ಬೆಂಗಳೂರು, ಸೆಪ್ಟೆಂಬರ್ 4: ಕೆಆರ್‌ಎಸ್‌ನಲ್ಲಿನ (Cauvery River Water) ನೀರು ದಿನದಿನಕ್ಕೂ ಕಡಿಮೆ ಆಗುತ್ತಿದ್ದರೆ, ಹೋರಾಟದ ಕಾವು ಮಾತ್ರ ಹೆಚ್ಚಾಗುತ್ತಿದೆ. ಅನ್ನದಾತರು ಸೇರಿದಂತೆ ಕನ್ನಡಪರ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿವೆ. ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಕೂಡಲೇ ನಿಲ್ಲಿಸಲಿ. ಇಲ್ಲವಾದರೆ ಬೆಂಗಳೂರಿನಲ್ಲಿರುವ ತಮಿಳರನ್ನು ಸಿಎಂ ಸ್ಟಾಲಿನ್ ತಮ್ಮ ರಾಜ್ಯಕ್ಕೆ ಕರೆಸಿಕೊಳ್ಳಲಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಆಗ್ರಹಿಸಿದ್ದಾರೆ. ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ನೀರು ನಿಲ್ಲಿಸುವುದಕ್ಕೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಕೂಡಲೇ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ನಿಲ್ಲಿಸಲಿ ಎಂದು ಒತ್ತಾಯಿಸಿದ್ದಾರೆ.
ತಮಿಳುನಾಡಿಗೆ ನೀರು ಹರಿಸುತ್ತಿರುವ ವಿಚಾರವಾಗಿ ಇತ್ತೀಚೆಗೆ ಬಸ್ಸೊಂದರ ಮುಂದೆ ಪ್ರತಿಭಟನೆ ಮಾಡಿದ್ದ ವಾಟಾಳ್ ನಾಗರಾಜ್, ಕಾವೇರಿ ನದದಿ ನೀರನ್ನು ತಮಿಳುನಾಡು ಹರಿಬಿಟ್ಟಿದ್ದು ಮತ್ತು ನೀರಿನ ಬಗ್ಗೆ ತಮಿಳುನಾಡು ಹಟಮಾರಿ ಧೋರಣೆ ಪ್ರದರ್ಶಿಸುತ್ತಿದೆ.
ಇದನ್ನೂ ಓದಿ: ಕಾವೇರಿ ನಮ್ಮದು ಅಂತ ಬಿಎಮ್ ಟಿಸಿ ಬಸ್ ನಿಲ್ದಾಣದಲ್ಲಿ ವಿನೂತನ ಮಾದರಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್
ಕಾವೇರಿ ನಮ್ಮದು, ಕಾವೇರಿ ನದಿ ನೀರಿಗಾಗಿ ಹೋರಾಟ, ಹಟಮಾರಿತನ ಪ್ರದರ್ಶಿಸುತ್ತಿರುವ ತಮಿಳುನಾಡು ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದರು. ಪ್ರತಿಭಟನೆ ನಡೆಸಿದವರಲ್ಲಿ ಕೆಲ ಮಹಿಳೆಯರೂ ಇದ್ದರು. ಪೋಲಿಸರು ಬಂದು ವಾಟಾಳ್ರನ್ನು ಮನವೊಲಿಸಿ ಪಕ್ಕಕ್ಕೆ ಕರೆದುಕೊಂಡು ಹೋಗಿದ್ದರು.
ಮಂಡ್ಯ: ಕೆಆರ್ಎಸ್ನಿಂದ ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದ ಪಾಂಡವಪುರ ಪಟ್ಟಣದಲ್ಲಿ ಹೆದ್ದಾರಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭಾವಚಿತ್ರಕ್ಕೆ ಚಪ್ಪಲಿ ಎಸೆದು, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ರೈತ ಸಂಘ, ರೈತ ಬಣದ ಕಾರ್ಯಕರ್ತರಿಂದ ಕೆಆರ್ಎಸ್ ಜಲಾಶಯಕ್ಕೆ ಮುತ್ತಿಗೆ ಯತ್ನಿಸಿದ್ದು, ಈ ವೇಳೆ ಪೊಲೀಸರ ಜೊತೆ ಮಾತಿಕ ಚಕಮಕಿ ಉಂಟಾಗಿದೆ. ಕೆಲ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಕೂಡ ಕಾವೇರಿ ಕಿಚ್ಚು ಜೋರಾಗಿದ್ದು, ತಣ್ಣಗಾಗುವ ಲಕ್ಷಣಗಳೇ ಕಾಣುತ್ತಿಲ್ಲ. ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ, ದಿನ ದಿನಕ್ಕೂ ಹೋರಾಟಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ಅದರಲ್ಲೂ ಮಂಡ್ಯದಲ್ಲಿ ಅನ್ನದಾತರ ಪ್ರತಿಭಟನೆ ಮುಗಿಲು ಮುಟ್ಟಿದ್ದು, ಇಂದು ಕೂಡ ವಿವಿಧ ಸಂಘಟನೆಗಳು ಅಖಾಡಕ್ಕೆ ಇಳಿದಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.