AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಧಾನಿ ಮೋದಿಗೆ ಸಿಎಂ ಡಿಕೆ ಶಿವಕುಮಾರ್​​ ಪತ್ರ

ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪರಿಷ್ಕರಣೆ ಮಾಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 3 ಪುಟಗಳ ಪತ್ರ ಬರೆದಿದ್ದಾರೆ. ಕಬ್ಬಿನ ತೂಕ ಮಾಪನದಲ್ಲಿ ಪಾರದರ್ಶಕತೆ ಹೆಚ್ಚಿಸಲು, ಸಕ್ಕರೆ ಚೇತರಿಕೆ ಪ್ರಮಾಣದ ಪರೀಕ್ಷೆಯನ್ನು ಬಲಪಡಿಸಲು ಮತ್ತು ರೈತರಿಗೆ ಹೆಚ್ಚುವರಿ ಆರ್ಥಿಕ ನೆರವು ಒದಗಿಸಲು ನಮ್ಮ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ ಅಂತಲೂ ಅವರು ತಿಳಿಸಿದ್ದಾರೆ.

ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಧಾನಿ ಮೋದಿಗೆ ಸಿಎಂ ಡಿಕೆ ಶಿವಕುಮಾರ್​​ ಪತ್ರ
ಪ್ರಧಾನಿ ಮೋದಿ ಮತ್ತು ಸಿಎಂ ಡಿಕೆ ಶಿವಕುಮಾರ್​​ Image Credit source: PTI
ಅನಿಲ್​ ಕಲ್ಕೆರೆ
| Edited By: |

Updated on: Oct 19, 2026 | 2:52 PM

Share

ಬೆಂಗಳೂರು, ಅಕ್ಟೋಬರ್​​ 19: ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕ ಸಿಎಂ ಡಿ.ಕೆ ಶಿವಕುಮಾರ್ 3 ಪುಟಗಳ ಪತ್ರ ಬರೆದಿದ್ದಾರೆ. ಕಬ್ಬು ಬೆಳೆಗಾರರ ಪ್ರತಿಭಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಬ್ಬು ಅರೆಯುವ ಹಂಗಾಮು ಆರಂಭವಾಗುವುದು ವಿಳಂಬವಾಗುತ್ತಿರುವುದರಿಂದ ಸಾವಿರಾರು ರೈತ ಕುಟುಂಬಗಳಲ್ಲಿ ಅನಿಶ್ಚಿತತೆ ಉಂಟಾಗಿದೆ. ಬೆಳೆ ಕಟಾವಿಗೆ ಸಿದ್ಧವಾಗಿದ್ದರೂ ಕಬ್ಬು ಇನ್ನೂ ಹೊಲಗಳಲ್ಲೇ ನಿಂತಿದೆ. ಪ್ರತಿ ದಿನದ ವಿಳಂಬದಿಂದ ಕಬ್ಬಿನ ತೂಕ ಮತ್ತು ಸಕ್ಕರೆ ಅಂಶ ಕಡಿಮೆಯಾಗುವ ಸಾಧ್ಯತೆಯಿದ್ದು, ಹಲವು ತಿಂಗಳುಗಳ ಕಾಲ ಶ್ರಮಪಟ್ಟು ಬೆಳೆದ ರೈತರ ಆದಾಯದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದವರು ತಿಳಿಸಿದ್ದಾರೆ.

ಪ್ರಧಾನಿಗೆ ಸಿಎಂ ಡಿಕೆಶಿ ಅವರ ಪ್ರಮುಖ ಆಗ್ರಹಗಳು

  • 2019ರಿಂದ ಪ್ರತಿ ಕೆ.ಜಿಗೆ 31 ರೂಪಾಯಿಗಳಲ್ಲೇ ಸ್ಥಿರವಾಗಿರುವ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು, ಕಬ್ಬು ಉತ್ಪಾದನಾ ವೆಚ್ಚದಲ್ಲಿನ ಏರಿಕೆಗೆ ಅನುಗುಣವಾಗಿ ಪರಿಷ್ಕರಿಸಬೇಕು. ಇದರಿಂದ ಸಕ್ಕರೆ ಕಾರ್ಖಾನೆಗಳು ರೈತರಿಗೆ ನ್ಯಾಯಯುತ ಬೆಲೆ ಪಾವತಿಸಲು ಅನುಕೂಲವಾಗಲಿದೆ.
  • ಗೃಹಬಳಕೆಯ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವುದರ ಜೊತೆಗೆ, ಬೃಹತ್ ಪ್ರಮಾಣದಲ್ಲಿ ಸಕ್ಕರೆ ಖರೀದಿಸುವ ವಾಣಿಜ್ಯ ಗ್ರಾಹಕರಿಗೂ ನ್ಯಾಯಯುತ ಬೆಲೆ ಖಚಿತಪಡಿಸಲು ಪ್ರತ್ಯೇಕ ಕನಿಷ್ಠ ಮಾರಾಟ ಬೆಲೆ ನಿಗದಿಪಡಿಸಬೇಕು.
  • ಕಬ್ಬಿನ ರಸ, ಸಕ್ಕರೆ ಪಾಕ ಮತ್ತು ಬಿ-ಹೆವಿ ಮೊಲಾಸಸ್‌ನಿಂದ ಉತ್ಪಾದಿಸುವ ಎಥೆನಾಲ್ ಅನ್ನು ಖರೀದಿ ಟೆಂಡರ್‌ಗಳಿಂದ ಹೊರಗಿಟ್ಟಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು. ಅಲ್ಲದೆ, ಕಾರ್ಖಾನೆಗಳ ಸ್ಥಾಪಿತ ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ನ್ಯಾಯಯುತ ಹಂಚಿಕೆ ಖಚಿತಪಡಿಸಬೇಕು.
  • 2022–23ರಿಂದ ಬದಲಾಗದೆ ಉಳಿದಿರುವ ಕಬ್ಬು ಆಧಾರಿತ ಎಥೆನಾಲ್ ಬೆಲೆಯನ್ನು, ಕಬ್ಬಿನ ಉತ್ಪಾದನಾ ವೆಚ್ಚದಲ್ಲಿನ ಏರಿಕೆಗೆ ಅನುಗುಣವಾಗಿ ಹೆಚ್ಚಿಸಬೇಕು. ಇದರಿಂದ ಸಕ್ಕರೆ ಕಾರ್ಖಾನೆಗಳಿಗೆ ಬೆಂಬಲ ದೊರೆಯಲಿದೆ.
  • ಮಣ್ಣಿನ ಗುಣಮಟ್ಟ, ಹವಾಮಾನ ಮತ್ತು ಕಬ್ಬು ಅರೆಯುವ ಪರಿಸ್ಥಿತಿಗಳಲ್ಲಿನ ವ್ಯತ್ಯಾಸಗಳಿಂದ ಸಕ್ಕರೆ ಚೇತರಿಕೆ ಪ್ರಮಾಣ ಕಡಿಮೆ ಇರುವ ಪ್ರದೇಶಗಳ ರೈತರಿಗೆ ಅನ್ಯಾಯವಾಗದಂತೆ, ನ್ಯಾಯಯುತ ಸಂಭಾವನೆ ಖಚಿತಪಡಿಸಲು ನ್ಯಾಯಯುತ ಮತ್ತು ಲಾಭದಾಯಕ ಬೆಲೆಯ (FRP) ಮೂಲ ಚೇತರಿಕೆ ದರವನ್ನು ಶೇ. 9.50ಕ್ಕೆ ಮರುಸ್ಥಾಪಿಸಬೇಕು.

ಇದನ್ನೂ ಓದಿ: ಕಬ್ಬು ಬೆಳೆಗಾರರ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಧ್ಯರಾತ್ರಿ ಮಹತ್ವದ ಸಭೆ ಯಶಸ್ವಿ

ಕಬ್ಬಿನ ತೂಕ ಮಾಪನದಲ್ಲಿ ಪಾರದರ್ಶಕತೆ ಹೆಚ್ಚಿಸಲು, ಸಕ್ಕರೆ ಚೇತರಿಕೆ ಪ್ರಮಾಣದ ಪರೀಕ್ಷೆಯನ್ನು ಬಲಪಡಿಸಲು ಮತ್ತು ರೈತರಿಗೆ ಹೆಚ್ಚುವರಿ ಆರ್ಥಿಕ ನೆರವು ಒದಗಿಸಲು ನಮ್ಮ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಸಕ್ಕರೆ ವಲಯದ ಸಮಸ್ಯೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಸಮಿತಿ ರಚಿಸಿರುವುದನ್ನೂ ತಾನು ಸ್ವಾಗತಿಸಿದ್ದೇನೆ. ಆದರೆ, ಕಬ್ಬು ಅರೆಯುವ ಹಂಗಾಮು ಈಗಾಗಲೇ ವಿಳಂಬವಾಗಿರುವುದರಿಂದ, ಸಮಿತಿಯು ತನ್ನ ಕಾರ್ಯ ಮುಂದುವರಿಸಿರುವ ನಡುವೆಯೇ ಈ ತುರ್ತು ಸಮಸ್ಯೆಗಳಿಗೆ ಸಕಾಲದಲ್ಲಿ ನಿರ್ಧಾರ ಕೈಗೊಳ್ಳುವುದು ಅಗತ್ಯವಾಗಿದೆ. ಲಕ್ಷಾಂತರ ಕಬ್ಬು ಬೆಳೆಗಾರರ ಜೀವನೋಪಾಯ ಮತ್ತು ಅವರ ಕುಟುಂಬಗಳ ಕಲ್ಯಾಣ ಪಣಕ್ಕಿದೆ. ರೈತರ ಪರಿಶ್ರಮಕ್ಕೆ ಮನ್ನಣೆ ದೊರೆಯುವುದರ ಜೊತೆಗೆ, ಅವರ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ಸಿಗುವುದನ್ನು ನಾವು ಖಚಿತಪಡಿಸಬೇಕಿದೆ ಎಂದು ಡಿಕೆ ಶಿವಕುಮಾರ್​​ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಅನಿಲ್​ ಕಲ್ಕೆರೆ
ಅನಿಲ್​ ಕಲ್ಕೆರೆ

ಅನಿಲ್ ಕಲ್ಕೆರೆ ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ 11 ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ರಾಜಕೀಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಸೆಂಟ್ರಲ್ ಕಾಲೇಜು) ದಲ್ಲಿ Msc (ಮಾಸ್ ಕಮ್ಯುನಿಕೇಷನ್) ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಸೃಜನಶೀಲ ಬರವಣಿಗೆ ಜೊತೆಗೆ ವಿಧಾನಸೌಧದ ಆಡಳಿತಾತ್ಮಕ ಸುದ್ದಿಗಳೂ ಸೇರಿದಂತೆ, ರಾಜಕೀಯ ಪಕ್ಷಗಳು ಹಾಗೂ ರಾಜಕೀಯದ ಪ್ರಸಕ್ತ ವಿದ್ಯಮಾನಗಳನ್ನ ಒಳಗೊಂಡಂತಹ ಸುದ್ದಿಗಳತ್ತ ಗಮನ ಹರಿಸುತ್ತಿದ್ದಾರೆ. ಜೊತೆಗೆ ಪ್ರಜಾಪ್ರಭುತ್ವ ನಾಲ್ಕನೇ ಆಧಾರ ಸ್ತಂಭವಾಗಿ ಸಾಮಾನ್ಯಜನರ ಪರ ಧ್ವನಿಯಾಗಿ ಸರ್ಕಾರಕ್ಕೆ ಸಮಸ್ಯೆ ಮುಟ್ಟಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದಾರೆ.

Read More