
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನ ಪ್ರಭಾವಿ ನಾಯಕ ಸಿದ್ದರಾಮಯ್ಯ(Siddaramaiah), ಸಿಎಂ ಕುರ್ಚಿಯಲ್ಲಿ ಮತ್ತೊಮ್ಮೆ ಕೂರುವ ಕನಸು ಕಾಣ್ತಿದ್ದಾರೆ. ಆದ್ರೆ, ಸಿದ್ದರಾಮಯ್ಯ ಸ್ಪರ್ಧಿಸೋಕೆ ಕ್ಷೇತ್ರ ಮಾತ್ರ ಫೈನಲ್ ಆಗ್ತಿಲ್ಲ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಮಗನಿಗಾಗಿ ವರುಣಾ ಕ್ಷೇತ್ರವನ್ನು ತ್ಯಾಗ ಮಾಡಿ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಇತ್ತ ಸಿದ್ದರಾಮಯ್ಯನವರು ತಮಗೆ ಕೈ ಹಿಡಿದ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಗೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಆದ್ರೆ ಈಗ ಸಿದ್ದರಾಮಯ್ಯ ನಡೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಮಾಜಿ ಸಿಎಂ ಸಿದ್ದರಾಮಯ್ಯನವರು ಸುರಕ್ಷಿತ ಕ್ಷೇತ್ರದ ಬಗ್ಗೆ ತಮ್ಮ ಪರಮಾಪ್ತರ ಬಳಿಯೂ ಗುಟ್ಟುಬಿಟ್ಟು ಕೊಟ್ಟಿಲ್ಲ. ಕೋಲಾರವೋ, ವರುಣಾ ಕ್ಷೇತ್ರವೋ ಎಂಬ ಬಗ್ಗೆ ಎಲ್ಲಿಯೂ ಖಚಿತ ಪಡಿಸಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ. ತಮ್ಮ ಆಪ್ತರ ಜೊತೆ ಸುರಕ್ಷಿತ ಕ್ಷೇತ್ರದ ಬಗ್ಗೆ ಗಹನ ಮಾತುಕತೆ ನಡೆಸುತ್ತಿದ್ದಾರೆ. ಕೋಲಾರ ಜಿಲ್ಲೆಯ ಸಮಸ್ಯೆ ಬಗೆಹರಿಸಿಕೊಂಡು ಬರಲಿ ಎಂದು ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ. ಮುನಿಯಪ್ಪ ಹೇಳಿಕೆ ಬಳಿಕ ಸಿದ್ದು ಆಪ್ತ ಬಳಗ ಸಿದ್ದು ಅವರ ನಿವಾಸಕ್ಕೆ ನಿರಂತರವಾಗಿ ಭೇಟಿ ನೀಡುತ್ತಿದೆ.
ಇದನ್ನೂ ಓದಿ: ಬಲಿ ಕಾ ಬಕ್ರಾ ಮಾಡಲು ಸಿದ್ದರಾಮಯ್ಯರನ್ನು ಕೋಲಾರಕ್ಕೆ ಕರೆತರಲಾಗುತ್ತಿದೆ: ಸಿ ಎಮ್ ಇಬ್ರಾಹಿಂ
ಕಳೆದ ಎರಡ್ಮೂರು ದಿನಗಳಿಂದ ಸಿದ್ದು ಜೊತೆ ಆಪ್ತ ಬಳಗ ಚರ್ಚೆ
ಕೋಲಾರ ಕ್ಷೇತ್ರದ ಸಾಧಕಬಾಧಕಗಳ ಬಗ್ಗೆ ರಹಸ್ಯ ಚರ್ಚೆ ನಡೆಯುತ್ತಿದೆ. ಆದರೆ, ಕೊನೆಯ ಚುನಾವಣೆಯಾಗಿರುವ ಕಾರಣ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಆಪ್ತರು ಸಲಹೆ ನೀಡಿದ್ದಾರೆ. ಕೋಲಾರದಲ್ಲಿ ನಾವಂದುಕೊಂಡಂತೆ ವಾತಾವರಣ ಇಲ್ಲವೆಂದು ಆಪ್ತ ಬಳಗ ಸಿದ್ದರಾಮಯ್ಯರಿಗೆ ಮನದಟ್ಟುಮಾಡಿದ್ದಾರೆ. ಇನ್ನು ಕೆಲವರು ವರುಣಾ ಹಾಗೂ ಕೋಲಾರ ಎರಡೂ ಕ್ಷೇತ್ರಗಳಲ್ಲೂ ಸ್ಪರ್ಧಿಸಿ ಎಂದು ಸಲಹೆ ನೀಡಿದ್ದಾರೆ. ಆದ್ರೆ ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತೇನೆ ಎಂದು ಆಪ್ತರಿಗೆ ಸಿದ್ದರಾಮಯ್ಯ ಹೇಳಿದ್ದಾರೆ. ಅದರ ಹೊರತಾಗಿ ಯಾವ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂಬ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಆಪ್ತರ ಎಲ್ಲಾ ಮಾತುಗಳನ್ನ ಗಂಭೀರವಾಗಿ ಆಲಿಸಿದರೂ ಯಾವುದೇ ಪ್ರತಿಕ್ರಿಯೆ ನೀಡದ ಸಿದ್ದರಾಮಯ್ಯನವರು ಮೌನವಾಗಿದ್ದಾರೆ.
ಕಾಂಗ್ರೆಸ್ ಟಿಕೆಟ್ ಸಲ್ಲಿಸದ ಸಿದ್ದರಾಮಯ್ಯ
ಇನ್ನು ಇದರ ನಡುವೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸಿದ್ದರಾಮಯ್ಯನವರು ಈವರೆಗೂ ಅರ್ಜಿ ಸಲ್ಲಿಸಿಲ್ಲ. ಇದರಿಂದಾಗಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವಿಚಾರ ಸದ್ಯಕ್ಕೆ ಗುಟ್ಟಾಗಿಯೇ ಉಳಿದಿದೆ.
Published On - 11:28 am, Sat, 19 November 22