ಬೆಂಗಳೂರು: ನನ್ನ ಹುಟ್ಟು ಹಬ್ಬ ನನ್ನ ತಂದೆ-ತಾಯಿಗೆ ಮಾತ್ರವಲ್ಲ, ನನಗೂ ಗೊತ್ತಿಲ್ಲ ಅಂತ ನಿನ್ನೆ (ಆಗಸ್ಟ್ 11) ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಆದರೆ ಶಾಲೆ ದಾಖಲಾತಿ ಪ್ರಕಾರ ಇಂದು (ಆಗಸ್ಟ್ 12) ಸಿದ್ದರಾಮಯ್ಯನವರ ಹುಟ್ಟು ಹಬ್ಬ. ದೊಡ್ಡ ಅಭಿಮಾನ ಬಳಗವನ್ನು ಹೊಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳೆದ ಪರಿ ಅಚ್ಚರಿ ಹುಟ್ಟಿಸುತ್ತದೆ. ಕುರಿ, ಎಮ್ಮೆಗಳನ್ನು ಮೇಯಿಸುತ್ತಿದ್ದ ಸಿದ್ದರಾಮಯ್ಯ ನೇರವಾಗಿ ಐದನೇ ತರಗತಿಗೆ ಸೇರುತ್ತಾರೆ. ಬಡತನದಲ್ಲಿ ಹುಟ್ಟಿದ ಇವರು ಮುಖ್ಯಮಂತ್ರಿಯಾಗಿ ಸ್ಥಾನಕ್ಕೇರಿದ್ದೇ ಒಂದು ರೋಚಕ ಕಥೆ.
ತನ್ನ ನೇರ ನುಡಿಯಿಂದ ಇಷ್ಟವಾಗುವ ಮತ್ತು ಕೆಲವೊಮ್ಮೆ ವಿವಾದಕ್ಕೀಡಾಗುವ ಸಿದ್ದರಾಮಯ್ಯ, ಅದೃಷ್ಟ ನಂಬದ ಅದೃಷ್ಟವಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ಚುನಾವಣೆಯಲ್ಲಿ ಗೆದ್ದಾಗ ಅಧಿಕಾರ ಹಿಡಿಯುತ್ತಾರೆ. ಸೋತಾಗ ಪಕ್ಷದ ಜವಾಬ್ದಾರಿ ವಹಿಸುತ್ತಾರೆ. 1983ರಲ್ಲಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಇವರು, ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದರು. 1985ಕ್ಕೆ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ರೇಷ್ಮೆ ಮತ್ತು ಪಶುಸಂಗೋಪನೆ ಮಂತ್ರಿಯಾಗಿದ್ದರು. ಸಾರಿಗೆ, ಹಣಕಾಸು, ಉಪಮುಖ್ಯಮಂತ್ರಿ, ಅಬಕಾರಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಸಿದ್ದರಾಮಯ್ಯ 2013ರಲ್ಲಿ ಒಂದು ಬಾರಿ ಕರ್ನಾಟಕ ಮುಖ್ಯಮಂತ್ರಿ ಆಗಿದ್ದಾರೆ.
1989ರಲ್ಲಿ ರಾಜಶೇಖರಮೂರ್ತಿ ಮತ್ತು 1999ರಲ್ಲಿ ಆಯರಹಳ್ಳಿ ಗುರುಸ್ವಾಮಿ ಎದುರು ಚಾಮುಂಡೇಶ್ವರಿಯಿಂದ ಸೋತ ನಂತರ ಅವಿಭಜಿತ ವರುಣಾ ಇವರ ಕೈ ಹಿಡಿಯಿತು. ಅದನ್ನು ತಮ್ಮ ಪುತ್ರನಿಗೆ ಬಿಟ್ಟು ಬಾದಾಮಿಯತ್ತ ಮುಖ ಮಾಡುತ್ತಾರೆ. ಚಾಮುಂಡೇಶ್ವರಿಯಲ್ಲಿ ಭಾರೀ ಅಂತರದಲ್ಲಿ ಸೋಲನ್ನು ಅನುಭವಿಸಿದ ಸಿದ್ದರಾಮಯ್ಯ, ಬಾದಾಮಿಯಲ್ಲಿ ಸಾವಿರ ಮತಗಳಿಂದ ಗೆದ್ದು ಬೀಗಿದರು. ಅಲ್ಲದೇ ಜೆಡಿಎಸ್ ತೊರೆದ ಮೇಲೆ ನಡೆದ ಉಪಚುನಾವಣೆಯಲ್ಲಿ ಮಠದ ಅಭ್ಯರ್ಥಿ ಶಿವಬಸಪ್ಪ ಎದುರು 257 ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ.
ಅತೀ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಸಿದ್ದರಾಮಣ್ಣ ಹೆಸರಿನಲ್ಲಿದೆ
ತಾವು ಗೆದ್ದ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಸಿದ್ದರಾಮಯ್ಯ, ಅದೃಷ್ಟವಂತ ರಾಜಕಾರಣಿ ಎಂದರೆ ತಪ್ಪಾಗದು. 1991 ಹಾಸನ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಗೆದ್ದರು. ಸಿದ್ದರಾಮಯ್ಯ ಕೊಪ್ಪಳದಲ್ಲಿ ಸೋತರು. ಅದೊಂದು ತಂತ್ರ, ಮೋಸದ ಮತ ಎಣಿಕೆಯ ಚುನಾವಣೆ ಅಂತ ಧ್ವನಿ ಎದ್ದಿದ್ದವು. ಆಗ ಸಿದ್ದರಾಮಣ್ಣ ಪರವಾಗಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ, ಲೋಕಲ್ ಲೀಡರ್ ರಾಮುಲು ಆಂತರಿಕವಾಗಿ ಬೆಂಬಲಿಸಿದ್ದರು.
1993ರಲ್ಲಿ ಜನತಾದಳದ ಮಹಾಪ್ರಧಾನ ಕಾರ್ಯದರ್ಶಿಯಾಗಿ ದೇವೇಗೌಡರೊಂದಿಗೆ ರಾಜ್ಯ ಸುತ್ತಿ ಸಿದ್ದರಾಮಯ್ಯ ಅಧಿಕಾರ ಹಿಡಿಯುತ್ತಾರೆ. ಅತೀ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಸಿದ್ದರಾಮಣ್ಣ ಹೆಸರಿನಲ್ಲೇ ಇದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಕುರಿಕಾಯುತ್ತಿದ್ದ ಸಿದ್ದು, ಲಕ್ಷಾಂತರ ಕೋಟಿ ಬಜೆಟ್ ಮಂಡಿಸಿದ್ದು ಸಾಮಾನ್ಯ ವಿಷಯವಲ್ಲ.
ಇದನ್ನೂ ಓದಿ
ನನ್ನ ನಿಜವಾದ ಜನ್ಮ ದಿನ ನನಗೆ ಗೊತ್ತಿಲ್ಲ; ನಾನು ಎಂದೂ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ
ಶಿವರಾಜ್ಕುಮಾರ್ ಮನೆ ಮುಂದೆ ನಿಂತು ಮನದ ಮಾತು ಹಂಚಿಕೊಂಡ ಬಿಗ್ ಬಾಸ್ ವಿನ್ನರ್ ಮಂಜು
(Siddaramaiah Birthday From shepherd to CM Of Karnataka Here is the interesting way of Siddaramaiah)