ಬೆಂಗಳೂರು, ಫೆ.12: ಬಾಲಬ್ರೂಹಿ ಗೆಸ್ಟ್ ಹೌಸ್ನಲ್ಲಿ ಶಾಸಕರಿಗಾಗಿ ನಿರ್ಮಿಸಿದ ಕ್ಲಬ್ ವಿಧಾನಮಂಡಲ ಸಂಸ್ಥೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ಉದ್ಘಾಟಿಸಿದರು. ಬಳಿಕ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti), ಯಾರ ಯಾರ ಕಾಲಕ್ಕೆ ಆಗಬೇಕು ಅನ್ನೋದು ಬರೆದುಕೊಟ್ಟಿರುತ್ತಾರೆ. 2022ರ ಮಾಡಬೇಕಿತ್ತು, ಕಾಲ ಕೂಡಿ ಬಂದಾಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಉದ್ಘಾಟನೆ ಆಗಿದೆ. ನಾವು ಬೆಂಗಳೂರು ಕ್ಲಬ್ಗೆ ಚಪ್ಪಲಿ ಹಾಕಿಕೊಂಡು ಹೋದಾಗ ಬಿಡಲಿಲ್ಲ. ಪೊಲೀಸರ ಜೊತೆ ಜಗಳ ಮಾಡಿ ಹೋಗಿದ್ದೆವು. ಸಂಸದರು, ಶಾಸಕರು, ಮಾಜಿ ಶಾಸಕರು, ಸಚಿವರು ಎಲ್ಲರೂ ಬಳಸಿಕೊಳ್ಳಬಹುದು. ಇಲ್ಲಿ ಸ್ವಲ್ಪ ಎಣ್ಣೆ ಹಾಕಬಹುದು ತೊಂದರೆ ಇಲ್ಲ ಎಂದು ಹಾಸ್ಯ ಚಟಾಕೆ ಹಾರಿಸಿದರು.
ಕ್ಲಬ್ ಉದ್ಘಾಟಿಸಿದ ನಂತರ ಮಾತನಾಡಿದ ಸಿದ್ದರಾಮಯ್ಯ, ಇವತ್ತು ಕರ್ನಾಟಕ ವಿಧಾನಮಂಡಲ ಸಂಸ್ಥೆಯನ್ನ ಬಾಲಬ್ರೂಹಿನಲ್ಲಿ ಉದ್ಘಾಟನೆ ಮಾಡಿದ್ದೇವೆ. ಕಾನ್ಸ್ಟಿಟ್ಯೂನ್ ಕ್ಲಬ್ ರೀತಿಯಲ್ಲಿ ರಾಜ್ಯದಲ್ಲೂ ಒಂದು ಸಂಸ್ಥೆ ಇರಬೇಕು ಎಂಬುದು ಸಚಿವರು, ಶಾಸಕರು, ಮಾಜಿ ಶಾಸಕರು, ಸ್ಪೀಕರ್ಗಳ 20 ವರ್ಷಕ್ಕಿಂತ ಹೆಚ್ಚಿನ ಬೇಡಿಕೆಯಾಗಿತ್ತು. ಬಾಲಬ್ರೂಹಿನಲ್ಲಿ ಮಾಡೋಣ ಅಂತ ಅಂದುಕೊಂಡಿದ್ದೆವು ಎಂದರು.
ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ನಂತೆ ಇಲ್ಲಿನ ಶಾಸಕರಿಗೆ ಕ್ಲಬ್ ಮಾಡಲಾಗಿದೆ. ಇದು ವಿಧಾನಸೌಧ ಮತ್ತು ಶಾಸಕರ ಭವನಕ್ಕೆ ಬಹಳ ಹತ್ತಿರ ಇದೆ. ಕೂತು ಚರ್ಚೆ ಮಾಡಲು ಜಾಗ ಇರಲಿಲ್ಲ. ಸಮಯ ಕಳೆಯಲೂ ಜಾಗ ಇರಲಿಲ್ಲ. ಸಮಯ ಕಳೆಯಲು ಅಂದರೆ ಬೇರೆ ಅರ್ಥ ಕಲ್ಪಿಸಿಕೊಳ್ಳೋದು ಬೇಡ. ಒಳಾಂಗಣ ಕ್ರೀಡೆಗೆ ಅನುಕೂಲ ಆಗಲಿದೆ. ಕರ್ನಾಟಕ ವಿಧಾನ ಮಂಡಲ ಸಂಸ್ಥೆ ಸಭೆ ಕರೆದು ಕ್ಲಬ್ ಮಾಡುವುದಾಗಿ ಚರ್ಚಿಸಿದ್ದರು. ಸರ್ಕಾರ ವಶದಲ್ಲಿದ್ದ ಕಾನ್ಸ್ಟಿಟ್ಯೂಷನ್ ಕ್ಲಬ್ ವಿಧಾನಮಂಡಲಕ್ಕೆ ಕೊಡಲಾಯಿತು. ನಾನು ಮುಖ್ಯಮಂತ್ರಿ ಆಗಿರುವವರೆಗೂ ಇಲ್ಲಿಗೆ ಗೌರವಧ್ಯಕ್ಷನಾಗಿದ್ದೇನೆ. ಎಲ್ಲ ಸದ್ಯದರಿಗೂ ಅಡುಗೆ ರುಚಿಕರವಾಗಿ ಮಾಡಬೇಕು ಅಂತ ಸಲಹೆ ನೀಡಿದರು.
ನಾನು ಯಾವ್ದೋ ಕ್ಲಬ್ಗೆ ಪಂಚೆ ತೊಟ್ಟು ಹೋಗಿದ್ದೆ. ಆ ಕ್ಲಬ್ ಹೆಸರು ಮರೆತು ಹೋಗಿದೆ. ಆ ಕ್ಲಬ್ಗೂ ಡ್ರೆಸ್ ಕೋಡ್ ಮಾಡಿದ್ದರು. ನಾವು ನಾಲ್ಕು ಜನರು ಸೇರಿ ಕ್ಲಬ್ಗೆ ಹೋಗಿದ್ದೆವು. ಗಾಂಧೀಜಿ ಅರಬಟ್ಟೆಯಲ್ಲಿದ್ದರು, ಅವರಿಗೆ ರೌಂಡ್ ಟೇಬಲ್ನಲ್ಲಿ ಕೂರಲು ಅವಕಾಶ ಇತ್ತು. ಆದರೆ ನಮ್ಮನ್ನ ಒಳಗೆ ಹೋಗಲು ಬಿಟ್ಟಿರಲಿಲ್ಲ. ಹೀಗಾಗಿ ಅಂದೇ ನಮಗೂ ಒಂದು ಕ್ಲಬ್ ಬೇಕು ಅಂತ ತೀರ್ಮಾನ ಮಾಡಿದ್ದೆ. ಇವತ್ತು ಪಂಚೆ ತೊಟ್ಟುಕೊಂಡೇ ಕಾರ್ಯಕ್ರಮ ಉದ್ಘಾಟಿಸಿದ್ದೇನೆ ಎಂದು ಸಿದ್ದರಾಮಯ್ಯ ಅವರು ಹಳೇಯ ಘಟನೆಯನ್ನು ನೆನಪಿಸಿಕೊಂಡರು.
ಇದನ್ನ ವಿಧಾನಮಂಡಲ ಸಂಸ್ಥೆಯನ್ನ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಇದು ಪಾರಂಪರಿಕ ಕಟ್ಟಡ, ಸಣ್ಣಪುಟ್ಟ ಬದಲಾವಣೆ ಮಾಡಿದ್ದೇವೆ. ಇಂದಿನಿಂದ ಪ್ರಾರಂಭ ಆಗಲಿದೆ, ಎಲ್ಲ ಶಾಸಕರು, ಮಾಜಿ ಶಾಸಕರು ಸದ್ಬಳಕೆ ಮಾಡಿಕೊಳ್ಳಬೇಕು. ನಾನೂ ಆಗಾಗ ಈ ಕ್ಲಬ್ಗೆ ಬರುತ್ತೇನೆ. ಇದು ಹೆಚ್ಚು ಮಾತನಾಡುವ ಸಮಯ ಅಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಪೀಕರ್ ಯುಟಿ ಖಾದರ್, ಶಾಸಕರ ಆಶಯದಂತೆ ಈ ಕಟ್ಟಡದಲ್ಲಿ ವಿಧಾನ ಮಂಡಲ ಸಂಸ್ಥೆ ಉದ್ಘಾಟನಾ ಆಗಿದೆ. ಈ ಬಾಲಬ್ರೂಹಿ ಕಟ್ಟಡ ಪಾರಂಪರಿಕವಾದ ಕಟ್ಟಡವಾಗಿದ್ದು, ಅದನ್ನ ಹಾಗೇ ಉಳಿಸಿಕೊಂಡು ಸುರ್ಜಿತವಾಗಿ ನಿರ್ಮಿಸಿದ್ದೇವೆ. ಈ ಜಾಗದಲ್ಲಿ ಶಾಸಕರು ಮತ್ತು ಅವರ ಕುಟುಂಬ ಸದಸ್ಯರು ಕೆಲಸಮಯ ಇಲ್ಲಿ ಕಳೆಯಲು ಅವಕಾಶ ಮಾಡಿಕೊಡುತ್ತೇವೆ. ಲೈಬ್ರರಿ, ಕ್ರೀಡಾ ಚುಟುವಟಿಕೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನ ಇಲ್ಲಿ ಕಲ್ಪಿಸುತ್ತೇವೆ ಎಂದರು.
ಪತ್ರಕರ್ತರಿಗೆ ಪ್ರೆಸ್ ಕ್ಲಬ್ ಇದೆ, ಐಎಎಸ್ನವರಿಗೆ ಅವರಿಗೆ ಬೇಕಾದ ಕ್ಲಬ್ ಇದೆ, ಸರ್ಕಾರಿ ನೌಕರರಿಗೂ ಕ್ಲಬ್ ಇದೆ. ಆದರೆ ಶಾಸಕರುಗಳಿಗೆ ಯಾವುದೇ ಸ್ಥಳಗಳು ಇರಲಿಲ್ಲ. ಅದಕ್ಕಾಗಿ ಈ ಕಟ್ಟವನ್ನ ಪಾರಂಪರಿಕ ಕಟ್ಟಡವನ್ನ ಹಾಗೇ ಉಳಿಸಿಕೊಂಡು ನವೀಕರಣ ಮಾಡಲಾಗುತ್ತದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ