ಸಿದ್ದು ಕೈ ಹಿಡಿದು ಓಡಿದ ರಾಹುಲ್​: ಯಾರಾದರೂ ತಡೆಯುವುದಿದ್ದರೆ ತಡೆಯಿರಿ ಎಂದ ರಾಹುಲ್ ಗಾಂಧಿ!

| Updated By: ರಶ್ಮಿ ಕಲ್ಲಕಟ್ಟ

Updated on: Oct 07, 2022 | 7:28 AM

ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ ಕೂಡ ಯುವಕರಂತೆ ಓಡಿದರು. ಸಿದ್ದರಾಮಯ್ಯರ ಫಿಟ್ನೆಸ್​ ನೋಡಿ ರಾಹುಲ್ ಗಾಂಧಿ ಬೆನ್ನುತಟ್ಟಿದರು.

ಸಿದ್ದು ಕೈ ಹಿಡಿದು ಓಡಿದ ರಾಹುಲ್​: ಯಾರಾದರೂ ತಡೆಯುವುದಿದ್ದರೆ ತಡೆಯಿರಿ ಎಂದ ರಾಹುಲ್ ಗಾಂಧಿ!
ಸಿದ್ದರಾಮಯ್ಯ, ರಾಹುಲ್ ಗಾಂಧಿ
Follow us on

ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಭಾರತ್ ಜೋಡೋ (Bharat Jodo Yatra) ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ ಕೂಡ ಯುವಕರಂತೆ ಓಡಿದರು. ಸಿದ್ದರಾಮಯ್ಯರ ಫಿಟ್ನೆಸ್​ ನೋಡಿ ರಾಹುಲ್ ಗಾಂಧಿ ಬೆನ್ನುತಟ್ಟಿದರು. ಸದ್ಯ​ ರಾಹುಲ್ ಜತೆ ಓಡಿದ ವಿಡಿಯೋ ಜೊತೆಗೆ ಸಂದೇಶವನ್ನು ಸಿದ್ದರಾಮಯ್ಯ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ರಾಹುಲ್ ಗಾಂಧಿಯವರ ಆರೋಗ್ಯದ ಗುಟ್ಟು ಅವರ ಆರೋಗ್ಯಕರ ಮನಸ್ಸು. ರಾಹುಲ್ ಜೊತೆ ಹೆಜ್ಜೆ ಹಾಕುತ್ತಾ ನಾನೂ ಯುವಕನಾದೆ. ಭರವಸೆಯ ಕೈಗಳು ಹೀಗೆಯೇ ಕೈ ಹಿಡಿದರೆ, ದಾರಿ ಎಷ್ಟೇ ದುರ್ಗಮವಾಗಿದ್ದರೂ ಗುರಿ ಮುಟ್ಟುವುದು ಖಚಿತ. ನಮ್ಮ ನಾಯಕ‌ ನಮ್ಮ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ. 75 ರ ಹರೆಯದ ಸಿದ್ದರಾಮಯ್ಯ ರಾಹುಲ್ ಗಾಂಧಿ ಕೈ ಹಿಡಿದು ಜೋಶ್​ನಲ್ಲಿ ಓಡಿದನ್ನು ಕಂಡು ಕಾರ್ಯಕರ್ತರು ಹರ್ಷಗೊಂಡರು.

ಸಿದ್ದರಾಮಯ್ಯ ಫೇಸ್‌ಬುಕ್‌ ಪೋಸ್ಟ್‌ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಿ‌ಎಂ ಸ್ಥಾನದ ಗುರಿ ಮುಟ್ಟುವ ಮಾತನಾಡಿದ್ರಾ ಸಿದ್ದರಾಮಯ್ಯ? ಪೋಸ್ಟ್‌ ಹಾಕಿ ಸ್ವಪಕ್ಷೀಯರಿಗೂ ಸಂದೇಶ ನೀಡಿದ್ರಾ ಸಿದ್ದರಾಮಯ್ಯ? ರಾಹುಲ್ ಕೈಹಿಡಿದು ಗುರಿಮುಟ್ಟುವ ಮಾತನಾಡಿದ ಸಿದ್ದರಾಮಯ್ಯ ಹೀಗೆ ಪೋಸ್ಟ್‌ ಬಗ್ಗೆ ಕಾಂಗ್ರೆಸ್‌ ಪಡೆಯಲ್ಲಿಯೇ ಹೊಸ ಚರ್ಚೆಗಳು ಶುರುವಾಗಿವೆ.

ಇನ್ನೂ ಇದೇ ವಿಡಿಯೋವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಮ್ಮ ಫೇಸ್‌ಬುಕ್‌ನಲ್ಲಿಯೂ ಹಂಚಿಕೊಂಡಿದ್ದು,  ಯಾರಾದರೂ ತಡೆಯುವುದಿದ್ದರೆ ತಡೆಯಿರಿ (ಕೋಯಿ ರೋಕ್ ಸಕೇತೋ ರೋಕ್ ಲೋ) ಎಂದು ಸಂದೇಶ ಬರೆದುಕೊಂಡಿದ್ದಾರೆ. ಇದು ರಾಜಕೀಯ ವಿರೋಧಿಗಳಿಗೂ ರಾಹುಲ್‌ ಖಡಕ್ ಸಂದೇಶ ಎನ್ನಲಾಗುತ್ತಿದೆ.

ಭಾರತ್ ಜೋಡೋಗೆ ಬೈ..ಬೈ ಹೇಳಿ ಹೋದ ಕಾಂಗ್ರೆಸ್ ಅಧಿನಾಯಕಿ

ದೇಶದಲ್ಲಿ ಒಗ್ಗಟ್ಟು ಮೂಡಿಸುವ ಅಭಿಲಾಷೆಯೊಂದಿಗೆ ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೋ ಯಾತ್ರೆ ಹೆಸರಿನಲ್ಲಿ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು 20 ದಿನಗಳ ಕಾಲ ಕೇರಳದಲ್ಲಿ ಯಾತ್ರೆ ನಡೆಸಿ ಇದೀಗ ಕರ್ನಾಟಕದಲ್ಲೂ ಮುಂದುವರಿಸಿದ್ದಾರೆ. ಇದಕ್ಕೆ  ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಾಥ್ ನೀಡಿ, ಇದೀಗ ದೆಹಲಿಗೆ ವಾಪಸ್ ಆಗಿದ್ದಾರೆ. ಪುತ್ರ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಇಂದು(ಅ.06) ಸೋನಿಯಾ ಗಾಂಧಿ ಭಾಗವಹಿಸಿದ್ರು. ನಾಯಕರು, ಕಾರ್ಯಕರ್ತರ ನಡುವೆ ಅರ್ಧ ದಿನ ಹೆಜ್ಜೆ ಹಾಕಿ ವಾಪಸ್ ದೆಹಲಿಗೆ ಮರಳಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕರಾಡಿಯಾ ಗ್ರಾಮದಲ್ಲಿ ಭಾರತ್ ಜೋಡೋ ಯಾತ್ರೆಗೆ ಬೈ ಹೇಳಿದ ಸೋನಿಯಾ ಗಾಂಧಿ, ರಸ್ತೆ ಮಾರ್ಗವಾಗಿ ಮೈಸೂರಿಗೆ ವಿಮಾನ ನಿಲ್ದಾಣಕ್ಕೆ ತೆರೆಳಿ ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು.

ನಾಳೆ ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಸಭೆ ಕರೆದ ಸಿದ್ದರಾಮಯ್ಯ

ಎಸ್​​ಟಿ ಮೀಸಲಾತಿ ವಿಚಾರವಾಗಿ ನಾಳೆ ಸರ್ವಪಕ್ಷ ಸಭೆ ಹಿನ್ನೆಲೆ ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಎಸ್​ಟಿ ನಾಯಕರ ಸಭೆ ಕರೆದಿದ್ದಾರೆ. ಸಿಎಂ ನೇತೃತ್ವದ ಸರ್ವಪಕ್ಷ ಸಭೆಗೂ ಮುನ್ನ ತಮ್ಮ ನಿವಾಸದಲ್ಲಿ ಸಭೆ ನಡೆಯಲಿದ್ದು, ಸತೀಶ್ ಜಾರಕಿಹೊಳಿ ಸೇರಿ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಮಾಹಿತಿ ಸಂಗ್ರಹಿಸಿ ಸರ್ವಪಕ್ಷ ಸಭೆಯಲ್ಲಿ ಮಂಡನೆ ಮಾಡಲಿದ್ದಾರೆ. ಸಭೆಗೆ ಜೆಡಿಎಸ್​ನಿಂದ ಹೆಚ್.ಡಿ.ಕುಮಾರಸ್ವಾಮಿ, ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಭಾಗಿಯಾಗಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:16 pm, Thu, 6 October 22