ಬೆಂಗಳೂರು: ಬಿಜೆಪಿಯಲ್ಲಿ(BJP) ನಿರೀಕ್ಷಿತ ಸ್ಥಾನ ಸಿಗದೆ ಅಸಮಾಧಾನಗೊಂಡ ನಾಲ್ವರು ಸಚಿವರು(Ministers) ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಟಿವಿ9 ಡಿಜಿಟಲ್ಗೆ ಕಾಂಗ್ರೆಸ್(Congress) ಮೂಲಗಳು ಮಾಹಿತಿ ನೀಡಿವೆ. ಈಗಾಗಲೇ ಅಸಮಾಧಾನಿತ ಸಚಿವರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ಅದರಲ್ಲೂ ಬೆಂಗಳೂರು, ಉತ್ತರ ಕರ್ನಾಟಕದವರೆ ಹೆಚ್ಚಾಗಿ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷದ ಕಡೆಗೆ ಒಲವು ತೋರಿದ್ದಾರೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ. ಕೆಲ ತಿಂಗಳಿನಿಂದಲೂ ಕೈ ನಾಯಕರ ಜೊತೆ ಮಾತುಕತೆ ನಡೆಸುತ್ತಿರುವ ಸಚಿವರಿಗೆ ಜೂನ್, ಜುಲೈ ಬಳಿಕ ಅಖಾಡಕ್ಕಿಳಿಯಲು ಸೂಚನೆ ನೀಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕೈ ನಾಯಕರನ್ನು ಅದರಲ್ಲೂ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದಾರೆ. ಸಚಿವ ಸ್ಥಾನ ವಂಚಿತ ಬಿಜೆಪಿ ಶಾಸಕರು ಸಹ ಹೊಸ ವರ್ಷಕ್ಕೆ ಶುಭ ಕೋರುವ ನೆಪದಲ್ಲಿ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಲೇ ಯಾವುದೇ ನಿರ್ಧಾರ ಬೇಡ. ಜೂನ್, ಜುಲೈ ಬಳಿಕ ಈ ಬಗ್ಗೆ ಯೋಚನೆ ಮಾಡೋಣ. ಪಕ್ಷದ ವೇದಿಕೆಯಲ್ಲೂ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಹೈಕಮಾಂಡ್ನಿಂದ್ಲೂ ಡಿಕೆಶಿ ಈ ಬಗ್ಗೆ ಅನುಮತಿ ಪಡೆಯಲಿದ್ದಾರೆ.
ಈಗಾಗಲೇ ಪಕ್ಷಕ್ಕೆ ಯಾರೇ ಬಂದರು ಸ್ವಾಗತ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಡಿ. ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಸದ್ಯ ರಾಜಕೀಯ ಬೆಳವಣಿಗೆಯನ್ನು ಹತ್ತಿರದಿಂದ ಕಾಂಗ್ರೆಸ್ ನಾಯಕರು ಗಮನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಮನಗರ: ಸಿದ್ದರಾಮಯ್ಯ ಹೇಳಿಕೆಯ ಬಗ್ಗೆ ನಾನು ಮಾತನಾಡುವುದಿಲ್ಲ: ಡಿ.ಕೆ.ಶಿವಕುಮಾರ್
ಬಿಜೆಪಿ, ಜೆಡಿಎಸ್ ಶಾಸಕರು ಸಂಪರ್ಕದಲ್ಲಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆಯ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಬಗ್ಗೆ ಯತ್ನಾಳ್ರನ್ನು ಕೇಳಿದರೆ ಅವರಿಗೆ ಎಲ್ಲಾ ಪಟ್ಟಿ ಗೊತ್ತಿದೆ. ಅವರೆಲ್ಲ ಸೇರಿ ಒಂದು ಸಭೆ ಕೂಡ ಮಾಡಿದ್ದಾರೆ. ಅದನ್ನೆಲ್ಲ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮರಳೆಗವಿ ಮಠದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಬಿಜೆಪಿ, ಜೆಡಿಎಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ವಿಪಕ್ಷ ನಾಯಕ ಸಿದ್ದರಾಮಯ್ಯ
ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ಗೆ ಬರುತ್ತಾರೆ. ಬಿಜೆಪಿ, ಜೆಡಿಎಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಆದರೆ ನನ್ನ ಸಂಪರ್ಕದಲ್ಲಿರುವವರ ಬಗ್ಗೆ ಬಹಿರಂಗಪಡಿಸಲ್ಲ ಅಂತ ಬಾದಾಮಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ವಲಸಿಗರು ಕಾಂಗ್ರೆಸ್ಗೆ ವಾಪಸಾಗ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ನಮ್ಮ ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇರಬೇಕು. ಕಂಡಿಷನ್ ಹಾಕದೆ ಯಾರೇ ಬಂದರೂ ಸ್ವಾಗತವಿದೆ. ಪಕ್ಷದ ಸಿದ್ಧಾಂತ, ನಾಯಕತ್ವವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.
ಸಚಿವರಿಂದ ಜನರ ಸಮಸ್ಯೆ ಬಗೆಹರಿಯಲ್ಲ:
ಜಿಲ್ಲಾ ಉಸ್ತುವಾರಿ ಸಚಿವರಿಂದ ಜನರ ಸಮಸ್ಯೆ ಬಗೆಹರಿಯಲ್ಲ. ಉಸ್ತುವಾರಿ ಸಚಿವರಾಗಿದ್ದವರು ಅವರ ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ. ಜಿಲ್ಲಾ ಉಸ್ತುವಾರಿಗಳ ಮಾತನ್ನು ಯಾರೂ ಕೇಳುವುದಿಲ್ಲ. ಯಾಕಂದ್ರೆ ಇವರು ಕಮಿಷನ್ ಮೇಲೆ ನಿಂತುಬಿಟ್ಟಿದ್ದಾರೆ. ಹೀಗಾಗಿ ಉಸ್ತುವಾರಿಗಳ ಮಾತನ್ನು ಯಾರೂ ಕೇಳೋದಿಲ್ಲ ಅಂತ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಪಕ್ಷ ಯಾವಾಗಲೂ ಚುನಾವಣೆ ಎದುರಿಸಲು ಸಿದ್ಧ. ಜಿಲ್ಲಾ, ತಾಲೂಕು ಪಂಚಾಯಿತಿ, ವಿಧಾನಸಭೆ ಚುನಾವಣೆಗೂ ರೆಡಿ ಇದೀವಿ. ಪಕ್ಷ, ಕಾರ್ಯಕರ್ತರು ಚುನಾವಣೆ ಎದುರಿಸಲು ತಯಾರಾಗಿದ್ದಾರೆ ಎಂದು ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗಿಲ್ಲ. ಕಡಿಮೆ ಆಗಿದೆ ಎಂದು ಹೇಳಿದವರು ಯಾರು? ಆ ರೀತಿ ಹೇಳಿದ ಸಚಿವರಿಗೆ ಪಾಪ ಮಾಹಿತಿ ಇಲ್ಲ ಎಂದರು.
ಬಾದಾಮಿಯಿಂದ ಸ್ಪರ್ಧಿಸಲು ಬೆಂಬಲಿಗರು ಒತ್ತಾಯಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆಗೆ ಇನ್ನೂ ಒಂದು ಕಾಲು ವರ್ಷ ಇದೆ, ನೋಡೋಣ. ನಾನು ಈಗಲೇ ಏನೂ ಹೇಳಲಾಗಲ್ಲ. 5-6 ಕಡೆ ಚುನಾವಣೆಗೆ ನಿಲ್ಲುವಂತೆ ನನ್ನನ್ನ ಕರೆಯುತ್ತಿದ್ದಾರೆ. ಅವರನ್ನೆಲ್ಲ ಕೇಳಿ ಚುನಾವಣೆ ಹತ್ತಿರ ಬಂದಾಗ ಹೇಳುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ:
ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಆರ್ಪಿಎನ್ ಸಿಂಗ್
ಮಣಿಪುರ ವಿಧಾನಸಭೆ ಚುನಾವಣೆ; 40 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
Published On - 3:28 pm, Tue, 25 January 22