪೆಡ್ಲರ್ಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು, ವಿದ್ಯಾರ್ಥಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದವನನ್ನು ಸೋಲವೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಚಿಕ್ಕಬಾಣಾವರ ರೈಲ್ವೆ ನಿಲ್ದಾಣದ ಬಳಿ ಕೇರಳ ಮೂಲದ ಉನ್ನಿಸುರೇಶ್(24) ಎನ್ನುವಾತನ್ನು ಬಂಧಿಸಿದ್ದಾರೆ. ಬಂಧಿತನ ಬಳಿ ಇದ್ದ 70 ಸಾವಿರ ಮೌಲ್ಯದ MDMA ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ಕೆಆರ್ಎಸ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ರಾಜೀವ್ ನಗರದ ಆರೋಪಿ ಜುಬೇರ್(21) ಎನ್ನುವಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಬಳಿಯಿದ್ದ 9 ಕೆಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದು, ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಆಸೀಫ್ ಗಾಗಿ ಹುಡಾಟ ನಡೆಸಿದ್ದಾರೆ. ದೇವರಾಜ ಠಾಣೆ ಇನ್ಸ್ಪೆಕ್ಟರ್ ಟಿ.ಬಿ.ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಈ ಬ್ಗಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ