ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ನಿಧನ

| Updated By: ವಿವೇಕ ಬಿರಾದಾರ

Updated on: Nov 27, 2023 | 9:29 PM

ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ನಿಧನ
ಗುತ್ತಿಗೆದಾರ ಅಂಬಿಕಾಪತಿ
Follow us on

ಬೆಂಗಳೂರು ನ.27: ರಾಜ್ಯ ಗುತ್ತಿಗೆದಾರರ (Contractors) ಸಂಘದ ಉಪಾಧ್ಯಕ್ಷ ಅಂಬಿಕಾಪತಿ (Ambikapathy) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಂಬಿಕಾಪತಿ ಅವರಿಗೆ ಇಂದು (ನ.27) ಸಂಜೆ 6:40 ಸುಮಾರಿಗೆ ಹೃದಯಾಘಾತವಾಗಿದೆ. ಕೂಡಲೆ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ

ಅಕ್ಟೋಬರ್​ದ 13 ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಧ್ಯರಾತ್ರಿ ಆರ್​​. ಟಿ.ನಗರದ ಮಾಜಿ ಕಾರ್ಪೊರೇಟರ್ ​​​ಅಶ್ವತ್ಥಮ್ಮ, ಪತಿ ಆರ್​.ಅಂಬಿಕಾಪತಿ ಮತ್ತು ​ಅಶ್ವತ್ಥಮ್ಮ ಅವರ ಬಾಮೈದ ಪ್ರದೀಪ್​​ ಫ್ಯ್ಲಾಟ್​​​​​​ ಮೇಲೆ ದಾಳಿ ಮಾಡಿದ್ದರು. ಪರಿಶೀಲನೆ ವೇಳೆ ಅಂಬಿಕಾಪತಿಯ ಬೆಡ್​​ ರೂಮ್​ನ ಮಂಚದ ಕೆಳಗೆ 23 ಬಾಕ್ಸ್​​ನಲ್ಲಿ 500 ರೂ. ಮುಖಬೆಲೆಯ 42 ಕೋಟಿ ರೂ. ಕಂತೆ ಕಂತೆ ಹಣ ಪತ್ತೆಯಾಗಿತ್ತು. ಅಲ್ಲದೆ ಅಂಬಿಕಾಪತಿ ಮಗಳ ಮನೆ ಮೇಲೂ ಅಧಿಕಾರಿಗಳು ದಾಳಿ ಮಾಡಿದ್ದರು.

ಇದನ್ನೂ ಓದಿ: ಮನೆಯಲ್ಲಿ ಪತ್ತೆಯಾದ ಹಣದ ಮೂಲ ತಿಳಿಸಿದ ಗುತ್ತಿಗೆದಾರ ಅಂಬಿಕಾಪತಿ ಪುತ್ರ ಪ್ರದೀಪ್: ಇಲ್ಲಿದೆ ವಿವರ

ಯಾರು ಈ ಅಂಬಿಕಾಪತಿ

ಆರ್​.ಟಿ ನಗರದ ಆನಂದ ಕೊಲೋನಿ ನಿವಾಸಿಯಾಗಿರುವ ಅಶ್ವತಮ್ಮ ಕಾಂಗ್ರೆಸ್​ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಕ್ಕ. 2001ರಲ್ಲಿ ಕಾವಲ್ ಬೈರಸಂದ್ರ (ವಾರ್ಡ್​​ ನಂ 95)ರ ಕಾರ್ಪೊರೇಟರ್​​ ಆಗಿದ್ದರು. ಇವರ ಪತಿ ಆರ್.ಅಂಬಿಕಾಪತಿ ಕಾಂಟ್ರಾಕ್ಟರ್ ಆಗಿದ್ದರು. ಕೆಂಪಣ್ಣ ಅವರ ಕಾಂಟ್ರಾಕ್ಟರ್ ಸಂಘದಲ್ಲಿ ಗುರುತಿಸಿಕೊಂಡಿದ್ದರು. ಇವರು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ರಾಜ್ಯದಲ್ಲಿ ನಡೆಯುವ ಕಾಮಗಾರಿಗೆ ಶೇ.40 ರಷ್ಟು ಲಂಚ ನೀಡಬೇಕು, ಬಿಬಿಎಂಪಿಯಲ್ಲಿ 50 ಪರ್ಸೆಂಟ್ ನೀಡಬೇಕು ಎಂದು ಆರೋಪ ಮಾಡಿದ್ದರು.

ಅಲ್ಲದೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅಂಬಿಕಾಪತಿ ಕಮಿಷನ್ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರು ಅಂಬಿಕಾಪತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದಲ್ಲಿ ಅಂಬಿಕಾಪತಿ ವೈಯ್ಯಾಲಿಕಾವಲ್ ಠಾಣೆ ಪೊಲೀಸರಿಂದ ಬಂಧನಕ್ಕೊಳಗಾಗಿ ಬಳಿಕ ಜಾಮೀನು ಮೇಲೆ ಬಿಡುಗಡೆಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ