ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ, ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ: ಹಿಂದಿ ದಿವಸ್​ಗೆ ಸಿದ್ದರಾಮಯ್ಯ ವಿರೋಧ

| Updated By: ಆಯೇಷಾ ಬಾನು

Updated on: Sep 14, 2022 | 12:14 PM

ಹಿಂದಿ ದಿವಸ್ ಆಚರಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವ ಭಾಷೆಯ ಕಲಿಕೆಯನ್ನು ವಿರೋಧಿಸುವುದಿಲ್ಲ. ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ ಎಂದರು.

ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ, ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ: ಹಿಂದಿ ದಿವಸ್​ಗೆ ಸಿದ್ದರಾಮಯ್ಯ ವಿರೋಧ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಬೆಂಗಳೂರು: ಹಿಂದಿ ದಿವಸ್ ಆಚರಣೆಗೆ ರಾಜ್ಯದಲ್ಲಿ ವಿರೋಧಗಳು ಹೆಚ್ಚಾಗುತ್ತಿದೆ. ಸೆಪ್ಟೆಂಬರ್ 14ರಂದು ಹಿಂದಿ ದಿವರ್ ಆಚರಣೆ ಮಾಡಬಾರದೆಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಏರಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.

ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ

ಹಿಂದಿ ದಿವಸ್ ಆಚರಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವ ಭಾಷೆಯ ಕಲಿಕೆಯನ್ನು ವಿರೋಧಿಸುವುದಿಲ್ಲ. ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ. ಕೇಂದ್ರದ ಬಿಜೆಪಿ ಸರ್ಕಾರ ಹಿಂದಿ ದಿವಸ ಆಚರಣೆ ಮಾಡಿ ಹಿಂದಿ ಭಾಷೆ ಹೆಸರಲ್ಲಿ RSS ಹಿಂದುತ್ವ ಹೇರಿಕೆ ಖಂಡಿಸುತ್ತೇನೆ ಎಂದು ಟ್ವಿಟರ್​ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಗೆ ಆದ್ಯತೆ ನೀಡಿ, ಇತರೆ ಭಾಷೆಗೂ ಗೌರವ ಕೊಡಿ

ರಾಜ್ಯದಲ್ಲಿ ಹಿಂದಿ ದಿವಸ ಆಚರಣೆ ಮಾಡುವ ವಿಚಾರಕ್ಕೆ ಬೆಂಗಳೂರಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಯೊಂದು ಭಾಷೆಗೂ ಕೂಡ ಪ್ರಾಮುಖ್ಯತೆ, ಮೌಲ್ಯವಿದೆ. ಬೇರೆಬೇರೆ ಜಾತಿ, ಭಾಷೆ ಇದೆ, ಹಾಗೆ ಹಿಂದಿಗೂ ಮೌಲ್ಯವಿದೆ. ಹಿಂದಿ ರಾಷ್ಟ್ರೀಯ ಭಾಷೆ, ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆ. ಹಿಂದಿ, ಇಂಗ್ಲಿಷ್​ ಭಾಷೆಯನ್ನೂ ಮಕ್ಕಳು ತಿಳಿದುಕೊಳ್ಳಬೇಕು. ಇದನ್ನು ಯಾಕೆ ವಿರೋಧ ಮಾಡ್ತಾರೋ ಗೊತ್ತಿಲ್ಲ. ಕನ್ನಡ ಭಾಷೆಗೆ ಆದ್ಯತೆ ನೀಡಿ, ಇತರೆ ಭಾಷೆಗೂ ಗೌರವ ಕೊಡಿ. ಒಂದು ಭಾಷೆ ದ್ವೇಷಿಸಿ, ನಮ್ಮ ಭಾಷೆ ಗೌರವಿಸುವುದು ಸರಿಯಲ್ಲ. ನಾವು ಭಾರತೀಯರು ಎಲ್ಲಾ ಭಾಷೆಗೂ ಗೌರವ ಕೊಡಬೇಕು. ಕನ್ನಡ ಜತೆಗೆ ಹಿಂದಿ, ಇಂಗ್ಲಿಷ್ ಭಾಷೆಯನ್ನೂ ಕಲಿಯಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಹಿಂದಿ ದಿವಸ್​ಗೆ ಜೆಡಿಎಸ್​​ ಸಂಪೂರ್ಣ ವಿರೋಧಿಸುತ್ತದೆ

ಹಿಂದಿ ದಿವಸ್​ಗೆ ಜೆಡಿಎಸ್​​ ಸಂಪೂರ್ಣ ವಿರೋಧಿಸುತ್ತದೆ ಎಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಹೆಚ್​ಡಿ ಕುಮಾರಸ್ವಾಮಿ ತಿಳಿಸಿದರು. ಕೇಂದ್ರ ಸರ್ಕಾರ, ಕೇಂದ್ರ ಗೃಹ ಸಚಿವರು ಪದೇ ಪದೇ ಹಿಂದಿ ಹೇರುವ ಕುತಂತ್ರದ ಹಿಡನ್ ಅಜೆಂಡಾ. ಇದನ್ನ ವಿರೋಧಿಸಿ ಇಂದು ಪ್ರತಿಭಟನೆ ನಡೆಸುತ್ತೇವೆ. ಹಿಂದಿ ದಿವಸ್‌ಗೆ ನಮ್ಮ ಸಂಪೂರ್ಣ ವಿರೋಧ ಇದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದ ಮೇಲೆ‌ ನಾವೆಲ್ಲಾ ಒಂದು‌ ಕುಟುಂಬದಂತಿದ್ದೇವೆ. ಆದರೆ ದೇಶದ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಗೃಹ ಸಚಿವ ಭಾವನಾತ್ಮಕ‌ ವಿಚಾರಗಳ ಮೂಲಕ ಕೆಣಕುತ್ತಿದ್ದಾರೆ. ಆದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡದ ಕತ್ತು ಇಸುಕುತ್ತಿದ್ದಾರೆ ಎಂದರು.

ನಮ್ಮ ತಾಯಿ, ನಮ್ಮ ನಾಡು, ನಮ್ಮ ಭಾಷೆ. ದಿಲ್ಲಿ ಹಿಂದಿ ಭಾಷೆ, ಹೈಕಮಾಂಡ್ ಗುಲಾಮಗಿರಿ ಇಲ್ಲಿ ನಡೆಯಲ್ಲ. ನಮ್ಮ ಭಾಷೆ ನಮ್ಮ ಗೌರವ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದ್ರು. ಭಾರತ ಜನನಿಯ ತನುಜಾತೆ ಅಂತ ಕುವೆಂಪು ಹಾಡಿದ ನಾಡು ನಮ್ಮದು. ಬಸವರಾಜ ಬೊಮ್ಮಾಯಿ ದುಡ್ಡನ್ನ ತೆಗೆದುಕೊಂಡು ಹಿಂದಿ ಅವ್ವನ ಆಚರಣೆ ಮಾಡಲು ಹೊರಟಿದ್ದಾರೆ. ಬಸವ ಅಂದ್ರೆ ಕನ್ನಡ. ಹಿಂದಿ ಭಾಷೆ ಆಚರಣೆ ಮಾಡೋದ್ರ ವಿರುದ್ಧ ಎಲ್ಲಾ ಜಿಲ್ಲೆಯಲ್ಲಿ ಸತ್ಯಾಗ್ರಹ ಆರಂಭಿಸಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:14 pm, Wed, 14 September 22