ಬೆಂಗಳೂರು: ದೂರದ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ನಡೆಸುತ್ತಿದ್ದು, BJP ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅದನ್ನು ಪ್ರಸ್ತಾಪಿಸುತ್ತಾ ಯುದ್ಧ ನಿಲ್ಲಿಸುವಂತೆ ಭಾರತವನ್ನ ಉಕ್ರೇನ್ ದೇಶ ಕೇಳಿದೆ. ಉಕ್ರೇನ್ ದೇಶ ನಮ್ಮನ್ನ ಕೇಳಿದ್ದು ನಮ್ಮ ಭಾರತದ ಗೌರವವಾಗಿದೆ. ಭಾರತದ ಪಾಸ್ಪೋರ್ಟ್ಗೆ ಈಗ ಬೆಲೆ ಇದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ಸ್ಥಳೀಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಸಿ.ಟಿ.ರವಿ ಅವರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಈ ಹಿಂದೆ ಅಪ್ಪನಾಣೆ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗಲ್ಲ ಎಂದಿದ್ದರು. ಈಗ ನಾನು ಹೇಳ್ತೇನೆ, ಸಿದ್ದರಾಮಯ್ಯ ಅವರೇ ಅಪ್ಪನಾಣೆ ಮತ್ತೆ ಮುಖ್ಯಮಂತ್ರಿ ಆಗಲ್ಲ ಎಂದು ಹಾಲಿ ಕಾಂಗ್ರೆಸ್ ಬೆಳವಣಿಗೆಗಳ ಬಗ್ಗೆ ವ್ಯಾಖ್ಯಾನಿಸಿದ್ದಾರೆ. ಕಾಂಗ್ರೆಸ್ ಪಕ್ಷದವರು ತಮ್ಮದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಹಾಕಿ ಅದೇ ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡವರು. ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತ ಓನರ್ ಆಗ್ತಾನೆ. ಅದೇ ಜೆಡಿಎಸ್ನಲ್ಲಿ ದೊಡ್ಡಗೌಡರು ಓನರ್, ಕಾಂಗ್ರೆಸ್ಗೆ ಸೋನಿಯಾ ಮತ್ತು ರಾಹುಲ್ ಗಾಂಧಿ ಕಾಂಗ್ರೆಸ್ ಓನರ್ ಎಂದು ವ್ಯಂಗ್ಯವಾಡಿದರು.
ಕೋಲಾರಕ್ಕೆ ಎತ್ತಿನ ಹೊಳೆ ನೀರು ತರ್ತ್ತೇವೆ ಎಂದರು. ಈಗ ಎತ್ತು ಒಂದು ಕಡೆ, ಹೊಳೆ ಒಂದು ಕಡೆ ಆಗಿದೆ. ಯೋಜನೆಯಲ್ಲಿ ಕಾಂಗ್ರೆಸ್ ನವರು ಎತ್ತಿದ್ದಷ್ಟೇ ಬಂತು ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಉದ್ದಕ್ಕೂ ಮೇಕೆ ತಿನ್ನುತ್ತಾ ಪಾದಯಾತ್ರೆ ಮಾಡ್ತಿದೆ. ತಿನ್ನುತ್ತಾ ಜೀವನದುದ್ದಕ್ಕೂ ಪಾದಯಾತ್ರೆ ಮಾಡಬಹುದು. ಮೇಕೆದಾಟಿಗೆ ಅಡ್ಡ ಹಾಕಿದ್ದು ಯಾರು? ಎಂದು ಸಿ.ಟಿ.ರವಿ ಕಡಕಿಯಾಡಿದರು. ತಮಿಳುನಾಡು ಸಿಎಂ ಸ್ಟ್ಯಾಲಿನ್ ಯಾರ ಬೆಂಬಲದಿಂದ ಸಿಎಂ ಆಗಿದ್ದು? ನಮ್ಮವರಾಗಿದ್ರೆ ಕಿವಿ ಹಿಂಡಿ ನೀರು ಬಿಡಿಸ್ತಾ ಇದ್ದೆವು ಎಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಸ್ಟಾಲಿನ್ ಅಡ್ಡಿ ಮಾಡಲ್ಲ ಎಂದು ಅಫಿಡವಿಟ್ ತರುವ ತಾಖತ್ ಕಾಂಗ್ರೆಸ್ನವರಿಗೆ ಇದ್ಯಾ?
ಮೇಕೆದಾಟು ಯೋಜನೆಗೆ M.K.ಸ್ಟಾಲಿನ್ ಅಡ್ಡಿಯಾಗಿದ್ದಾರೆ. M.K.ಸ್ಟಾಲಿನ್ ಅಡ್ಡಿ ಮಾಡಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿಯಿಂದ ಕಾಂಗ್ರೆಸ್ ಅಫಿಡವಿಟ್ ತರಲಿ. ಲೆಟರ್ ಬಂದ್ರೆ ಮೇಕೆದಾಟು ಯೋಜನೆಗೆ ಗುದ್ದಲಿ ಪೂಜೆ ಮಾಡ್ತೇವೆ. ನಾಡಿದ್ದೇ ಸಿದ್ದರಾಮಯ್ಯ ಜೊತೆಯಲ್ಲೇ ಗುದ್ದಲಿ ಪೂಜೆ ಮಾಡ್ತೇವೆ. ತಮಿಳುನಾಡು ಸಿಎಂ ಅವರನ್ನೂ ಕರೆಸಿಯಿಸಿ ನಮ್ಮ ಸಿಎಂರಿಂದ ಪೂಜೆ ಮಾಡಿಸ್ತೆವೆ. ಅಫಿಡವಿಟ್ ತರುವ ತಾಖತ್ ಕಾಂಗ್ರೆಸ್ನವರಿಗೆ ಇದ್ಯಾ? ಎಂದು ಸಿಟಿ ರವಿ ಸವಾಲ ಎಸೆದರು.
ಬಿಜೆಪಿ ದೇಶ ಮೊದಲು ಎನ್ನುವ ಪಕ್ಷ, ದೇಶ ಕೊನೆ ಎನ್ನುವ ಪಕ್ಷವೂ ಇದೆ!
ನಮ್ಮ ಪಾರ್ಟಿ ಜಾತಿ ಆಧಾರದಲ್ಲಿ ಬೆಳೆದಿಲ್ಲ. ನಮ್ಮ ಪಕ್ಷ ನೀತಿ ಆಧಾರದ ಮೇಲೆ ಬೆಳೆದಿದೆ. ನಮ್ಮ ಪಕ್ಷ ದೇಶ ಮೊದಲು ಎನ್ನುವ ಪಕ್ಷ. ಪಕ್ಷ ಬಳಿಕ, ವ್ಯಕ್ತಿ ಕೊನೆ ಎನ್ನುವ ಪಕ್ಷ. ಕೆಲವು ಪಕ್ಷದಲ್ಲಿ ವ್ಯಕ್ತಿ ಮೊದಲು, ಪಕ್ಷ ಬಳಿಕ, ದೇಶ ಕೊನೆ ಎನ್ನುವ ಪಕ್ಷ ಇದೆ. ನಮ್ಮ ಪಕ್ಷದಲ್ಲಿ ಸ್ವಾರ್ಥಕ್ಕೆ ಅವಕಾಶ ಇಲ್ಲ.
ನಮ್ಮಪ್ಪನ ಮಾತು ಕೇಳಿದ್ದಿದ್ರೆ ದೊಡ್ ಗೌಡ್ರು, ಸಣ್ ಗೌಡ್ರುಗೆ ಜೈ ಅನ್ಕೊಂಡು ಇರಬೇಕಿತ್ತು!
ಪಕ್ಷ ಸೇರುವ ವಿಚಾರದಲ್ಲಿ ನಾನು ನಮ್ಮಪ್ಪನ ಮಾತು ಕೇಳಲಿಲ್ಲ. ಬಿಜೆಪಿ ಬೇಡ, ದೇವೇಗೌಡರ ಪಕ್ಷ ಸೇರಿಕೋ ಎಂದಿದ್ದರು ನಮ್ಮಪ್ಪ. ನಾನು ಜೆಡಿಎಸ್ ಸೇರಿದ್ದಿದ್ರೆ ದೊಡ್ ಗೌಡ್ರು, ಸಣ್ ಗೌಡ್ರು, ಮರಿ ಗೌಡ್ರಿಗೆ ಜೈ ಅನ್ಕೊಂಡು ಇರಬೇಕಿತ್ತು! ಎಂದು ಸಿ.ಟಿ.ರವಿ ಲೇವಡಿ ಮಾಡಿದರು. ನಾನು ನಮ್ಮಪ್ಪನ ಮಾತು ಕೇಳಿದ್ದಿದ್ರೆ 2 ಸಲ ಮಿನಿಸ್ಟರ್, 4 ಸಲ ಶಾಸಕ, ಈಗ ಪ್ರಧಾನ ಕಾರ್ಯದರ್ಶಿಯಾಗ್ತಿರ್ಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
Published On - 2:03 pm, Tue, 1 March 22