ಬೆಂಗಳೂರು, (ಜೂನ್ 05): ಕರ್ನಾಟಕದ ವಾಲ್ಮೀಕಿ ನಿಗಮದಲ್ಲಿ ನಡೆದ ಕೋಟ್ಯಾಂತರ ರೂಪಾಯಿ ಹಗರಣದ ಪ್ರಕರಣ (Valmiki corporation multi crore scam) ತೀವ್ರಗೊಂಡಿದೆ. ಈಗಾಗಲೇ ಎಸ್ಐಟಿ, ಇಲಾಖೆಯ ಅಧಿಕಾರಿಗಳನ್ನು ಬಂಧಿಸಿದೆ. ಮತ್ತೊಂದೆಡೆ ಬಿಜೆಪಿ, ಸಚಿವ ನಾಗೇಂದ್ರ ರಾಜೀನಾಮೆಗೆ ಬಿಗಿಪಟ್ಟುಹಿಡಿದಿದೆ. ಇದರ ಮಧ್ಯ ಸಚಿವ ನಾಗೇಂದ್ರ ಆಪ್ತ ಪಿಎ ನೆಕ್ಕುಂಟಿ ನಾಗರಾಜ್ನನ್ನು ಸಹ ಎಸ್ಐಟಿ ಅರೆಸ್ಟ್ ಮಾಡಿದೆ. ಇನ್ನು ಈ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ. ಇದರ ಬೆನ್ನಲ್ಲೇ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಸಚಿವ ನಾಗೇಂದ್ರ (Minister Nagendra) ಅವರನ್ನು ಕರೆಯಿಸಿಕೊಂಡು ಚರ್ಚಿಸಿದ್ದು, ನಾಳೆ(ಜೂನ್ 06) ಸಂಜೆ ವೇಳೆಗೆ ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನಿಡುವ ಎಲ್ಲಾ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಎಲೆಕ್ಷನ್ ಗದ್ದಲ ಮುಗಿದಿದೆ. ಇದೀಗ ಬಿಜೆಪಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟಕ್ಕಿಳಿಯುವ ಎಲ್ಲಾ ಸಾಧ್ಯತೆಗಳಿವೆ. ಅಲ್ಲದೇ ಈ ಪ್ರಕರಣದಲ್ಲಿ ಸ್ವತಃ ಸಿಬಿಐ ಪ್ರವೇಶ ಮಾಡಿ ತನಿಖೆ ಕೈಗೆತ್ತಿಕೊಂಡಿದ್ದು, ಹಲವರಲ್ಲಿ ತಳಮಳ ಶುರುವಾಗಿದೆ. ಹೀಗಾಗಿ ಸರ್ಕಾರಕ್ಕೆ ಮುಜುಗರವಾಗಬಾರದು ಎನ್ನುವ ಮುಂಜಾಗ್ರತಾವಾಗಿ ಸಿಎಂ ಸಿದ್ದರಾಮಯ್ಯ ಅವರು ಸಚಿವ ನಾಗೇಂದ್ರ ಅವರನ್ನು ಕರೆಯಿಸಿಕೊಂಡು ಚರ್ಚಿಸಿದ್ದಾರೆ.
ಇಂದು (ಜೂನ್ 05) ರಾತ್ರಿ ಕಾವೇರಿ ನಿವಾಸಕ್ಕೆ ಕರೆಸಿಕೊಂಡು ಮಹತ್ವದ ಚರ್ಚೆ ಮಾಡಿದ್ದು, ಸಿಬಿಐಗೆ ಪ್ರಕರಣ ವರ್ಗಾವಣೆ ಆಗುತ್ತಿದ್ದಂತೆ ರಾಜೀನಾಮೆ ಪಡೆಯುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರವಾಗಿ ನಾಗೇಂದ್ರ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಅನಿವಾರ್ಯತೆ ಎದುರಾಗಿದ್ದು, ನಾಳೆ (ಜೂನ್ 06) ಮಧ್ಯಾಹ್ನದ ವೇಳೆಗೆ ರಾಜೀನಾಮೆ ನೀಡುವ ಸಾಧ್ಯತೆಗಳಿಗೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನು ನಾಗೇಂದ್ರ ಜೊತೆಗಿನ ಮಾತುಕತೆ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಜಮೀರ್ ಸಹ ಉಪಸ್ಥಿತರಿದ್ದರು. ಈಗಾಗಲೇ ಈ ಪ್ರಕರಣಕ್ಕೆ ಸಿಬಿಐ ಎಂಟ್ರಿಯಾಗಿರುವುದರಿಂದ ನಾಗೇಂದ್ರ ಜೊತೆ ಸಿಎಂ ಚರ್ಚೆ ಮಹತ್ವ ಪಡೆದುಕೊಂಡಿದೆ.
ಈ ನಡುವೆ ಬಿಜೆಪಿ ಸಹ ನಾಗೇಂದ್ರ ರಾಜೀನಾಮೆಗೆ ಹೋರಾಟದ ರೂಪುರೇಷೆ ಸಿದ್ದ ಪಡಿಸುತ್ತಿದೆ. ಈ ಹಿನ್ನೆಲೆ ಸಿಎಂ ನಾಗೇಂದ್ರರನ್ನ ಕರೆಸಿ ಚರ್ಚೆ ಮಾಡಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:21 pm, Wed, 5 June 24