ಬೆಂಗಳೂರು, ಜೂನ್.29: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Development Corporation) ರೀತಿಯೇ ಬಿಬಿಎಂಪಿಯಲ್ಲೂ ಬಹುಕೋಟಿ ಹಗರಣ ನಡೆದಿರುವುದು (BBMP Multi Crore Scam) ಪತ್ತೆಯಾಗಿದೆ. ವಾಲ್ಮೀಕಿ ನಿಗಮದ ಹಗರಣಕ್ಕಿಂತ ಬಾರಿ ದೊಡ್ಡ ಹಗರಣ ಬಿಬಿಎಂಪಿಯಲ್ಲಿ (BBMP) ನಡೆದಿದೆ. ಅಸ್ತಿತ್ವದಲ್ಲೇ ಇಲ್ಲದ ಸೊಸೈಟಿಗಳಿಗೆ ಬಿಬಿಎಂಪಿಯ ಕಲ್ಯಾಣ ಇಲಾಖೆಯಿಂದ ಅಕ್ರಮ ಹಣ ವರ್ಗಾವಣೆ ಆಗಿದೆ. ಅಸ್ತಿತ್ವದಲ್ಲೇ ಇಲ್ಲದ ಸೊಸೈಟಿ, ಸಹಕಾರಿ ಸಂಘ, ಕೋ ಆಪರೇಟಿವ್ ಸೊಸೈಟಿಗಳಿಗೆ ಕೊರೊನಾ ಸಮಯದಲ್ಲಿ ಅಕ್ರಮವಾಗಿ ಕೋಟಿ ಕೋಟಿ ಹಣ ವರ್ಗಾವಣೆ ಮಾಡಲಾಗಿದೆ. ಸದ್ಯ ಅಕ್ರಮ ಹಣ ವರ್ಗಾವಣೆ ಬಗ್ಗೆ ಲೋಕಾಯುಕ್ತಕ್ಕೆ ದೂರು ಬಂದಿದೆ.
ಬಿಬಿಎಂಪಿಯ ಪಶ್ಚಿಮ ವಲಯದಲ್ಲಿ ಈ ಬಹುಕೋಟಿ ಹಗರಣ ನಡೆದಿದೆ. ಒಟ್ಟು 9 ಹಣಕಾಸು ವಿಭಾಗದ ಅಧಿಕಾರಿಗಳ ಮೇಲೆ ದೂರು ದಾಖಲಾಗಿದೆ. ರಾಜ್ಯ ಲೆಕ್ಕ ಪರಿಶೋಧನೆ ಇಲಾಖೆಯಿಂದ ಅಕ್ರಮ ನಡೆಸಿದ ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೇಳಲಾಗಿದ್ದು ಈ ಬಗ್ಗೆ ಲೋಕಾಯುಕ್ತ ತನಿಖೆಗೆ ಪೂರ್ವಾನುಮತಿ ನೀಡಬೇಕು ಅಂತ ಪಾಲಿಕೆಯ ವಿಶೇಷ ಆಯುಕ್ತರಿಗೆ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಸುಮಾರು 102 ಕೋಟಿ ರೂ. ಹಣ ವರ್ಗಾವಣೆ ಆಗಿದೆ ಎಂದು ಲೋಕಾಯುಕ್ತಕ್ಕೆ ದೂರು ಬಂದಿದೆ. ಅಕ್ರಮದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಅಂಗವಿಕಲರು, ವಿಧವೆಯರ ಹೆಸರುಗಳಲ್ಲಿ ಅಕ್ರಮ ಹಣ ದುರ್ಬಳಕೆ ಮಾಡಿರೋದು ಬಯಲಾಗಿದೆ.
ಸುಬೇಶ್, ಎಸ್.ಎಸ್. ದೇವಕಿ, ಬಿ.ಗಾಯತ್ರಿ, ಜಿ.ಎನ್. ಸುಬ್ಬರಾಮಯ್ಯ, ಎಸ್.ವಿ.ಗಿರಿಯಪ್ಪ, ಎನ್.ಗೀತಾ, ಕುಮಾರಿ ಕುಸುಮಾ, ಲಿಂಗಣ್ಣ ಗುಂಡಳ್ಳಿ, ಸತ್ಯಮೂರ್ತಿ. ಇವರು ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಧಿಕಾರಿಗಳು.