ಬೆಂಗಳೂರು: ಇಂದು ನಾಡಿಗೆ ಸಂಕ್ರಾಂತಿ ಸಂಭ್ರಮ. ಜೊತೆಗೆ ಸೂರ್ಯನು ದಕ್ಷಿಣಾಯನದಿಂದ ಪಥ ಬದಲಿಸಿ ಉತ್ತರಾಯಣ ಚಲನೆಗೆ ತೊಡಗುವ ದಿನ. 2023 ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು (Sankranti Festival) ದಕ್ಷಿಣದಿಂದ ಉತ್ತರಕ್ಕೆ ಸೂರ್ಯ ತನ್ನ ಪಥ ಬದಲಿಸುವಾಗ ಸೂರ್ಯನ ಕಿರಣಗಳು ಬೆಂಗಳೂರಿನ ಬಸವನಗುಡಿಯ ಗವಿಗಂಗಾಧರೇಶ್ವರನ(Gavi Gangadhareshwara) ಲಿಂಗವನ್ನು ಸ್ಪರ್ಶಿಸಿದವು. ಈ ವಿಸ್ಮಯವನ್ನು ಭಕ್ತರು ಕಣ್ತುಂಬಿಕೊಂಡು ಪುನೀತರಾದರು.
ಸಂಜೆ 5.20ರಿಂದ 5.23ರ ಸಮಯದಲ್ಲಿ ಒಟ್ಟು 3 ನಿಮಿಷ 12 ಸೆಕೆಂಡ್‌ಗಳ ಕಾಲ ಸೂರ್ಯ ರಶ್ಮಿ ಸ್ಪರ್ಶವಾಗಿದೆ. ಬಳಿಕ ಮಂಗಳಾರತಿ ಮಾಡಲಾಯಿತು. ಈ ಸಂದರ್ಭದಲ್ಲಿ ಅರ್ಚಕರಿಂದ ಮಂತ್ರಘೋಷ, ಡೊಳ್ಳು, ನಗಾರಿ, ಗಂಟೆಗಳ ನಾದ ಮೊಳಗಿದ್ದು, ನೆರೆದಿರುವ ಸಹಸ್ರಾರು ಭಕ್ತರು ಎಲ್ಇಡಿ ಸ್ಕ್ರೀನ್‌ಗಳ ಮೂಲಕ ವಿಸ್ಮಯ ಕಣ್ತುಂಬಿಕೊಂಡರು.
ಇಂದು(ಜ.15) ಸಂಜೆ 5.20ರ ಸುಮಾರಿಗೆ ಗವಿಗಂಗಾಧರೇಶ್ವರ ದೇಗುಲದ ಗರ್ಭಗೃಹದ ದ್ವಾರ ಪ್ರವೇಶಿಸಿದ ಸೂರ್ಯ ರಶ್ಮಿ, ಮೊದಲು ನಂದಿ ವಿಗ್ರಹದ ಪಾದವನ್ನು ಸ್ಪರ್ಶಿಸಿತು. ಬಳಿಕ ನಂದಿಯ ಬೆನ್ನಿನ ಭಾಗಕ್ಕೆ ಆಗಮಿಸಿತ್ತು. ಬಳಿಕ ನಂದಿಯ ಕೊಂಬಿನ ಮೂಲಕ ಹಾದುಹೋಗಿ ಈಶ್ವರ ಲಿಂಗವನ್ನು ಸ್ಪರ್ಶಿಸಿತು.
ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಭಕ್ತರು ಈ ವಿಸ್ಮಯವನ್ನು ನೋಡುವುದಕ್ಕೆ ಆಗಿರಲಿಲ್ಲ. ಆದ್ರೆ, ಈ ಬಾರಿ ಸೂರ್ಯ ರಶ್ಮಿ ಸ್ಪರ್ಶವನ್ನು ಕಣ್ತುಂಬಿಕೊಳ್ಳಲು ಭಕ್ತರು ಬೆಳಗ್ಗೆಯಿಂದಲೇ ಗವಿಗಂಗಾಧರೇಶ್ವರ ದೇಗುಲ ಬಳಿ ಕಿಕ್ಕಿರಿದು ಸೇರಿದ್ದರು. ಇದರಿಂದ ಸೂರ್ಯನ ಕಿರಣಗಳು ಗವಿಗಂಗಾಧರೇಶ್ವರನ ಲಿಂಗವನ್ನು ಸ್ಪರ್ಶಿಸುವ ದೃಶ್ಯವನ್ನು ಭಕ್ತರಿಗೆ ಎಲ್ಇಡಿ ಸ್ಕ್ರೀನ್ ಮೂಲಕ ತೋರಿಸಲಾಯ್ತು.
ಇನ್ನು ಈ ಬಗ್ಗೆ ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕ ಡಾ.ಸೋಮಸುಂದರ್ ದೀಕ್ಷಿತ್ ಪ್ರತಿಕ್ರಿಯಿಸಿದ್ದು, ಸಂಜೆ 5.20ರಿಂದ 5.23ರ ಸಮಯದಲ್ಲಿ ಒಟ್ಟು 3 ನಿಮಿಷ 12 ಸೆಕೆಂಡ್‌ಗಳ ಕಾಲ ಸೂರ್ಯ ರಶ್ಮಿ ಸ್ಪರ್ಶವಾಗಿದೆ. ಕಳೆದ ವರ್ಷ ಸೂರ್ಯ ನಮಸ್ಕಾರ ಸಾಕಾರವಾಗಿರಲಿಲ್ಲ. ಆದ್ರೆ ಈ ವರ್ಷ ಪೂಜೆ ಸಾಕಾರಗೊಂಡಿದೆ. ನಾಲ್ಕು ವರ್ಷಗಳ ಕಾಲ 18 ಸೆಕೆಂಡ್ ಸೂರ್ಯರಶ್ಮಿ ಸ್ಪರ್ಶ ಮಾಡಿತ್ತು. ಈ ವರ್ಷ 3 ನಿಮಿಷ 12 ಸೆಕೆಂಡ್‌ಗಳ ಕಾಲ ಸೂರ್ಯ ರಶ್ಮಿ ಸ್ಪರ್ಶವಾಗಿದೆ. ಪ್ರಸಕ್ತ ವರ್ಷ ಯಾವುದೇ ಅನಾಹುತ ಹಾಗೂ ಅನಾನುಕೂಲವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Published On - 6:38 pm, Sun, 15 January 23