ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆ ಭೀತಿ ಕಾಡುತ್ತಿದೆ. ಅದರಲ್ಲಿಯೂ ರಾಜ್ಯ ರಾಜಧಾನಿ ಬೆಂಗಳೂರು ಉಳಿದೆಡೆಗಿಂತ ತುಸು ಹೆಚ್ಚೇ ಅಪಾಯದಲ್ಲಿದೆ. ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆ ಹಿನ್ನಲೆ ಇಂದು (ಆಗಸ್ಟ್ 14) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ಏರ್ಪಡಿಸಿದ್ದು, ಕೊರೊನಾ ನಿಯಂತ್ರಣಕ್ಕೆ ಏನೆಲ್ಲಾ ನಿಯಮಾವಳಿಗಳು ಅಗತ್ಯ ಎಂದು ತಿಳಿಯಲು ತಜ್ಞರ ಅಭಿಪ್ರಾಯ ಕೇಳಲಿದ್ದಾರೆ. ಬೆಂಗಳೂರಿನಲ್ಲಿ ಮಕ್ಕಳಿಗೆ ಸೋಂಕು ಹಬ್ಬುತ್ತಿರುವ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಆತಂಕ ಎದುರಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮೂರನೇ ಅಲೆ ನಿಶ್ಚಿತ ಎನ್ನಲಾಗುತ್ತಿದೆ. ಹೀಗಾಗಿ ಏರಿಕೆಯಾಗುತ್ತಿರುವ ಸೋಂಕನ್ನು ಈಗಿನಿಂದಲೇ ಕಟ್ಟಿಹಾಕಲು ಸರ್ಕಾರ ಹೆಣಗಾಡುತ್ತಿದ್ದು, ಹಂತ ಹಂತವಾಗಿ ಕೊರೊನಾ ನಿಯಂತ್ರಣಕ್ಕೆ ಮುಂದಾಗುತ್ತಿದೆ.
ಆದರೆ, ಈ ಬಾರಿ ಏಕಾಏಕಿ ಲಾಕ್‌ಡೌನ್ (Karnataka Lockdown) ಮಾಡದಿರಲು ಸರ್ಕಾರ ನಿರ್ಧರಿಸಿದಂತೆ ಕಾಣುತ್ತಿದ್ದು, ಹಂತ ಹಂತವಾಗಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಂಡು ಪರಿಸ್ಥಿತಿ ಮೀತಿ ಮೀರುವಂತಿದ್ದಾಗ ಲಾಕ್‌ಡೌನ್ (Lockdown) ಹೇರುವ ಸಾಧ್ಯತೆ ಇದೆ. ಸದ್ಯ ಬೆಂಗಳೂರಿನಲ್ಲಿ (Bengaluru) ಪ್ರತಿನಿತ್ಯ ಪತ್ತೆಯಾಗುವ ಸೋಂಕಿತರ ಪ್ರಮಾಣ 350ರಿಂದ450ರ ಆಸುಪಾಸಿನಲ್ಲಿದ್ದು, ಅದು ಎರಡು ಸಾವಿರಕ್ಕೆ ಏರಿಕೆಯಾದಲ್ಲಿ 7 ದಿನ ಲಾಕ್‌ಡೌನ್ ಜಾರಿಯಾಗುವುದು ಬಹುತೇಕ ಖಚಿತವಾಗಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣ (Corona Positivity Rate) ಶೇ. 0.57ರಷ್ಟು ಇದ್ದು, ಪ್ರತಿದಿನ 350 ರಿಂದ 450 ಜನ ಸೋಂಕಿಗೆ ತುತ್ತಾಗುತ್ತಿದ್ದಾರೆ. ಮಕ್ಕಳಿಗೆ ಸೋಂಕು ತಗುಲುವಿಕೆ ಶೇ.5ರಷ್ಟಿದೆ. ಅಂದರೆ ಸೊಂಕಿತರಾಗುವ 100 ಜನರ ಪೈಕಿ 5 ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಒಂದೊಮ್ಮೆ ನಿತ್ಯದ ಸೋಂಕಿನ ಪ್ರಮಾಣ 2 ಸಾವಿರದ ಗಡಿ ದಾಟಿದರೆ ಲಾಕ್‌ಡೌನ್ ಅನಿವಾರ್ಯವಾಗಲಿದೆ. ತಜ್ಞರ ಲೆಕ್ಕಾಚಾರದ ಪ್ರಕಾರ ಸೋಂಕಿತರ ಪ್ರಮಾಣ ಒಂದು ಸಾವಿರದಿಂದ ಎರಡು ಸಾವಿರಕ್ಕೆ ಏರಿಕೆಯಾಗಲು ಕೇವಲ 15 ದಿನ ಮಾತ್ರ ತೆಗೆದುಕೊಳ್ಳಲಿದ್ದು, ನಂತರವೂ ಜನರ ಓಡಾಟಕ್ಕೆ ನಿರ್ಬಂಧ ವಿಧಿಸದೇ ಇದ್ದಲ್ಲಿ ಪರಿಸ್ಥಿತಿ ಕೈಮೀರುವ ಅಪಾಯವಿದೆ. ಹೀಗಾಗಿ ಪಾಸಿಟಿವಿಟಿ ಪ್ರಮಾಣ ಶೇ.2ಕ್ಕೆ ಏರಿಕೆಯಾದರೆ ತಕ್ಷಣದಲ್ಲೇ ಲಾಕ್‌ಡೌನ್ ಅಸ್ತ್ರ ಪ್ರಯೋಗ ಮಾಡುವ ಚಿಂತನೆ ಇದೆ.
ಸದ್ಯ ಉಲ್ಬಣಗೊಂಡಿರುವ ಸೋಂಕು ತಡೆಹಿಡಿಯಲು ಲಾಕ್‌ಡೌನ್ ಅನಿವಾರ್ಯ ಎನ್ನಲಾಗುತ್ತಿದೆಯಾದರೂ ಈವರೆಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಲಾಕ್‌ಡೌನ್ ಮಾಡಿದರೂ ಮೊದಲು ಒಟ್ಟು ಏಳು ದಿನಗಳ ಕಾಲ ಮಾಡುವ ಚಿಂತನೆಯಿದ್ದು, ಕೊರೊನಾ ಚೈನ್ಲಿಂಕ್ ಬ್ರೇಕ್ ಮಾಡಲು ಏಳು ದಿನ ಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಲಾಕ್‌ಡೌನ್ ಜಾರಿಯಾದರೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಬೇಕು. ಬೆಳಗ್ಗೆ 6 ರಿಂದ ಬೆಳಗ್ಗೆ 11 ಗಂಟೆವರೆಗೂ ಹಣ್ಣು, ತರಕಾರಿ, ಮಾಂಸ ಖರೀದಿಗೆ ಅವಕಾಶ ನೀಡಬೇಕು. ಉಳಿದಂತೆ ಬಸ್ ಓಡಾಟ, ವಾಹನಗಳ ಓಡಾಟ ಸಂಪೂರ್ಣ ಬಂದ್ ಮಾಡಬೇಕು. ರೈಲುಗಳ ಓಡಾಟದ ಬಗ್ಗೆ ಅಂತಿಮ ಹಂತದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ತಾಂತ್ರಿಕ ಸಲಹಾ ಸಮಿತಿ ಕೊಟ್ಟಿರುವ ವರದಿ ಏನು?
ಸದ್ಯಕ್ಕೆ ಸರ್ಕಾರ ಯಾವುದೇ ಲಾಕ್‌ಡೌನ್ ಆದೇಶ ಮಾಡಿಲ್ಲ. ಆದರೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ತಜ್ಞರು, ಬಿಬಿಎಂಪಿ ಅಧಿಕಾರಿಗಳು ಲಾಕ್‌ಡೌನ್ ಮಾಡೋದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 0.57ರಷ್ಟು ಇದ್ದು, ಮುಂದಿನ ಒಂದು ವಾರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಒಂದೊಮ್ಮೆ ಪಾಸಿಟಿವಿಟಿ ಪ್ರಮಾಣ ಶೇ. 2 ಕ್ಕೆ ಏರಿಕೆಯಾದರೆ ತಜ್ಞರ ಶಿಫಾರಸು ಜಾರಿ ಮಾಡಬೇಕು ಎನ್ನಲಾಗಿದೆ.
ತಜ್ಞರ ಶಿಫಾರಸು ಏನು?
ಪಾಸಿಟಿವಿಟಿ ರೇಟ್ ಶೇ. 2 ಇರುವ ಪ್ರದೇಶವನ್ನ ಮತ್ತೆ ಲಾಕ್ ಮಾಡಲು ಶಿಫಾರಸು ಮಾಡಲಾಗಿದೆ. ಆ ಜಿಲ್ಲೆಗಳಲ್ಲಿ ಬಾರ್, ಪಬ್, ಜಿಮ್, ಯೋಗಾ ಸೆಂಟರ್, ಸಿನಿಮಾ ಹಾಲ್, ದೇವಸ್ಥಾನ, ಕ್ಲಬ್ ಹೌಸ್ಗಳನ್ನು ಮುಚ್ಚಲು ಸಲಹೆ ನೀಡಲಾಗಿದೆ. ಜುಲೈ 30 ರಂದು ನಡೆದ ತಾಂತ್ರಿಕ ಸಲಹಾ ಸಮಿತಿಯ ಸಭೆಯಲ್ಲಿ ತಜ್ಞರು ಈ ನಿರ್ಧಾರಗಳನ್ನು ಪ್ರಕಟ ಮಾಡಲಾಗಿದೆ. ಬಸ್ಗಳ ಓಡಾಟ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ಇರಲಿ ನೈಟ್ಕರ್ಫ್ಯೂ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಜಾರಿ ಮಾಡಬೇಕು. ವಿಕೇಂಡ್ ಕರ್ಫ್ಯೂ ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆ ತನಕ ಇರಬೇಕು ಎಂದಿದ್ದಾರೆ. ಜತೆಗೆ, ಈ ಬಗ್ಗೆ ಸಲಹೆ ನೀಡಿರುವ ಬಿಬಿಎಂಪಿ, ಸೀಲ್ ಡೌನ್ ಮಾಡುವ ಮೂಲಕ ಸೋಂಕು ತಡೆಯಲು ಸಲಹೆ ನೀಡಿದೆ. ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೆ ಸೂಚನೆ ನೀಡಿರುವ ತಜ್ಞರು. ವಿಕೇಂಡ್ ಕರ್ಫ್ಯೂ ಜತೆಗೆ ಕ್ವಾರಂಟೈನ್ ಅಸ್ತ್ರ ಪ್ರಯೋಗಿಸಲು ಸಲಹೆ ನೀಡಿದ್ದಾರೆ. ಹೊರ ರಾಜ್ಯದಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ ಮಾಡಲು ಸೂಚನೆ ಕೊಟ್ಟಿದ್ದು, ಹೋಮ್ ಐಸೋಲೇಶನ್ ಕಡಿಮೆ ಮಾಡಿ ಟ್ರಯಾಸ್ ಸೆಂಟರ್ಗೆ ಕರೆತರಲು ತಿಳಿಸಿದ್ದಾರೆ.
ಈ ನಿಯಮಗಳ ಜಾರಿಗೆ ಒತ್ತಾಯ
– ಕಚೇರಿ, ಕೈಗಾರಿಕೆಗಳಲ್ಲಿ ಶೇ. 50 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸಬೇಕು
– ಸಾರ್ವಜನಿಕ ಸಾರಿಗೆ ಶೇ. 50 ಮಾತ್ರ ಸೀಟ್ ಭರ್ತಿ
– ಮದುವೆಗಳಿಗೆ 100 ಜನರ ಬದಲು 40 ಕ್ಕೆ ಸೀಮಿತಗೊಳಿಸಬೇಕು
– ಅಂತಿಮ ಸಂಸ್ಕಾರ ಕಾರ್ಯಗಳಿಗೆ ಕೇವಲ 10 ಜನಕ್ಕೆ ಮಾತ್ರ ಅವಕಾಶ ಕೊಡಿ
– ರೆಸಾರ್ಟ್ ಅಥವಾ ಪ್ರವಾಸಿ ತಾಣಗಳನ್ನ ಬಂದ್ ಮಾಡಬೇಕು
– ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶ ನಿಷೇಧಿಸಬೇಕು
– ರ್‍ಯಾಲಿ, ಸಾರ್ವಜನಿಕ ಸಮಾವೇಶ, ಬೃಹತ್ ಕಾರ್ಯಕ್ರಮಗಳಿಗೆ ಅವಕಾಶ ಕೊಡಬಾರದು
– ಪಬ್, ಬಾರ್, ಜಿಮ್, ಯೋಗ ಕೇಂದ್ರಗಳನ್ನ ಕ್ಲೋಸ್ ಮಾಡಬೇಕು
– ಜನ ಸಂದಣೀಯ ಮಾರುಕಟ್ಟೆಗಳನ್ನ ಬಂದ್ ಮಾಡಬೇಕು
ಇದನ್ನೂ ಓದಿ:
ಸ್ವಾತಂತ್ರ್ಯ ದಿನಾಚರಣೆ ಬಳಿಕ ಜಾರಿಯಾಗಲಿದೆ ಟಫ್ ರೂಲ್ಸ್, ಆಗಸ್ಟ್ 15ರ ಬಳಿಕ ಮತ್ತೆ ರಾಜ್ಯದಲ್ಲಿ ಲಾಕ್‌ಡೌನ್?