ನನ್ನ ನಿಜವಾದ ಜನ್ಮ ದಿನ ನನಗೆ ಗೊತ್ತಿಲ್ಲ; ನಾನು ಎಂದೂ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ
ನಾವು ಎಷ್ಟು ವರ್ಷ ಇದ್ದೇವೇ ಎಂಬುವುದು ಮುಖ್ಯವಲ್ಲ. ಇರುವಷ್ಟು ದಿನವೂ ಆರೋಗ್ಯವಾಗಿ ಜೀವಿಸಬೇಕು. 2000ರಲ್ಲಿ 2 ಸ್ಟೆಂಟ್ ಹಾಕಿಸಿದ್ದೇನೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಮೈಸೂರು: ನಾನು ಜನಿಸಿದ ನಿಖರ ದಿನಾಂಕ ನನ್ನ ತಂದೆ-ತಾಯಿ ಸೇರಿದಂತೆ ನನಗೂ ಗೊತ್ತಿಲ್ಲ. ಹಾಗಾಗಿ ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರಲಿಲ್ಲ. ಆದರೆ ಶಾಲೆಗೆ ಸೇರಿದಾಗ ನೀಡಿರುವ ಆಗಸ್ಟ್ 12ನ್ನೇ ನನ್ನ ಜನ್ಮ ದಿನವೆಂದುಕೊಂಡಿರುವ ಅಭಿಮಾನಿಗಳು ಹುಟ್ಟು ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ನಾನು ಈಗಲೂ ಗಟ್ಟಿ ಮುಟ್ಟಾಗಿದ್ದೇನೆ. ನಾನು ಮೊದಲು ಸಿಗರೇಟ್ ಸೇದುತ್ತಿದುದರಿಂದ ಹೃದಯ ನಾಳದಲ್ಲಿ ಬ್ಲಾಕ್ ಆಗಿತ್ತು ಪರಿಣಾಮ ನನ್ನ ಹೃದಯಕ್ಕೆ ಸ್ಟಂಟ್ ಅಳವಡಿಸಿದ್ದಾರೆ. ಅದನ್ನು ಹೊರತುಪಡಿಸಿದರೆ ನನಗೆ ಬೇರಾವುದೇ ಗಂಭೀರ ಕಾಯಿಲೆಗಳಿಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಡಯಾಬಿಟಿಸ್ ಬಂದರೆ ಬೇರೆ ಬೇರೆ ಖಾಯಿಲೆಗಳು ಬರುತ್ತವೆ. ನನಗೆ ಡಯಾಬಿಟಿಕ್ ಬಂದರೂ ಎಚ್ಚರಿಕೆ ವಹಿಸಿದ್ದರಿಂದ ನನ್ನ ಆರೋಗ್ಯ ಈಗಲೂ ಉತ್ತಮವಾಗಿದೆ. ನಾವು ಎಷ್ಟು ವರ್ಷ ಇದ್ದೇವೆ ಎಂಬುವುದು ಮುಖ್ಯವಲ್ಲ. ಇರುವಷ್ಟು ದಿನವೂ ಆರೋಗ್ಯವಾಗಿ ಜೀವಿಸಬೇಕು. 2000ರಲ್ಲಿ 2 ಸ್ಟೆಂಟ್ ಹಾಕಿಸಿದ್ದೇನೆ. ನಾನು ಈಗ ಆ್ಯಕ್ಟಿವ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಿಜೆಪಿ ಯಾವತ್ತೂ ಸಾಮಾಜಿಕ ನ್ಯಾಯದ ಪರ ಇರಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಪಕ್ಷದ ವಿರುದ್ಧ ಆರೋಪ ಮಾಡಿದ್ದು, ಬಿಜೆಪಿ ಯಾವತ್ತೂ ಸಾಮಾಜಿಕ ನ್ಯಾಯದ ಪರ ಇರಲ್ಲ. ಬಿಜೆಪಿಯವರು ಯಾವತ್ತೂ ಮೀಸಲಾತಿ ಪರವಾಗಿ ಇಲ್ಲ. ಮುಂದುವರಿದ ಸಮುದಾಯಕ್ಕೂ ಮೀಸಲಾತಿ ಕೊಟ್ಟಿದ್ದಾರೆ. ಬಡವರಿಗೆ ಶೇಕಡಾ 10ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಹೀಗಾಗಿ ಅವರು ಈಗ ಮೀಸಲಾತಿ ವಿರುದ್ಧ ಮಾತನಾಡಲ್ಲ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು ದೇಶದಲ್ಲಿ ಬಿಜೆಪಿ 16 ವರ್ಷಗಳ ಕಾಲ ಆಡಳಿತ ಮಾಡಿದೆ. ಇವರು ಯಾಕೆ ಜಾತಿ ಗಣತಿ ಮಾಡಬಾರದು? ಜಾತಿ ಗಣತಿ ಮಾಡಿದರೆ ಬಡವರು ಯಾರೆಂದು ತಿಳಿಯುತ್ತದೆ. ಆ ನಂತರ ಯೋಜನೆಗಳನ್ನು ರೂಪಿಸಿ ಅವರಿಗೆ ಸಹಾಯ ಮಾಡಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಜಾತಿಗಣತಿ ಬಿಡುಗಡೆ ಮಾಡದ ವಿಚಾರವಾಗಿ ಮಾತನಾಡಿದ ಅವರು, ಒತ್ತಾಯ ಮಾಡುತ್ತಾರೆಂದು ಮೀಸಲಾತಿ ಕೊಡಲು ಸಾಧ್ಯವಿಲ್ಲ. ಈ ಬಗ್ಗೆ ಬಿಜೆಪಿಯವರನ್ನೇ ಕೇಳಬೇಕು. ನಾನು ಅಧಿಕಾರದಲ್ಲಿದ್ದಾಗ ಜಾತಿಗಣತಿ ಸಿದ್ಧವಾಗಿರಲಿಲ್ಲ. ಕುಮಾರಸ್ವಾಮಿ ಕಾಲದಲ್ಲಿ ಜಾತಿಗಣತಿ ಸಿದ್ಧವಾಗಿತ್ತು. ಜಾತಿಗಣತಿ ಬಿಡುಗಡೆ ಬೇಡವೆಂದು ಹೆಚ್ಡಿಕೆ ಹೇಳಿದ್ದರು. ಸಂವಿಧಾನಬದ್ಧವಾಗಿದ್ದಾಗ ವರದಿ ಬಿಡುಗಡೆ ಮಾಡಬೇಕು. ಈಗಿನ ಸರ್ಕಾರ ಜಾತಿಗಣತಿ ವರದಿ ಬಿಡುಗಡೆ ಮಾಡಲಿ. ನಾವು ಅಧಿಕಾರಕ್ಕೆ ಬಂದರೆ ಜಾತಿಗಣತಿ ವರದಿ ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಹೊಸ ಸಂಪುಟದಲ್ಲಿ ಮೈಸೂರು ಮೂಲೆಗುಂಪು; ಸಿದ್ಧರಾಮಯ್ಯ ಪ್ರಭಾವ ತಗ್ಗಿಸುವ ಅವಕಾಶ ಕೈಚೆಲ್ಲಿತೇ ಬಿಜೆಪಿ ಹೈಕಮಾಂಡ್?
Published On - 11:37 am, Wed, 11 August 21