ನನ್ನ ಕರೆದಿಲ್ಲ, ನಾನು ಬರಲ್ಲ: ಭಾರತ್ ಜೋಡೋ ಸಭೆಗೆ ತೆರಳಲು ಸಿದ್ದರಾಮಯ್ಯ ನಿರಾಕರಣೆ
‘ನನಗೆ ಭಾರತ್ ಜೋಡೋ ಮೀಟಿಂಗ್ ಹೇಳಿಲ್ಲ, ಕರೆದಿಲ್ಲ ಮಾಡಿಲ್ಲ, ನಾನ್ಯಾಕೆ ಬರಲಿ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು (Congress Party) ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ (Bharath Jodo Yatra) ಪೂರ್ವಭಾವಿ ಸಭೆಗೆ ತೆರಳಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಿರಾಕರಿಸಿದರು. ‘ಸಭೆಗೆ ನನ್ನನ್ನು ಕರೆದಿಲ್ಲ, ಮಾಡಿಲ್ಲ. ಹೀಗಿರುವಾಗ ನಾನ್ಯಾಕೆ ಸಭೆಗೆ ಹೋಗಬೇಕು’ ಎಂದು ಅವರು ಅಸಮಾಧಾನ ಹೊರಹಾಕಿದರು. ನಗರದಲ್ಲಿ ನಿನ್ನೆ (ಸೆ.13) ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಕರೆಯಲಾಗಿತ್ತು. ಈ ವೇಳೆ ಎದುರುಬದುರು ಹಾಲ್ನಲ್ಲಿ ಶಾಸಕಾಂಗ ಸಭೆ ಹಾಗೂ ಭಾರತ್ ಜೋಡೋ ಪಾದಯಾತ್ರೆಗೆ ಮೀಟಿಂಗ್ ಆಯೋಜಿಸಲಾಗಿತ್ತು. ಸಿದ್ದರಾಮಯ್ಯ ಶಾಸಕಾಂಗ ಸಭೆಗೆ ಆಗಮಿಸುವ ವೇಳೆಗೆ ಭಾರತ್ ಜೋಡೊ ಸಭೆಯಲ್ಲಿ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಡಿ.ಕೆ.ಶಿವಕುಮಾರ್ ಕುಳಿತಿದ್ದರು.
ಈ ವೇಳೆ ಸಿದ್ದರಾಮಯ್ಯ ಅವರನ್ನು ಭಾರತ್ ಜೋಡೋ ಪಾದಯಾತ್ರೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಮಾಜಿ ಸಚಿವರ ಸಭೆಗೆ ಆಗಮಿಸುವಂತೆ ಕಾಂಗ್ರೆಸ್ ನಾಯಕರಾದ ಅಜಯ್ ಸಿಂಗ್ ಹಾಗೂ ಸಲೀಂ ಅಹಮದ್ ಆಹ್ವಾನಿಸಿದರು. ಆದರೆ ಸಿದ್ದರಾಮಯ್ಯ ಈ ಆಹ್ವಾನವನ್ನು ನೇರವಾಗಿ ತಿರಸ್ಕರಿಸಿದರು. ‘ನನಗೆ ಭಾರತ್ ಜೋಡೋ ಮೀಟಿಂಗ್ ಹೇಳಿಲ್ಲ, ಕರೆದಿಲ್ಲ ಮಾಡಿಲ್ಲ, ನಾನ್ಯಾಕೆ ಬರಲಿ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸಿದ್ದರಾಮಯ್ಯ ಅವರಿಗೆ ಸಭೆಯ ಬಗ್ಗೆ ಅಜಯ್ ಸಿಂಗ್ ಹಾಗೂ ಸಲೀಂ ಅಹಮದ್ ಸಮಜಾಯಿಷಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ರಾಯಚೂರು ಸಭೆ: ಫ್ಲೆಕ್ಸ್ ವಿವಾದ
ರಾಯಚೂರಿನಲ್ಲಿ ನಡೆದ ಭಾರತ್ ಜೋಡೋ ಪಾದಯಾತ್ರೆ ಪೂರ್ವಭಾವಿ ಸಭೆಗೆಂದು ಅಳವಡಿಸಿದ್ದ ಫ್ಲೆಕ್ಸ್ನಲ್ಲಿ ಸಿದ್ದರಾಮಯ್ಯ ಭಾವಚಿತ್ರ ನಾಪತ್ತೆಯಾಗಿತ್ತು. ಇದು ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಸಿದ್ದರಾಮಯ್ಯ ಅವರು ಗಮನಾರ್ಹ ಪ್ರಮಾಣದಲ್ಲಿ ಬೆಂಬಲಿಗರನ್ನು ಹೊಂದಿರುವ ರಾಯಚೂರಿನಲ್ಲಿ ಗಪ್ಚುಪ್ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರಬಹುದು ಎಂಬ ವಿಶ್ಲೇಷಣೆಗೂ ಇದು ಕಾರಣವಾಗಿದೆ.
ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ತಮ್ಮ ನಿಷ್ಠೆ ಬದಲಿಸಿ ಡಿ.ಕೆ.ಶಿವಕುಮಾರ್ ಪರ ನಿಂತಿರಬಹುದು ಎಂದು ಹೇಳಲಾಗುತ್ತಿದೆ. ‘ಸಿದ್ದರಾಮಯ್ಯ ಸಭೆಗೆ ಬರುವುದಿಲ್ಲ. ಹೀಗಾಗಿ ಅವರ ಭಾವಚಿತ್ರವನ್ನು ಅಳವಡಿಸಿಲ್ಲ’ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಊಹಾಪೋಹಕ್ಕೆ ತೆರೆ ಎಳೆಯಲು ಯತ್ನಿಸಿದರು. ಆದರೆ, ಹರಿಪ್ರಸಾದ್ ಮತ್ತು ಸಲೀಂ ಅಹ್ಮದ್ ಸಹ ಸಭೆಗೆ ಬಂದಿರಲಿಲ್ಲ. ಅವರ ಚಿತ್ರಗಳು ಫ್ಲೆಕ್ಸ್ನಲ್ಲಿದ್ದವು. ಡಿಕೆಶಿ ಕೊಟ್ಟ ಸ್ಪಷ್ಟನೆ ಸಕಾರಣವಲ್ಲ ಎಂಬ ಅನುಮಾನಗಳನ್ನು ಇದು ಹುಟ್ಟುಹಾಕಿತು.
Published On - 9:57 am, Wed, 14 September 22