ಆಡಳಿತ ನಡೆಸೋದು ಅಂದ್ರೆ ಸದನದಲ್ಲಿ ಉತ್ತರ ಹೇಳೋದಷ್ಟೇ ಅಲ್ಲ, ಕೆಲಸ ಮಾಡಿ ತೋರಿಸಿ: ಸಚಿವರಿಗೆ ತಿವಿದ ಸ್ಪೀಕರ್ ಕಾಗೇರಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 21, 2022 | 3:06 PM

ನೀವು ಅವರಿಗೆ ಕೆಲಸನೂ ಕೊಡಲ್ಲ, ಸರ್ಟಿಫಿಕೇಟ್ ಇಟ್ಕೊಂಡು ಕೂತಿದ್ದೀರಿ ಎಂದು ಸ್ಪೀಕರ್ ಕಾಗೇರಿ ಆಕ್ಷೇಪ ವ್ಯಕ್ತಪಡಿಸಿದರು.

ಆಡಳಿತ ನಡೆಸೋದು ಅಂದ್ರೆ ಸದನದಲ್ಲಿ ಉತ್ತರ ಹೇಳೋದಷ್ಟೇ ಅಲ್ಲ, ಕೆಲಸ ಮಾಡಿ ತೋರಿಸಿ: ಸಚಿವರಿಗೆ ತಿವಿದ ಸ್ಪೀಕರ್ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ
Follow us on

ಬೆಂಗಳೂರು: ತೋಟಗಾರಿಕೆ ಇಲಾಖೆ ಕಾರ್ಯವೈಖರಿಗೆ ಬಗ್ಗೆ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು. ಉದ್ಯೋಗಕ್ಕೆ ಆಯ್ಕೆಯಾಗಿರುವವರ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಬೇಕು. ಇಲಾಖೆಯು ಅಭ್ಯರ್ಥಿಗಳಿಂದ ಮೂಲ ಅಂಕಪಟ್ಟಿ, ಪ್ರಮಾಣಪತ್ರಗಳನ್ನು ಪಡೆದುಕೊಂಡಿರುವುದರಿಂದ ಮಕ್ಕಳಿಗೆ ತೊಂದರೆಯಾಗಿದೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಸಚಿವರ ಮುನಿರತ್ನ, ‘ಆಕ್ಷೇಪಣೆಗೆ ಅವಕಾಶ ಕೊಟ್ಟಿದ್ದೇವೆ. 25 ಆಕ್ಷೇಪಣೆ ಬಂದಿವೆ. ಮೂಲ ದಾಖಲೆಗಳಿಗೆ ಕನ್​ಫರ್ಮೇಶನ್ ಕೊಟ್ಟಿದ್ದೇವೆ’ ಎಂದರು. ಈ ಮಾತಿನಿಂದ ಸಿಟ್ಟಿಗೆದ್ದ ಸ್ಪೀಕರ್ ಕಾಗೇರಿ, ‘ಏನ್ರೀ ಹೇಳ್ತೀರಿ, ನೀವು ಅವರಿಗೆ ಕೆಲಸನೂ ಕೊಡಲ್ಲ, ಸರ್ಟಿಫಿಕೇಟ್ ಇಟ್ಕೊಂಡು ಕೂತಿದ್ದೀರಿ. ನಿಮ್ಮ ಅಧಿಕಾರಿಗಳ ಜೊತೆಗೆ ನಾನೂ ಮಾತನಾಡಿ ನೋಡಿದ್ದೇನೆ. ಕೇಳಿಕೇಳಿ ಸಾಕಾಗಿ ಹೋಗಿದೆ. ಆಡಳಿತ ಅಂದ್ರೆ ಉತ್ತರ ಕೊಡೋದಷ್ಟೇ ಅಲ್ಲ, ನಿರ್ಣಯ ಕಾಣಿಸಬೇಕಿದೆ. ಒಂದು ತಿಂಗಳು ಅಂತ ಹೇಳಿದ್ದೀರಿ. ನಾವು ನಂಬ್ತೀವಿ’ ಎಂದರು.

ಮುನಿರತ್ನ ಸಹ ಬೇಸರದಿಂದಲೇ, ‘ಒಂದು ತಿಂಗಳು ಅಂತ ಕೇಳಿದ್ದೀನಿ. ಅವಕಾಶ ಕೊಡಿ, ಮಾಡಿ ತೋರಿಸ್ತೀನಿ’ ಎಂದರು. ನಂತರ ತೋಟಗಾರಿಕೆ ಇಲಾಖೆಯ ಭೂಮಿ ಭೂಮಿ ಬೇರೆಯವರ ಸ್ವಾಧೀನದಲ್ಲಿ ಇರುವ ವಿಚಾರ ಚರ್ಚೆಗೆ ಬಂತು. ಸರ್ಕಾರಿ ಭೂಮಿ ಏಕಿರಬೇಕು? ನೀವೇಕೆ ವಾಪಸ್ ಪಡೆಯುತ್ತಿಲ್ಲ. ಸಚಿವರು ಇಚ್ಛಾಶಕ್ತಿ ಪ್ರದರ್ಶಿಸಿದರೆ ಎಲ್ಲವೂ ಸರಿಯಾಗುತ್ತೆ. ಆಡಳಿತ ಅಂದ್ರೆ ಸದನದಲ್ಲಿ ಉತ್ತರ ಕೊಡುವುದಷ್ಟೇ ಅಲ್ಲ. ಕೆಲಸ ಮಾಡಿ ತೋರಿಸಬೇಕು’ ಎಂದು ಏರಿದ ಧ್ವನಿಯಲ್ಲಿ ಹೇಳಿದರು.

ವಿಜಯಪುರದಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ ಭೂಮಿಯು ‘ಬರಗಾಲ ನಿರ್ವಹಣಾ ಸಂಸ್ಥೆ’ ಎಂಬ ಖಾಸಗಿ ಸಂಸ್ಥೆಯ ಅಡಿಯಲ್ಲಿದೆ. ಸುಮಾರು‌ ನೂರು ವರ್ಷಗಳಿಂದ ಭೂಮಿಯು ಖಾಸಗಿ ಸಂಸ್ಥೆ ಬಳಿಯಿದೆ. ಇನ್ನೂ ಸರ್ಕಾರದ ವಶಕ್ಕೆ ತೆಗೆದುಕೊಂಡಿಲ್ಲ ಎಂದರು. ಶಾಸಕ ಯಶವಂತರಾಯಗೌಡ ಕೇಳಿದ ಪ್ರಶ್ನೆಗೆ ಪೂರಕವಾಗಿ ಮಾತನಾಡಿದ ಸ್ಪೀಕರ್, ‘ಕೂಡಲೇ ಕಲ್ಬುರ್ಗಿ ಹೈಕೋರ್ಟ್​ನಲ್ಲಿರುವ ಕೇಸ್ ಬಗ್ಗೆ ಕ್ರಮ ತೆಗೆದುಕೊಳ್ಳಿ. ಕಾನೂನು ಸಚಿವರ ಜೊತೆ ಕುಳಿತು ಮಾತನಾಡಿ. ಭೂಮಿಯನ್ನು ಸರ್ಕಾರದ ವಶಕ್ಕೆ ತಗೆದುಕೊಳ್ಳುವ ವ್ಯವಸ್ಥೆ ಮಾಡಿ’ ಎಂದು ತಾಕತು ಮಾಡಿದರು. ‘ಒಂದು ತಿಂಗಳು ಸಮಯಕೊಡಿ, ಸರಿಪಡಿಸುತ್ತೇವೆ’ ಎಂದು ಸಚಿವ ಮುನಿರತ್ನ ಭರವಸೆ ನೀಡಿದರು.

ಕರಾವಳಿಗೆ ಇಎಸ್​ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು

ಬೆಂಗಳೂರು ನಗರದಲ್ಲಿ ಇಎಸ್​ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇದೆ. ಮಂಗಳೂರು, ಉಡುಪಿ ಭಾಗದಲ್ಲಿ ಇಂತಹ ಆಸ್ಪತ್ರೆ ಇಲ್ಲ. ಕರಾವಳಿ ಭಾಗದಲ್ಲಿಯೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಬೇಕು ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಮನವಿ ಮಾಡಿದರು. ಖಾದರ್ ಮನವಿಗೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16 ಹೈಟೆಕ್​ ಆಸ್ಪತ್ರೆಗಳ ಜತೆ ಚಿಕಿತ್ಸೆಗಾಗಿ ಒಪ್ಪಂದ ಮಾಡಿಕೊಂಡಿದ್ದೇವೆ. ಕಾರ್ಮಿಕರಿಗೆ ಯಾವುದೇ ತೊಂದರೆ ಆಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ಬಸ್ ಸಮಸ್ಯೆ

ಭಾಲ್ಕಿ ಕ್ಷೇತ್ರದಲ್ಲಿ ಸರ್ಕಾರಿ ಬಸ್ ಸಮಸ್ಯೆ ಕುರಿತಂತೆ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಪ್ರಶ್ನೆ ಕೇಳಿದರು. ನಂತರ ಶಾಲಾ ಮಕ್ಕಳಿಗೆ ಆಗುತ್ತಿರುವ ಬಸ್ ಸಮಸ್ಯೆ ಬಗ್ಗೆ ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಒಗ್ಗೂಡಿ ಧ್ವನಿ ಎತ್ತಿದರು. ‘ಹೊಸದಾಗಿ ಯಾವುದೇ ಬಸ್​ಗಳನ್ನು ಖರೀದಿ ಮಾಡಿಲ್ಲ. ಹೆಚ್ಚು ಓಡದ ಬಸ್​ಗಳನ್ನು ಅಗತ್ಯವಿರುವ ಡಿಪೊಗಳಿಗೆ ಕಳಿಸುತ್ತೇವೆ. ಸಿಬ್ಬಂದಿ ವರ್ಗಾವಣೆ ಮತ್ತು ಬಸ್ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಸರ್ಕಾರದ ಪರವಾಗಿ ಶ್ರೀರಾಮುಲು ಭರವಸೆ ನೀಡಿದರು.

Published On - 3:05 pm, Wed, 21 September 22