
ಬೆಂಗಳೂರು, ಅಕ್ಟೋಬರ್ 18: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ನಡೆಸಿರುವ ಆರೋಪ ಪ್ರಕರಣ ಸಂಬಂಧ ಪೊಲೀಸರ ತನಿಖೆಯಲ್ಲಿ ಸ್ಟಿಂಗ್ ವಿಡಿಯೋ ಪ್ರಮುಖ ಅಂಶಗಳು ಪತ್ತೆಯಾಗಿಲ್ಲ ಎನ್ನಲಾಗಿದೆ. ವಿಡಿಯೋ ಲಿಂಕ್ಗಳ ಸಮೇತ ಮಾಜಿ ಸಿಎಂ ದೂರು ನೀಡಿದ್ದರು. ಆದರೆ ತನಿಖೆ ವೇಳೆ ಆ ಲಿಂಕ್ ಗಳ ಹಿನ್ನೆಲೆಯ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅಪ್ಲೋಡ್ ಮಾಡಿದವರ್ಯಾರು, ಡಿವೈಸ್ ಯಾವುದು ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಪ್ರಕರಣ ಸಂಬಂಧ ಇದುವರೆಗೆ 15ಕ್ಕೂ ಹೆಚ್ಚು ಜನರನ್ನ ಪೊಲೀಸರು ವಿಚಾರಣೆ ಮಾಡಿದ್ದಾರೆ. ವಿಡಿಯೋ ಮಾಡಿದ್ದು ಯಾರೆಂದು ಗೊತ್ತಾಗಿದೆಯಾದರೂ, ವಿಡಿಯೋ ಎಲ್ಲಿಂದ ಅಪ್ಲೋಡ್ ಆಗಿದೆ ಎಂಬುದಕ್ಕೆ ಸಾಕ್ಷ್ಯ ಸಿಕ್ಕಿಲ್ಲ ಎನ್ನಲಾಗಿದೆ.
ವಿಡಿಯೋ ಭಾರತದಿಂದಲೇ ನಕಲಿ ಐಪಿ ಬಳಸಿ ಅಪ್ಲೋಡ್ ಮಾಡಲಾಗಿದೆಯಾ? ಅಥವಾ ಬೇರೆ ದೇಶದಿಂದಲೇ ಅಪ್ಲೋಡ್ ಮಾಡಲಾಗಿತ್ತಾ ಎಂಬ ಮಾಹಿತಿಯೂ ಇನ್ನೂ ಅಸ್ಪಷ್ಟವಾಗಿದೆ. ವಿಡಿಯೋದಲ್ಲಿಇರುವ ಮತ್ತು ಅದನ್ನು ಮಾಡಿರುವರನ್ನೂ ಪೊಲೀಸರು ವಿಚಾರಣೆ ಮಾಡಿ ಕಳುಹಿಸಿದ್ದಾರೆ. 2022ರಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗಿತ್ತು ಎಂಬುದನ್ನು ಬಿಟ್ಟು ಬೇರೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ ಎನ್ನಲಾಗಿದೆ. ಹೀಗಾಗಿ ಸೈಬರ್ ಕ್ರೈಂ ಪೊಲೀಸರಿಂದ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.
ಇದನ್ನೂ ಓದಿ: 2028ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಶತಃಸಿದ್ಧ, ಆಗ ಇನ್ನೊಂದು ಮುಖ ತೋರಿಸುತ್ತೇನೆ: ಹೆಚ್.ಡಿ. ಕುಮಾರಸ್ವಾಮಿ
ಸಿದ್ದರಾಮಯ್ಯರನ್ನ ಕೆಳಗಿಳಿಸಲು ಡಿ.ಕೆ.ಶಿವಕುಮಾರ್ ಪಿತೂರಿ ನಡೆಸಿದ್ದಾರೆ ಎಂದು ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯನಂಥವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಗೊಂದಲ ಸೃಷ್ಟಿ ಮಾಡಲಾಗಿದೆ. ವ್ಯವಸ್ಥಿತವಾಗಿ ಪಿತೂರಿ ನಡೆಸಿ ಸಿದ್ದರಾಮಯ್ಯರನ್ನು ಕೆಳಗಿಳಿಸಲಾಗಿದ್ದು, ಈ ಎಲ್ಲಾ ವಿಚಾರಗಳನ್ನು ಜನರು ಶಾಂತವಾಗಿ ಗಮನಿಸುತ್ತಿದ್ದಾರೆ ಎಂದವರು ಹೇಳಿದ್ದಾರೆ.
ಸ್ಟಿಂಗ್ ಆಪರೇಷನ್ ಅನ್ನೋದು ರಾಜ್ಯಕ್ಕೆ ಒಂದು ಶಾಪ ಇದ್ದಂತೆ. ಅದರಿಂದ ನಾವು ಹೊರ ಬರಬೇಕಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ಆಗಲಿ. ಯಾರು ತಪ್ಪಿತಸ್ಥರಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಈ ಸ್ಟಿಂಗ್ ಆಪರೇಷನ್ ಮಾಡುವವರನ್ನು ಒದ್ದು ಒಳಗೆ ಹಾಕಬೇಕು. ಯಾರೇ ಇರಲಿ ಅವರನ್ನು ಅರೆಸ್ಟ್ ಮಾಡಬೇಕು ಎಂದು ವಿಜಯಪುರದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.