ಬೆಂಗಳೂರಿನಲ್ಲಿ ಹೆಚ್ಚಿದ ಹಾವುಗಳ ಕಾಟ; ಹೆಲ್ಮೆಟ್, ಬೈಕ್, ಕಾರ್ಗಳಲ್ಲಿ ಬುಸ್ ನಾಗ ಪ್ರತ್ಯಕ್ಷ
ಚಳಿಗಾಲ ಆರಂಭವಾಗಿದೆ. ಈ ಮಧ್ಯೆ ನಗರದಲ್ಲಿ ಹಾವುಗಳ ಕಾಟ ಜೋರಾಗಿದ್ದು, ಜನರು ಮನೆಯಿಂದ ಹೊರ ಹೋಗಬೇಕಿದ್ದರೆ ಎರಡು ಮೂರು ಬಾರಿ ಕಾರ್, ಹೆಲ್ಮೆಟ್ ಚೆಕ್ ಮಾಡಿಯೇ ಹೋಗುವಂತಾಗಿದೆ. ಚಳಿಗಾಲ ಆರಂಭವಾದಾಗ ಹಾವುಗಳು ಮರಿ ಇಡುತ್ತವೆ. ಹೀಗಾಗಿ ಬೆಚ್ಚನೆಯ ಜಾಗವನ್ನ ಅರಸಿ ಬರುವುದರಿಂದ ಜನರು ಎಚ್ಚರಿಕೆ ವಹಿಸಿ.
ಬೆಂಗಳೂರು, ಜ.04: ರಾಜ್ಯ ರಾಜಧಾನಿ ಬೆಂಗಳೂರು (Bengaluru) ದಿನದಿಂದ ದಿನಕ್ಕೆ ಕಾಂಕ್ರೀಟ್ ಕಾಡಾಗುತ್ತಿದೆ. ಹೀಗಾಗಿ ನಗರದೆಲ್ಲೆಡೆ ಪರಿಸರ ನಾಶವಾಗಿ ಇದೀಗಾ ಎಲ್ಲಿ ನೋಡಿದ್ರು ಬಿಲ್ಡಿಂಗ್ಗಳಷ್ಟೇ ಕಾಣಿಸುತ್ತಿವೆ. ಸಧ್ಯ ವನ್ಯಜೀವಿಗಳು ವಾಸಿಸಬೇಕಾದ ಜಾಗದಲ್ಲಿ ಮನುಷ್ಯರು ವಾಸಿಸುತ್ತಿರುವುದರಿಂದ ಮನುಷ್ಯರಿರುವ ಜಾಗಗಳಿಗೆ ಇದೀಗಾ ವನ್ಯ ಜೀವಿಗಳು ಆಹಾರ ಹುಡುಕಿಕೊಂಡು ಬರುವುದು ಸಾಮಾನ್ಯವಾಗಿದೆ. ಇದೀಗ ಚಳಿಗಾಲ ಆರಂಭವಾಗಿದ್ದು ನಗರದಲ್ಲಿ ಹಾವುಗಳ (Snakes) ಕಾಟ ಜೋರಾಗಿದೆ.
ಇತ್ತೀಚೆಗೆ ಮನೆಯ ಸಂಧಿ ಗೊಂದಿಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಹಾವುಗಳನ್ನ ಹಿಡಿಯೋದಕ್ಕೆ ವನ್ಯ ಸಂರಕ್ಷಣಾ ತಂಡಕ್ಕೆ ಪ್ರತಿದಿನ 50ಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ಹೆಲ್ಮೆಟ್, ಕಾಂಪೌಂಡ್, ಶೂಸ್, ವಾಟಾರ್ ಟ್ಯಾಂಕರ್, ಫುಟ್ ಪಾತ್, ಕಾರಿನ ಸಂಧಿಗೊಂದಿಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಮನೆಯಿಂದ ಹೊರಗೆ ಹೋಗುವ ಜನರು ಒಮ್ಮೆ ಹುಷಾರಾಗಿ ಎಲ್ಲಾವನ್ನ ಚೆಕ್ ಮಾಡಿ ಮನೆಯಿಂದ ಹೊರಹೋಗುವ ಪರಿಸ್ಥಿತಿ ಎದುರಾಗಿದೆ. ಇನ್ನು ನಗರದ ಯಲಹಂಕ, ಆರ್ಆರ್ ನಗರ, ಆರ್ಟಿ ನಗರ, ನಾಗರಭಾವಿ, ಮಹದೇವಪುರ ಭಾಗದಲ್ಲಿ ಪ್ರತಿನಿತ್ಯ ಹಾವಿನ ದರ್ಶನವಾಗುತ್ತಿದ್ದು, ಹಾವುಗಳಿಂದಾಗಿ ಜನರು ಪ್ರತಿದಿನ ರೋಸಿ ಹೋಗುತ್ತಿದ್ದಾರೆ. ಇನ್ನು ಹಾವುಗಳು ಬಂದಾಗ ಬಿಬಿಎಂಪಿ ವನ್ಯಸಂಸಕ್ಷಕರು ಸಹ ಸರಿಯಾದ ಸಮಯಕ್ಕೆ ಸಿಗದೇ ಇರುವುದು ಹಾಗೂ ಕರೆಗಳನ್ನ ಸ್ವೀಕರಿಸದೇ ಇರೋದ್ರಿಂದ ಜನರು ಬಿಬಿಎಂಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಲಿಫ್ಟ್ ಕೆಟ್ಟುನಿಂತು ಅರ್ಧಗಂಟೆ ಸಿಲುಕಿದ ಸಂಸದ ಉಮೇಶ್ ಜಾಧವ್
ಈ ಕುರಿತಾಗಿ ವನ್ಯ ಸಂರಕ್ಷಕರನ್ನ ಪ್ರಶ್ನಿಸಿದ್ದಕ್ಕೆ ಜನರ ಬೇಡಿಕೆಗೆ ತಕ್ಕಷ್ಟು ವನ್ಯ ಸಂರಕ್ಷಕರಿಲ್ಲ. ಸಧ್ಯ ಬೆಂಗಳೂರು ವ್ಯಾಪ್ತಿಯಲ್ಲಿ 7 ಜನರಷ್ಟೇ ಹಾವುಗಳನ್ನ ಹಿಡಿಯುವ ವನ್ಯ ಸಂರಕ್ಷಕರಿದ್ದಾರೆ. ಈ ಹಿಂದೆ ದಿನಕ್ಕೆ 5 ರಿಂದ 15 ಕಾಲ್ ಗಳು ಬರುತ್ತಿದ್ವು. ಇದೀಗಾ 40 ರಿಂದ 50 ಕರೆಗಳು ಬರುತ್ತಿವೆ. ಈ 8 ಝೋನ್ ಗಳಲ್ಲಿ 7 ಜನ ವನ್ಯ ಸಂರಕ್ಷಕರಿಂದ ಎಲ್ಲಾ ಕರೆಗಳನ್ನ ಸ್ವೀಕರಿಸುವುದಕ್ಕೆ ಸಾಧ್ಯ ಆಗ್ತಿಲ್ಲ. ಆದರೂ ಹೆಚ್ಚುವರಿಯಾಗಿ ವನ್ಯ ಸಂರಕ್ಷಕರನ್ನ ಬಿಬಿಎಂಪಿ ನೇಮಕ ಮಾಡಿಕೊಳ್ಳುತ್ತಿಲ್ಲ. ನಮಗೆ ಎಷ್ಟೋ ಕರೆಗಳು ಬರುತ್ತವೆಯೋ ಅಷ್ಟೂ ಕರೆಗಳನ್ನ ಸ್ವೀಕರಿಸುತ್ತಿದ್ದೀವಿ. ಈ ಚಳಿಗಾಲದಲ್ಲಿ ಹಾವುಗಳ ಸಂತಾನೋತ್ಪತ್ತಿ ನಡೆಯುವ ಸಮಯ. ಈ ವೇಳೆ ಹಾವುಗಳು ಬೆಚ್ಚಗಿನ ಜಾಗವನ್ನ ಹುಡುಕುತ್ತವೆ. ಹೀಗಾಗಿ ಹಾವುಗಳ ಸಂಖ್ಯೆ ಹೆಚ್ಚಾಗಿದೆ ಎಂದು ವನ್ಯ ಸಂರಕ್ಷಕರೊಬ್ಬರು ತಿಳಿಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:47 pm, Thu, 4 January 24