ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಸರಣಿ ಟ್ವೀಟ್ ಮೂಲಕ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್ ಮೂಲಕ ಪ್ರಶ್ನೆಗಳನ್ನು ಹೇಳಿದ್ದಾರೆ. ಹಾಗೂ ಮುಂದಿನ ದಿನಗಳಲ್ಲಿ ನಿಮ್ಮ ಪಕ್ಷ ಬಿಜೆಪಿಯ ಜೊತೆ ಚುನಾವಣಾ ಪೂರ್ವ ಇಲ್ಲವೇ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಲು ಸಿದ್ಧ ಇದ್ದೀರಾ? ಎಂದು ಸವಾಲು ಹಾಕಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಟ್ವೀಟ್ಗಳು
ದೇಶದಲ್ಲಿ ಇಂದು ನಡೆಯುತ್ತಿರುವ ಜಾತ್ಯತೀತತೆ ಮತ್ತು ಕೋಮುವಾದದ ನಡುವಿನ ನಿರ್ಣಾಯಕ ಹೋರಾಟದಲ್ಲಿ ನಾವೆಲ್ಲಿ ನಿಂತಿದ್ದೇವೆ ಎನ್ನುವುದನ್ನು ಜನತೆಗೆ ತಿಳಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ನಿತ್ಯ ನನ್ನ ವಿರುದ್ದ ನಂಜು ಕಾರುತ್ತಿರುವ ಹೆಚ್ಡಿ ಕುಮಾರಸ್ವಾಮಿ ಯವರೇ ನೀವೆಲ್ಲಿ ನಿಂತಿದ್ದೀರಿ? ಎಂದು ಮೊದಲು ಹೇಳಿ. ನಿಮ್ಮದು ಜಾತ್ಯತೀತತೆಗೆ ಬದ್ಧವಾಗಿರುವ ಪಕ್ಷ ಎಂದು ಹೇಳುತ್ತಲೇ ಬಂದಿದ್ದೀರಿ. ಹಾಗಿದ್ದರೆ, ಮುಂದಿನ ದಿನಗಳಲ್ಲಿ ನಿಮ್ಮ ಪಕ್ಷ ಬಿಜೆಪಿಯ ಜೊತೆ ಚುನಾವಣಾ ಪೂರ್ವ ಇಲ್ಲವೇ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಲು ಸಿದ್ಧ ಇದ್ದೀರಾ? ಎಂದು ಸಿದ್ದರಾಮಯ್ಯ, ಹೆಚ್ಡಿ ಕುಮಾರಸ್ವಾಮಿಯವರನ್ನು ಪ್ರಶ್ನೆ ಮಾಡಿದ್ದಾರೆ.
ವಚನಭಂಗದ ನಿಮ್ಮ ಇತಿಹಾಸವನ್ನು ಕಂಡ ನಾಡಿನ ಜನತೆ ಸುಲಭದಲ್ಲಿ ನಿಮ್ಮನ್ನು ನಂಬಲಾರರು. ನಂಬಿಕೆ ಹುಟ್ಟಿಸಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನಿಮ್ಮ ತಂದೆ ಅವರ ಮೇಲೆ ಆಣೆ ಮಾಡಿ ಘೋಷಿಸಲು ಸಿದ್ಧ ಇದ್ದೀರಾ. ಬಿಜೆಪಿ ಜೊತೆ ಎಂದೆಂದೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನೀವು ಘೋಷಿಸಿಬಿಟ್ಟರೆ ನಿಮ್ಮ ಪಕ್ಷ ಬಿಜೆಪಿಯ ‘ಬಿ-ಟೀಮ್’ ಎಂಬ ಆರೋಪವನ್ನು ಕೂಡಾ ಸುಳ್ಳು ಎಂದು ಸಾಬೀತು ಮಾಡಿದಂತಾಗುತ್ತದೆ. ನಿಮ್ಮ ಪಕ್ಷದ ಹೆಸರು ಕೂಡಾ ಅರ್ಥಪೂರ್ಣವಾಗುತ್ತದೆ. ಗೋಮುಖ ವ್ಯಾಘ್ರರೇ ಸುತ್ತ ಕುಣಿದಾಡುತ್ತಿರುವ ಈ ಸಂದರ್ಭದಲ್ಲಿ ಜನ ಪ್ರತಿಯೊಬ್ಬರನ್ನೂ ಸಂಶಯದಿಂದ ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಅಸಲಿ ಮುಖವನ್ನು ಜನರ ಮುಂದೆ ತೆರೆದಿಟ್ಟು ಅವರ ವಿಶ್ವಾಸವನ್ನು ಗಳಿಸಿ, ನಮ್ಮ ಹೋರಾಟದಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕಾಗಿದೆ. ಉಳಿದುದೆಲ್ಲವನ್ನೂ ಪಕ್ಕಕ್ಕಿಟ್ಟು ನನ್ನ ವಿರುದ್ಧದ ವೈಯಕ್ತಿಕ ನಿಂದೆ, ವಿಕೃತ ಮನಸ್ಸಿನ ಹಳಹಳಿಕೆ ಮತ್ತು ಸುಳ್ಳುಗಳಿಂದ ಕೂಡಿದ ಅಭಿಯಾನವನ್ನೇ ನೀವು ಮುಂದುವರಿಸುವುದಾದರೆ ಹಾಗೆಯೇ ಮಾಡಿ. ಸಾರ್ವಜನಿಕ ಜೀವನದಲ್ಲಿರುವ ನಮ್ಮನ್ನು – ನಿಮ್ಮನ್ನು ಜನ ನೋಡಿದ್ದಾರೆ. ಅವರು ತೀರ್ಮಾನಿಸುತ್ತಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಉಳಿದುದೆಲ್ಲವನ್ನೂ ಪಕ್ಕಕ್ಕಿಟ್ಟು ನನ್ನ ವಿರುದ್ಧದ ವೈಯಕ್ತಿಕ ನಿಂದೆ, ವಿಕೃತ ಮನಸ್ಸಿನ ಹಳಹಳಿಕೆ ಮತ್ತು ಸುಳ್ಳುಗಳಿಂದ ಕೂಡಿದ ಅಭಿಯಾನವನ್ನೇ ನೀವು ಮುಂದುವರಿಸುವುದಾದರೆ ಹಾಗೆಯೇ ಮಾಡಿ @hd_kumaraswamy ಅವರೆ.
ಸಾರ್ವಜನಿಕ ಜೀವನದಲ್ಲಿರುವ ನಮ್ಮನ್ನು – ನಿಮ್ಮನ್ನು ಜನ ನೋಡಿದ್ದಾರೆ. ಅವರು ತೀರ್ಮಾನಿಸುತ್ತಾರೆ.
6/6— Siddaramaiah (@siddaramaiah) April 19, 2022
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಮೇಜರ್ ಸರ್ಜರಿ; 39 ಐಎಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿ ಸಹಿತ ಪದೋನ್ನತಿ
Published On - 7:05 pm, Tue, 19 April 22