ಕರಸೇವೆಯಲ್ಲಿ ಭಾಗಿಯಾಗಿದ್ದೆ ಬಂಧಿಸಿ ಎಂದು ಪ್ರದರ್ಶನ ನಡೆಸಿದ ಬಿಜೆಪಿ ಶಾಸಕ ಸುನೀಲ ಕುಮಾರರನ್ನು ವಶಕ್ಕೆ ಪಡೆದ ಪೊಲೀಸರು
ಸಿಟಿ ರವಿ ಅವರೊಂದಿಗೆ 1992 ರಲ್ಲಿ ಚಿಕ್ಕಮಗಳೂರಿನ ಅಲ್ದೂರಿನಿಂದ ಹೊರಟು ತಾನೂ ಸಹ ಅಯೋಧ್ಯೆ ಕರಸೇವೆಯಲ್ಲಿ ಭಾಗಿಯಾಗಿದ್ದಾಗಿ ಸುನೀಲ ಕುಮಾರ ಹೇಳಿದರು. ಕರಸೇವೆಯಲ್ಲಿ ಭಾಗವಹಿಸಿದವರೆಲ್ಲರನ್ನು ಬಂಧಿಸಬೇಕೆಂಬ ಅಭಿಯಾನವನ್ನು ರಾಜ್ಯಾದ್ಯಂತ ನಡೆಸುತ್ತೇವೆ ಎಂದು ಹೇಳಿದ ಅವರು ಸಿದ್ದರಾಮಯ್ಯ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ಸಹಕಾರ ನೀಡುವ ಬದಲು ವಿರೋಧಿಸುತ್ತಿದೆ ಎಂದರು.
ಬೆಂಗಳೂರು: ನಗರದಲ್ಲಿ ಎರಡು ದಿನಗಳ ಹಿಂದೆ ಮಾಧ್ಯಮ ಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡುವಾಗ ಬಿಜೆಪಿ ಶಾಸಕ ಸುನೀಲ ಕುಮಾರ (Sunil Kumar), ರಾಜ್ಯದ ಕರಸೇವಕರ ಪಟ್ಟಿಯನ್ನು ಕೊಡುತ್ತೇನೆ ಮತ್ತು ನಾನೂ ಸಹ ಕರಸೇವಕ (Karsevak), ಸಿದ್ದರಾಮಯ್ಯನವರಿಗೆ (Siddaramaiah) ತಾಕತ್ತಿದ್ದರೆ ಬಂಧಿಸಲಿ ಎಂದು ಹೇಳಿದ್ದರು. ಇಂದು ಅವರು ಡಿಸೆಂಬರ್ 6, 1992 ರಂದು ಅಯೋಧ್ಯೆಯ ರಾಮಮಂದಿರ ಕರಸೇವೆಯಲ್ಲಿ ನಾನೂ ಭಾಗವಹಿಸಿದ್ದೆ, ನನ್ನನ್ನೂ ಬಂಧಿಸಿ ಎಂದು ಬರೆದ ಪ್ಲೆಕಾರ್ಡ್ ಅನ್ನು ಕೈಯಲ್ಲಿ ಹಿಡಿದು, ನಗರರ ಸದಾಶಿವನಗರ ಪೊಲೀಸ್ ಠಾಣೆಯ ಮುಂದೆ ಬಂದು ಕುಳಿತರು. ಸ್ವಲ್ಪ ಸಮಯದ ಬಳಿಕ ಸ್ಥಳಕ್ಕೆ ಆಗಮಿಸುವ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡುವಾಗಲೇ ಪೊಲೀಸರು ಸುನೀಲ ಕುಮಾರ ಅವರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ಯುವುದನ್ನು ದೃಶ್ಯಗಳಲ್ಲಿ ನೋಡಬಹುದು. ಸಿದ್ದರಾಮಯ್ಯ ಸರ್ಕಾರ ರಾಮ ವಿರೋಧಿ ಮತ್ತು ಹಿಂದೂ ವಿರೋಧಿ ಸರ್ಕಾರ, ರಾಜ್ಯದ ರಾಮಭಕ್ತರನ್ನು, ಕರಸೇವಕರನ್ನು ಅದು ಹತ್ತಿಕ್ಕುತ್ತಿದೆ ಎಂದು ಬಿಜೆಪಿ ಶಾಸಕ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ