ಬೆಂಗಳೂರಿನಲ್ಲಿ ಇಂದು ನಡೆಯಲಿದ್ದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್ (Vir Das)ಅವರ ಶೋ ಅನ್ನು ರದ್ದುಗೊಳಿಸಲಾಗಿದೆ ಎಂದು ಅವರು ಇನ್ಸ್ಟಾಗ್ರಾಂ(Instagram) ನಲ್ಲಿ ತಿಳಿಸಿದ್ದಾರೆ. ವೀರ್ ದಾಸ್ ಅವರ ಕಾರ್ಯಕ್ರಮವು ಹಿಂದೂ ಭಾವನೆಗಳನ್ನು ನೋಯಿಸುತ್ತದೆ ಮತ್ತು ಭಾರತವನ್ನು ಕೆಟ್ಟ ರೀತಿಯಲ್ಲಿ ತೋರಿಸುತ್ತದೆ ಎಂದು ಬಲಪಂಥೀಯ ಸಂಘಟನೆಯೊಂದು ಆರೋಪಿಸಿದ ಕೆಲವು ದಿನಗಳ ನಂತರ ಈ ಶೋ ರದ್ದು ಮಾಡಲಾಗಿದೆ. ಅನಿವಾರ್ಯ ಸಂದರ್ಭದಿಂದಾಗಿ ನಾವು ಬೆಂಗಳೂರು (Bangalore) ಕಾರ್ಯಕ್ರಮವನ್ನು ಮುಂದೂಡುತ್ತಿದ್ದೇವೆ. ಹೊಸ ವಿವರಗಳು ಮತ್ತು ದಿನಾಂಕಗಳು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ವೀರ್ ದಾಸ್ ಹೇಳಿದ್ದು, ಶೋ ರದ್ದಾಗಿರುವುದಕ್ಕೆ ಕ್ಷಮೆ ಕೇಳಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿ ವೀರ್ ದಾಸ್ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಕಳೆದ ವರ್ಷ ಯುಎಸ್‌ನಲ್ಲಿ ವೈರಲ್ ಆದ “ಟು ಇಂಡಿಯಾಸ್” ಸ್ವಗತದಿಂದ ಭಾರಿ ಟೀಕೆಗಳನ್ನು ಎದುರಿಸಿದ ಈ ಕಾಮಿಡಿಯನ್, ಇಂದು(ಗುರುವಾರ) ಮಲ್ಲೇಶ್ವರಂನ ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮವನ್ನು ನಡೆಸಲು ಸಿದ್ಧರಾಗಿದ್ದರು.
ಈ ಹಿಂದೆ ಅವರು ಅಮೆರಿಕದ ವಾಷಿಂಗ್ಟನ್ ಡಿಸಿಯ ಜಾನ್ ಎಫ್ ಕೆನಡಿ ಸೆಂಟರ್‌ನಲ್ಲಿ ಮಹಿಳೆಯರು, ನಮ್ಮ ಪ್ರಧಾನಿ ಮತ್ತು ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು ದೇಶವನ್ನು ಅವಹೇಳನ ಮಾಡಿದ್ದರು. ತಮ್ಮ ಶೋದಲ್ಲಿ ಅವರು ಭಾರತದಲ್ಲಿ ನಾವು ಹಗಲಿನಲ್ಲಿ ಮಹಿಳೆಯರನ್ನು ಪೂಜಿಸುತ್ತೇವೆ ಮತ್ತು ರಾತ್ರಿಯಲ್ಲಿ ಅತ್ಯಾಚಾರ ಮಾಡುತ್ತೇವೆ ಎಂದು ಹೇಳಿದ್ದರ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ಹೇಳಿದ್ದಾರೆ.
ಬೆಂಗಳೂರಿನಂತಹ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಇಂತಹ ವಿವಾದಿತ ವ್ಯಕ್ತಿಗೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಿರುವುದು ಸರಿಯಲ್ಲ ಎಂದು ಬಲಪಂಥೀಯ ಸಂಘಟನೆ ದೂರಿದೆ.
ಮತ್ತಷ್ಟು ಬೆಂಗಳೂರು ಜಿಲ್ಲೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Thu, 10 November 22