ಅಧಿವೇಶನದಲ್ಲಿ ಕಾದಾಡುವ ಬಗ್ಗೆ ಶಾಸಕಾಂಗ ಸಭೆಯಲ್ಲಿ ಟಿಪ್ಸ್: ವಿಪಕ್ಷದ ಮೇಲೆ ಇನ್ನಷ್ಟು ಅಗ್ರೆಸ್ಸಿವ್ ಆಗಿ ಅಟ್ಯಾಕ್ ಮಾಡಿ ಎಂದ ಸಿಎಂ ಬೊಮ್ಮಾಯಿ
ಧಿವೇಶನ ಮತ್ತಷ್ಟು ರಂಗೇರಿಸಲು, ಹಾಗೂ ತಮ್ಮ ಶಾಸಕರನ್ನು ಹುರಿದುಂಬಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಶಾಸಕಾಂಗ ಸಭೆ ನಡೆಸಿವೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕೆಲ ಶಾಸಕರು ಗೈರಾಗಿದ್ದು ಗೈರಾದ ಶಾಸಕರ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಗರಂ ಆದ್ರು.
ಬೆಂಗಳೂರು: ಸೋಮವಾರದಿಂದ ವಿಧಾನ ಮಂಡಲ ಅಧಿವೇಶನ ಶುರುವಾಗಿದೆ. ಅಧಿವೇಶನ ಮತ್ತಷ್ಟು ರಂಗೇರಿಸಲು, ಹಾಗೂ ತಮ್ಮ ಶಾಸಕರನ್ನು ಹುರಿದುಂಬಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಶಾಸಕಾಂಗ ಸಭೆ ನಡೆಸಿವೆ. ಮುಂದಿನ ಅಧಿವೇಶನದ ದಿನಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಮುಂದಾಗಿದೆ.
ಸೆ.13ರ ರಾತ್ರಿ ಸುದೀರ್ಘವಾಗಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಿದೆ. ಹಾಗೂ ಭ್ರಷ್ಟಾಚಾರ ವಿಚಾರವನ್ನೇ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಬಿಜೆಪಿ ಭ್ರಷ್ಟಾಚಾರದ ರೇಟ್ ಬೋರ್ಡ್ ಗಳನ್ನು ಕಾಂಗ್ರೆಸ್ ರೆಡಿ ಮಾಡಿದ್ದು ಎಲ್ಲ ಶಾಸಕರಿಗೂ ಮಾಹಿತಿ ನೀಡಲಾಗಿದೆ. ವಿವಿಧ ಇಲಾಖೆಗಳ ನೇಮಕಾತಿ ಅಕ್ರಮದ ಬಗ್ಗೆ ಕಾಂಗ್ರೆಸ್ ಶಾಸಕರು ಗಟ್ಟಿಯಾಗಿ ಧ್ವನಿ ಎತ್ತುವಂತೆ ಸಿದ್ದರಾಮಯ್ಯ ಸೂಚಿಸಿದ್ದು ಸರ್ಕಾರವನ್ನು ಮುಜಿಗರಕ್ಕೀಡು ಮಾಡಲು ನಿರ್ಧರಿಸಲಾಗಿದೆ.
ಗೈರಾದ ಶಾಸಕರ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಗರಂ
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕೆಲ ಶಾಸಕರು ಗೈರಾಗಿದ್ದು ಗೈರಾದ ಶಾಸಕರ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಗರಂ ಆದ್ರು. ಶಾಸಕಾಂಗ ಸಭೆಗೇ ಬಾರದಿದ್ದರೆ ಪಕ್ಷ ಸಂಘಟನೆ ಹೇಗೆ ಸಾಧ್ಯ? ಪಕ್ಷ ಸೂಚಿಸುವ ಎಲ್ಲ ಕಾರ್ಯಕ್ರಮಕ್ಕೆ ತಪ್ಪದೇ ಹಾಜರಿರಬೇಕು. ಭಾರತ್ ಜೋಡೋ ಕಾರ್ಯಕ್ರಮಕ್ಕೆ ಸಂಖ್ಯೆ ಕೊರತೆ ಆಗುವಂತಿಲ್ಲ. ಬಳ್ಳಾರಿ ಸಮಾವೇಶವನ್ನು ಯಶಸ್ಸುಗೊಳಿಸಬೇಕು ಎಂದು ಸಭೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ಖಡಕ್ ವಾರ್ನಿಂಗ್ ಕೊಟ್ಟರು. ಇದನ್ನೂ ಓದಿ: ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಕ್ಷೇತ್ರಾನುದಾನ ನೀಡುವಂತೆ ಸಿಎಂ ಬೊಮ್ಮಾಯಿಗೆ ಶಾಸಕರ ಆಗ್ರಹ
ಹೆಚ್ಚಿನ ಅನುದಾನಕ್ಕೆ ಶಾಸಕರ ಒತ್ತಡ
ಇನ್ನು ಇತ್ತ ಬಿಜೆಪಿ ಕೂಡ ತನ್ನ ಶಾಸಕರನ್ನು ಸಜ್ಜುಗೊಳಿಸಲು ಖಾಸಗಿ ಹೋಟೆಲ್ನಲ್ಲಿ ಶಾಸಕಾಂಗ ಸಭೆ ನಡೆಸಿದೆ. ಶಾಸಕಾಂಗ ಸಭೆಯಲ್ಲಿ ಕೇವಲ ವಿಧಾನಸಭೆ ಅಧಿವೇಶನದ ವಿಚಾರ ಮಾತ್ರ ಅಲ್ಲದೆ ಮುಂಬರುವ ಚುನಾವಣೆ ದೃಷ್ಟಿಯಿಂದ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಹೇಗೆ ತಯಾರಿ ನಡೆಸಬೇಕು ಎಂಬ ಚರ್ಚೆ ಸಮಾಲೋಚನೆ ಸೂಚನೆಗಳನ್ನೂ ನೀಡಲಾಗಿದೆ. ಚುನಾವಣಾ ವರ್ಷವಾಗಿರುವುದರಿಂದ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಶಾಸಕರು ಸಿಎಂ ಮೇಲೆ ಒತ್ತಡ ಹಾಕಿದ್ದಾರೆ. ಆಗ ಶಾಸಕರು ಒಂದು ಕಡೆ, ಪಕ್ಷ ಒಂದು ಕಡೆ ಆಗಬಾರದು. ಎರಡೂ ಕೂಡಾ ಒಟ್ಟಿಗೆ ಒಂದೇ ದಿಕ್ಕಿನಲ್ಲಿ ಹೋಗಬೇಕು. ಕ್ಷೇತ್ರಗಳ ಅನುದಾನ ಅಂತೂ ಬರಲೇಬೇಕು ಎಂದು ಯತ್ನಾಳ್ ಹೇಳಿದ್ರು. ವಿಧಾನಸಭೆಯ ಒಳಗೆ ಪ್ರವಾಹ ಸ್ಥಿತಿಗತಿ ಚರ್ಚೆ ಮುಕ್ತಾಯದ ಬಳಿಕ ಕಾಂಗ್ರೆಸ್ ಭ್ರಷ್ಟಾಚಾರ ಕಾನೂನು ಸುವ್ಯವಸ್ಥೆ ವಿಚಾರ ಚರ್ಚೆಗೆ ಎತ್ತಿಕೊಳ್ಳಲು ನಿರ್ಧರಿಸಿದೆ. ಅದಕ್ಕೆ ಕೌಂಟರ್ ಕೊಡಲು ಬಿಜೆಪಿ ಕೂಡ ಸನ್ನದ್ದವಾಗಿದೆ.
ಸಚಿವ ಸ್ಥಾನದ ಬೇಡಿಕೆಯಿಟ್ಟ ಎಂಎಲ್‌ಸಿ ಆರ್.ಶಂಕರ್
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಂಎಲ್‌ಸಿ ಆರ್.ಶಂಕರ್ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ನನ್ನನ್ನು ಮಂತ್ರಿ ಮಾಡಿ. ರಾಜಕೀಯವಾಗಿ ನಾನು ಕ್ಷೇತ್ರ ಕಳೆದುಕೊಂಡೆ. ಈಗ ಸಂಪುಟ ವಿಸ್ತರಣೆ ಸಹ ಮಾಡ್ತಿಲ್ಲ, ಇನ್ನೆಷ್ಟು ದಿನ ಬೇಕು? ಎಂದಿದ್ದಾರೆ. ಈ ವೇಳೆ ಶಾಸಕರು, ಆರ್.ಶಂಕರ್‌ಗೆ ಸಮಾಧಾನವಾಗಿ ಇರುವಂತೆ ಹೇಳಿದ್ರು. ಈ ವೇಳೆ ನನ್ನ ದುಃಖ ಸಿಎಂ ಬಳಿ ಹೇಳಿಕೊಳ್ತಿದ್ದೇನೆಂದು ಆರ್.ಶಂಕರ್ ಪ್ರತಿಕ್ರಿಯಿಸಿದರು. ಇದು ನನ್ನ ಗಮನದಲ್ಲಿದೆ, ಸೂಕ್ತ ನಿರ್ಧಾರ ಮಾಡುತ್ತೇನೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಮಾಡುತ್ತೇನೆಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಶಾಸಕರಿಗೆ ಸಿಎಂ ಬೊಮ್ಮಾಯಿ ಕಿವಿ ಮಾತು
ಸದನದಲ್ಲಿ ವಿಪಕ್ಷದ ಮೇಲೆ ಇನ್ನಷ್ಟು ಅಗ್ರೆಸ್ಸಿವ್ ಆಗಿ ಅಟ್ಯಾಕ್ ಮಾಡಿ. ನಮ್ಮ ಬಳಿಯೂ ಸಾಕಷ್ಟು ಅಸ್ತ್ರಗಳು ಇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಹಗರಣಗಳ ದಾಖಲೆ ಇವೆ. ಒಂದೊಂದಾಗಿ ಹೊರಬಿಡಬೇಕಾದ ಸಮಯದಲ್ಲಿ ಹೊರಬಿಡುತ್ತೇವೆ. ಕಾಂಗ್ರೆಸ್ ಆಧಾರ ರಹಿತ ಆರೋಪಗಳಿಗೆ ಹೆದರುವ ಅಗತ್ಯವಿಲ್ಲ. ಕಾಂಗ್ರೆಸ್ ಆರೋಪಗಳಿಗೆ ಸದನದಲ್ಲಿಯೇ ಉತ್ತರ ಕೊಡೋಣ. ಪ್ರಧಾನಿ ಇಟ್ಟಿರುವ ವಿಶ್ವಾಸ ಉಳಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಬಜೆಟ್ ಘೋಷಿತ ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಘೋಷಿತ ಯೋಜನೆಗಳ ಆದೇಶ ಕೂಡಲೇ ಹೊರಬೀಳುತ್ತೆ ಎಂದು ಸಿಎಂ ಬೊಮ್ಮಾಯಿ ಶಾಸಕರಿಗೆ ಕಿವಿ ಮಾತು ಹೇಳಿದ್ದಾರೆ. ಇದನ್ನೂ ಓದಿ: ವ್ಯಾಪಕ ಭ್ರಷ್ಟಾಚಾರದಿಂದ ರಾಜ್ಯ ಸರ್ಕಾರ ಗಬ್ಬೆದ್ದು ನಾರುತ್ತಿದೆ, ಜನರ ರಕ್ತ ಹೀರುತ್ತಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ
ಜನಸ್ಪಂದನ ಸಮಾವೇಶ, ಶಾಸಕರ ಅಸಮಾಧಾನ
ಅಧಿವೇಶನ ಮುಗಿದ ಕೂಡಲೇ ವಲಯವಾರು ಮೋರ್ಚಾಗಳ ಸಮಾವೇಶ ನಡೆಸಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಮತ್ತೊಂದೆಡೆ ಸಭೆಯಲ್ಲಿ ದೊಡ್ಡಬಳ್ಳಾಪುರದ ಜನಸ್ಪಂದನ ಸಮಾವೇಶ ವಿಚಾರ ಪ್ರಸ್ತಾಪಿಸಿ ಶಾಸಕರು ಅಸಮಾಧಾನ ಹೊರ ಹಾಕಿದ್ರು. ನಾವೂ ಜನಸ್ಪಂದನ ಸಮಾವೇಶಕ್ಕೆ ಜನರನ್ನು ಕರೆತಂದಿದ್ದೆವು. ಆದರೆ ಇದರ ಕ್ರೆಡಿಟ್ ಮಾತ್ರ ಕೆಲವರಿಗೆ ಹೋಯಿತು. ನಾವು ಜನ ಸೇರಿಸಲು ಬೇಕು, ಕ್ರೆಡಿಟ್ ಮಾತ್ರ ಅವರಿಗಾ? ಇನ್ನು ಮೇಲೆ ನಾವೂ ನಮ್ಮ ನಮ್ಮ ಕ್ಷೇತ್ರಗಳಿಗೆ ಸೀಮಿತವಾಗುತ್ತೇವೆ ಎಂದು ಅಸಮಾಧಾನ ಹೊರ ಹಾಕಿದ್ರು.
ನಾವು 150 ಸೀಟು ಗೆದ್ದೇ ಗೆಲ್ಲುತ್ತೇವೆ
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ. ನಾವು 150 ಸೀಟು ಗೆದ್ದೇ ಗೆಲ್ಲುತ್ತೇವೆಂದು ಸಭೆಯಲ್ಲಿ B.S.ಯಡಿಯೂರಪ್ಪ ತಿಳಿಸಿದ್ರು. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿಕೆಶಿ ಮಾತ್ರ ಓಡಾಡುತ್ತಿದ್ದಾರೆ. ಅವರಿಬ್ಬರ ಓಡಾಟಕ್ಕೆ ನಾವು ವಿಚಲಿತರಾಗಬೇಕಿಲ್ಲ. ನೀವು ಯಾವುದೇ ಕಾರಣಕ್ಕೂ ಭ್ರಮನಿರಸನವಾಗುವುದು ಬೇಡ. ನೀವು ನಿಮ್ಮ ಕ್ಷೇತ್ರಗಳಲ್ಲಿ ವಿಶ್ವಾಸ ಉಳಿಸಿಕೊಳ್ಳಿ. ನೀವು ಯೋಚಿಸುವ 10 ಪಟ್ಟು ಹೆಚ್ಚು ಹೈಕಮಾಂಡ್ ಯೋಚಿಸುತ್ತೆ. ನಾವು ಕೂಡಾ ಯೋಚನೆ ಮಾಡುತ್ತಿರುತ್ತೇವೆ. ಫಲಾನುಭವಿಗಳ ಸಮಾವೇಶ ಹೆಚ್ಚು ನಡೆಸಿ, ನೀವು ಕರೆದಕಡೆ ಬರುವೆ ಎಂದರು.
Published On - 7:15 am, Wed, 14 September 22