ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವಕರ ಸರಣಿ ಹತ್ಯೆ(Murder) ಹಿನ್ನೆಲೆ ನಾಡಿನ ಯುವಕರಿಗೆ(Youth) ಮಾಜಿ ಸಿಎಂ ಸಿದ್ದರಾಮಯ್ಯ(siddaramaiah) ಸುದೀರ್ಘ ಪತ್ರ ಬರೆದು ಉಪದೇಶ ಮಾಡಿದ್ದಾರೆ. ಮಾದಕ ವಸ್ತುಗಳ ಬಳಕೆಯಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಈ ಕೆಟ್ಟ ಸರ್ಕಾರದಿಂದ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ವರ್ತನೆ ಇನ್ನಷ್ಟು ಹಿಂಸೆಯನ್ನ ಸೃಷ್ಟಿಸುವಂತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದು ಯುವಕರಿಗೆ ಬುದ್ಧಿ ಮಾತು ಹೇಳಿದ್ದಾರೆ.
ರಾಜ್ಯ ಸರ್ಕಾರದ ವರ್ತನೆ ಶಾಂತಿ ಸ್ಥಾಪಿಸುವ ಕಡೆಗೆ ಇಲ್ಲ. ಮುಗ್ಧರ ಹೆಣ ಬಿದ್ದರೆ ರಾಜಕೀಯ ನಡೆಯುತ್ತದೆ ಎಂದು ದುಷ್ಟರು ಭಾವಿಸಿದ್ದಾರೆ. 2018ರ ಬಿಜೆಪಿಯ ಪ್ರಣಾಳಿಕೆಯಲ್ಲಿ ಎನ್ಐಎ ಸ್ಥಾಪಿಸುತ್ತೇವೆಂದು ಆಶ್ವಾಸನೆ ಕೊಟ್ಟಿದ್ರು. ಕ್ರೂರ ಮನಸ್ಥಿತಿಯ CM, ಬೇಜವಾಬ್ಧಾರಿ ನಡವಳಿಕೆಯ ಗೃಹಮಂತ್ರಿ ರಾಜ್ಯ ಕಂಡಿರಲಿಲ್ಲ. ಕೆಟ್ಟ ಕಾರಣಕ್ಕಾಗಿ ಕರಾವಳಿಯು ರಾಜ್ಯಕ್ಕೆ ಮಾದರಿಯಾಗುವುದು ಬೇಡ. 30 ವರ್ಷಗಳ ಹಿಂದೆ ಕರಾವಳಿಯನ್ನು ರಾಜ್ಯ- ದೇಶಗಳ ಜನರು ಪ್ರೀತಿ, ಗೌರವ ಮತ್ತು ಹೆಮ್ಮೆಯ ಭಾವನೆಗಳಿಂದ ನೋಡುತ್ತಿದ್ದರಲ್ಲ, ಅಂಥ ಕರಾವಳಿಯನ್ನು ದಯಮಾಡಿ ನಿರ್ಮಾಣ ಮಾಡಿ.
ದ್ವೇಷ ಹುಟ್ಟಿಸುವ, ಕೊಲೆಗೆ, ಹಿಂಸೆಗೆ ಪ್ರೇರೇಪಿಸುವ ಎಲ್ಲ ರಾಕ್ಷಸರನ್ನು ದೂರ ಮಾಡಿ. ಇದರ ವಿರುದ್ಧ ಧೈರ್ಯವಾಗಿ ನಿಲ್ಲಿ, ಸೌಹಾರ್ದ ಸಭೆಗಳನ್ನು ಪ್ರಾರಂಭಿಸಿ. ಮನೆಯ ಸದಸ್ಯರನ್ನು ಕಳೆದುಕೊಂಡ ಕುಟುಂಬದ ಸದಸ್ಯರುಗಳೆಲ್ಲರೂ ಒಂದಾಗಿ. ಕುಟುಂಬದ ಸದಸ್ಯರುಗಳೆಲ್ಲರೂ ಧರ್ಮಾತೀತವಾಗಿ ಒಂದಾಗಿ ವೇದಿಕೆ ರಚಿಸಿ. ಶಾಂತಿ ಸೌಹಾರ್ದದ ಕರಾವಳಿ ನಿರ್ಮಿಸಲು ಮುಂದಾಗಿ, ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಮುಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಈ ಸಭೆಗಳನ್ನು ಅಧಿಕೃತಗೊಳಿಸುತ್ತೇವೆ. ಈಗ ನಾಡಿನಲ್ಲಿ ಅತ್ಯಂತ ತುರ್ತಾಗಿ ಶಾಂತಿಯುತವಾದ ವಾತಾವರಣ ನಿರ್ಮಾಣವಾಗಬೇಕಾಗಿದೆ. ಅದನ್ನು ಸರ್ವರೂ ಸೇರಿ ಈಡೇರಿಸಬೇಕೆಂದು ತಮ್ಮನ್ನು ಕೈ ಮುಗಿದು ವಿನಂತಿಸುತ್ತೇನೆ ಎಂದು ಸಿದ್ದರಾಮಯ್ಯ ನಾಡಿನ ಯುವಕರಿಗೆ ಪತ್ರ ಬರೆದಿದ್ದಾರೆ.
Published On - 7:48 pm, Fri, 29 July 22