ಬೆಂಗಳೂರು, ಅಕ್ಟೋಬರ್ 17: ಬೆಂಗಳೂರಿನಲ್ಲಿ ಐಟಿ ದಾಳಿ (IT Raid) ವೇಳೆ ಕೋಟ್ಯಂತರ ರೂಪಾಯಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಗುತ್ತಿಗೆದಾರ ಅಂಬಿಕಾಪತಿ ಪುತ್ರ ಪ್ರದೀಪ್ (Pradeep) ಸುದೀರ್ಘ ವಿಚಾರಣೆ ಮುಗಿಸಿ ಮಂಗಳವಾರ ರಾತ್ರಿ ಹೊರಬಂದಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (IT Officials) ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ಮುಗಿಸಿ ಹೊರಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಪ್ರದೀಪ್, ವಿಚಾರಣೆ ವೇಳೆ ಅಧಿಕಾರಿಗಳು ಕೇಳಿದ ದಾಖಲೆ ಒದಗಿಸಿದ್ದೇನೆ ಎಂದು ಹೇಳಿದರು.
ನಮ್ಮ ಮನೆಯಲ್ಲಿ ಪತ್ತೆಯಾದ ಹಣ ಜಮೀನಿಗೆ ಸಂಬಂಧಿಸಿದ್ದು. ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಸ್ನೇಹಿತ ಪ್ರಮೋದ್ಗೂ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಅಕ್ಟೋಬರ್ 21ರಂದು ಪ್ರಮೋದ್ ಸಹ ವಿಚಾರಣೆಗೆ ಬರ್ತಾರೆ. ಐಟಿ ದಾಳಿ ವೇಳೆ ಮನೆಯಲ್ಲಿ 20 ಕೋಟಿ 2 ಲಕ್ಷ ರೂ. ಹಣ ಸಿಕ್ಕಿದೆ ಅಕ್ಟೋಬರ್ 26ರಂದು ನನಗೆ ಮತ್ತೆ ವಿಚಾರಣೆಗೆ ಬರಲು ಸೂಚಿಸಿದ್ದಾರೆ ಎಂದು ಪ್ರದೀಪ್ ತಿಳಿಸಿದರು.
ಗುತ್ತಿಗೆದಾರ ಅಂಬಿಕಾಪತಿ ನಿವಾಸದ ಮೇಲೆ ಅಕ್ಟೋಬರ್ 14ರಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರಿನ ಮಾನ್ಯತಾ ಟೆಕ್ಪಾರ್ಕ್ನಲ್ಲಿರುವ ನಿವಾಸದಲ್ಲಿ ಸುಮಾರು 42 ಗಂಟೆ ಕಾಲ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಇದೇ ವೇಳೆ, ಬರೋಬ್ಬರಿ 40 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಸಿಕ್ಕಿದೆ ಎನ್ನಲಾಗಿತ್ತು. ಇಷ್ಟೇ ಅಲ್ಲದೆ, ಆಸ್ತಿಗೆ ಸಂಬಂಧಿಸಿದ ಕೆಲ ದಾಖಲೆಗಳು ಪತ್ತೆಯಾಗಿದ್ದವು. ಎಲ್ಲವನ್ನೂ ಕ್ರೋಢಿಕರಿಸಿ ಲೆಕ್ಕ ಹಾಕಿ ಜಪ್ತಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಮೆಟ್ರೋ ಕಾರ್ಪ್ ಕಂಪನಿ ಪಾಲುದಾರರಾಗಿರುವ ಪ್ರಮೋದ್, ಪ್ರದೀಪ್ಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಅದರಂತೆ ಪ್ರದೀಪ್ ಅವರು ವಿಚಾರಣೆಗೆ ಹಾಜರಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಗುತ್ತಿಗೆದಾರ ಅಂಬಿಕಾಪತಿ ಸೋದರನ ಮನೆ ಮೇಲೆ ಐಟಿ ದಾಳಿ: ಆರೋಪಿ ಪ್ರದೀಪ್ನನ್ನು ವಶಕ್ಕೆ ಪಡೆದ ಅಧಿಕಾರಿಗಳು
ಬಿಲ್ಡರ್ ಸಂತೋಷ್ ಎಂಬವರ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ, 40 ಕೋಟಿ ರೂಪಾಯಿಗೂ ಹೆಚ್ಚು ಹಣ ಪತ್ತೆಯಾಗಿತ್ತು.
ಐಟಿ ದಾಳಿ ವಿಚಾರ ನಂತರ ರಾಜಕೀಯ ಆಯಾಮವನ್ನೂ ಪಡೆದುಕೊಂಡಿತ್ತು. ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಾಗ್ದಾಳಿ ನಡೆಸಿದ್ದರು. ಆದರೆ, ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ