ಬೆಂಗಳೂರು: ಮನೆ ಗೆದ್ದು ಊರು ಗೆಲ್ಲು ಅನ್ನುವ ಮಾತು ರಾಜಕೀಯಕ್ಕೆ ಸೂಕ್ತವಾ? ಮೊದಲು ಕ್ಷೇತ್ರ, ಆಮೇಲೆ ಬೆಂಬಲಿಗರು, ಆಮೇಲೆ ರಾಜ್ಯ. ಆದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ(Siddaramaiah) ಇವು ಮೂರನ್ನೂ ಮಾಡಿ ಗೆಲ್ಲಬೇಕಾದ ಬಹುದೊಡ್ಡ ಜವಾಬ್ದಾರಿ ಹೆಗಲ ಮೇಲಿದೆ. ತಮ್ಮದೊಂದು ಗಟ್ಟಿಯಾದ ಕ್ಷೇತ್ರ ಹುಡುಕಿ ಕೊಳ್ಳಬೇಕು. ಬಳಿಕ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಬೇಕು, ರಾಜ್ಯದ ಚುಕ್ಕಾಣಿ ಯನ್ನೂ ಹಿಡಿಯಬೇಕು. ಇಂಥ ಸವಾಲುಗಳ ಮಧ್ಯೆ ಸಿದ್ದರಾಮಯ್ಯ ಇನ್ನೂ ಕ್ಷೇತ್ರ ಅಂತಿಮ ಮಾಡಿಕೊಂಡಿಲ್ಲ. ಆದರೆ ಸಿದ್ದರಾಮಯ್ಯ ಆಪ್ತರು ಮಾತ್ರ ಬೆನ್ನಿಗೆ ಬೆಂಕಿ ಬಿದ್ದವರಂತೆ ಸಿದ್ದರಾಮಯ್ಯ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಈ ಬಾರಿಯೂ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.
ಎರಡೂ ಕ್ಷೇತ್ರಗಳು ಸುಭದ್ರ ಕ್ಷೇತ್ರಗಳೇ ಆಗಿರಬೇಕು. ಒಂದು ವರುಣ ಹಾಗೂ ಇನ್ನೊಂದು ಕೋಲಾರ ಕ್ಷೇತ್ರ ಸಿದ್ದರಾಮಯ್ಯ ಕಣ್ಣು ನೆಟ್ಟಂತೆ ಕಾಣುತ್ತಿದೆ. ಅದಕ್ಕೆ ಪೂರಕವಾದ ಬೆಳವಣಿಗೆಗಳೇ ನಡೆದಿದ್ದು ಕೋಲಾರ ಕ್ಷೇತ್ರದ ಬಗ್ಗೆ ಸಿದ್ದರಾಮಯ್ಯ ಮತ್ತವರ ಭಕ್ತ ವೃಂದ ಹೆಚ್ಚು ಆಸಕ್ತಿ ವಹಿಸಿ ಸಿದ್ದತೆಗಳನ್ನು ಆರಂಭಿಸಿದೆ. ಸಿದ್ದರಾಮಯ್ಯಗೆ ಅತ್ಯಾಪ್ತರು ಕೆಲವು ಶಾಸಕರಿದ್ದಾರೆ. ಅಂತ ಕೆಲ ಆಪ್ತರು ಕೋಲಾರ ಹಾಗೂ ವರುಣ ಎರಡೂ ಕ್ಷೇತ್ರಗಳಲ್ಲಿ ಖಾಸಗಿ ಸರ್ವೆ ಮಾಡಿಸಿದ್ದಾರೆ. ಕೆಲವು ಸರ್ವೆಗಳು ಸಿದ್ದರಾಮಯ್ಯಗೆ ಕೋಲಾರ ಓಕೆ ಎನ್ನುವ ವರದಿ ನೀಡಿದರೆ ಇನ್ನೊಂದು ವರದಿ ಪ್ರಕಾರ ಕೋಲಾರ ಕ್ಷೇತ್ರವೂ ಹೇಳಿಕೊಳ್ಳುವಷ್ಟು ಸೇಫ್ ಕ್ಷೇತ್ರ ಅಲ್ಲ ಎನ್ನುವ ಮಾಹಿತಿಯನ್ನು ನೀಡಿವೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ತಾವೇ ಸ್ವತಃ ಕೋಲಾರಕ್ಕೆ ತೆರಳಿ ಅಲ್ಲಿಯೇ ಠಿಖಾಣಿ ಹೂಡಿ ಸ್ಥಳೀಯ ನಾಯಕರ ಸ್ಪಂದನೆ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಂಡು ಬರಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: Siddaramaiah: ಕೋಲಾರದಲ್ಲಿ ರಾಜಕೀಯ ಜೀವನದ ಕೊನೆಯ ಪರೀಕ್ಷೆ ಬರೆಯಲಿರುವ ಸಿದ್ದರಾಮಯ್ಯ?
ಕೋಲಾರ ಮೇಲ್ನೋಟಕ್ಕೆ ಸಿದ್ದರಾಮಯ್ಯಗೆ ಸೂಕ್ತ ಕ್ಷೇತ್ರ ಅಂತ ಅನಿಸಬಹುದು. ಸಿದ್ದರಾಮಯ್ಯಗೆ ಕೋಲಾರಕ್ಕೇ ಬನ್ನಿ ಅಂತ ಕೈ ಹಿಡಿದು ಎಳೆಯುತ್ತಿರುವ ನಾಯಕರ ಕೆಲವು ಸ್ವಾರ್ಥ ರಾಜಕಾರಣವೂ ಇದರ ಹಿಂದಿದೆ. ಕೋಲಾರ, ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಬಿಜೆಪಿ ಕೊಂಚ ಪ್ರಬಲವಾಗುತ್ತಿದೆ. ಜೆಡಿಎಸ್ ಕೂಡ ಕೋಲಾರ ಭಾಗದಿಂದಲೇ ಪಂಚರತ್ನ ಸಮಾವೇಶ ಯಾತ್ರೆಗೆ ಚಾಲನೆ ನೀಡಲು ನಿರ್ಧರಿಸಿದೆ. ಅಲ್ಲಿಗೆ ಜೆಡಿಎಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಪ್ರಬಲವಾಗಿಯೇ ಸಂಘಟನೆ ಕೆಲಸಕ್ಕೆ ಕೈ ಹಾಕಿರುವುದು ಸ್ಪಷ್ಟ. ಕೋಲಾರ ಭಾಗದಲ್ಲಿ ಅಲ್ಪ ಸಂಖ್ಯಾತ, ಹಿಂದುಳಿದ ವರ್ಗ, ದಲಿತ ಸಮುದಾಯದ ಮತಬ್ಯಾಂಕ್ ದೊಡ್ಡ ಪ್ರಮಾಣದಲ್ಲಿದೆ ಎನ್ನುವುದು ಎಷ್ಟು ಸ್ಪಷ್ಟವೋ ಒಕ್ಕಲಿಗ ಸಮುದಾಯ ಕೂಡ ಅಷ್ಟೇ ಪ್ರಬಲವಾಗಿದೆ. ಅಹಿಂದ ಮತ್ತು ಒಕ್ಕಲಿಗ ಎರಡೂ ಮತಗಳ ಕ್ರೋಢೀಕರಣಗೊಂಡರೆ ಸಿದ್ದರಾಮಯ್ಯ ಕೋಲಾರದಲ್ಲಿ ಸಿಕ್ಸ್ ಬಾರಿಸಬಹುದು. ಯಾವುದೇ ಒಂದು ಸಮುದಾಯ ಅಲ್ಲಿ ದೂರ ಉಳಿದರೂ ಸಿದ್ದರಾಮಯ್ಯ ಗೆಲುವು ಮತ್ತೆ ಅನಿಶ್ಚಿತ ಎಂಬಂತಾಗುತ್ತದೆ. ಸಿದ್ದರಾಮಯ್ಯಗೆ ಪೂರ್ಣಪ್ರಮಾಣದಲ್ಲಿ ಒಕ್ಕಲಿಗ ಸಮುದಾಯ ಕೈ ಹಿಡಿದ ಉದಾಹರಣೆ ಇಲ್ಲವೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಬೇಡ, 2005ರ ಆಜುಬಾಜು ನಡೆದ ಚುನಾವಣೆಗಳಿಂದ ಹಿಡಿದು ಇಲ್ಲಿಯ ತನಕ ಒಕ್ಕಲಿಗ ಸಮುದಾಯ, ಲಿಂಗಾಯತ ಸಮುದಾಯ ಸಿದ್ದರಾಮಯ್ಯಗೆ ಶಾಕ್ ಕೊಟ್ಟಿವೆ.
ಮುಂಬರುವ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ನಾಯಕನಿಗೂ ಸಿಎಂ ಆಗುವ ಅವಕಾಶ ಇರುವಾಗ ಒಕ್ಕಲಿಗ ಸಮುದಾಯ ಅಹಿಂದ ಪ್ರತಿಪಾದಕ ಸಿದ್ದರಾಮಯ್ಯಗೆ ಯಾಕೆ ಕೈ ಹಿಡಿಯಬೇಕು ಎಂದು ಯೋಚಿಸಿದರೆ ಅಶ್ಚರ್ಯವೇನಿಲ್ಲ. ಅತ್ತ ಸಿದ್ದರಾಮಯ್ಯ ನಡೆಗಳಿಂದಲೇ ಮುನಿಸಿಕೊಂಡಿರುವ, ಮುನಿಸು ಮರೆತಂತೆ ಆಗಾಗ ವರ್ತಿಸುತ್ತಿರುವ ಕೆ.ಹೆಚ್. ಮುನಿಯಪ್ಪ ಯಾವ ದಿಕ್ಕಿಗೆ ಹೊರಳುತ್ತಾರೊ ಗೊತ್ತಿಲ್ಲ. ಈಗಾಗಲೇ ಮೂರು ಮೂರು ಬಾರಿ ಬಿಜೆಪಿಯ ಸುಧಾಕರ್ ಮನೆಯಲ್ಲಿ ಊಟೋಪಚಾರ ಮಾತುಕತೆ ನಡೆಸಿರುವ ಮುನಿಯಪ್ಪ ದಾರಿ ಇನ್ನೂ ಸ್ಪಷ್ಟವಾಗಿಲ್ಲ. ಸಿದ್ದರಾಮಯ್ಯ ಕೋಲಾರ ಬಂದರೆ ಸುತ್ತಮುತ್ತಲಿನ ಐದಾರು ಕ್ಷೇತ್ರಗಳಿಗೆ ಗೆಲುವು ಸುಲಭ ಎಂಬ ಸ್ವಾರ್ಥದ ಗೆರೆಯೂ ಸುಳಿದಾಡುತ್ತಿದೆ.
ಇದೆಲ್ಲವನ್ನೂ ಗಮನಿಸಿದರೆ ಸಿದ್ದರಾಮಯ್ಯ ದಿಢೀರನೆ ಹೋಗಿ ಕೋಲಾರದಲ್ಲಿ ನಿಲ್ಲುವ ನಿರ್ಧಾರ ಮಾಡಲಾರರೇನೋ. ಆದರೆ ಕೋಲಾರ ಭಾಗದ ನಾಯಕರು ಮಾತ್ರ ಸಿದ್ದರಾಮಯ್ಯರನ್ನು ಬಿಡುತ್ತಿಲ್ಲ. ಸಿದ್ದರಾಮಯ್ಯ ಕ್ಷೇತ್ರ ಯಾವುದಯ್ಯ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗುವುದು ಖಂಡಿತ.