ಬೆಂಗಳೂರು, ಜನವರಿ 12: ‘ಸ್ವಚ್ಛ ಸರ್ವೇಕ್ಷಣಾ 2023’ ಪ್ರಶಸ್ತಿ ಪಟ್ಟಿಯನ್ನು (Swachh Survekshan Awards 2023) ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಗುರುವಾರ ಪ್ರಕಟಿಸಿದ್ದು, 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 446 ನಗರಗಳ ಪೈಕಿ ಬೆಂಗಳೂರು 125ನೇ ಸ್ಥಾನ ಗಳಿಸಿದೆ. ಮಧ್ಯಪ್ರದೇಶದ ಇಂದೋರ್ ಸತತ ಏಳನೇ ಬಾರಿಗೆ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುಜರಾತ್ನ ಸೂರತ್ ಕೂಡ ಇದೇ ಮೊದಲ ಬಾರಿಗೆ ಪ್ರಶಸ್ತಿಗೆ ಭಾಜನವಾಗಿದೆ.
ಬೆಂಗಳೂರಿಗೆ 125ನೇ ಸ್ಥಾನ ದೊರೆತಿರುವ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ‘ಸ್ವಚ್ಛ ಸರ್ವೇಕ್ಷಣಾ 2023’ರಲ್ಲಿ ಬಿಬಿಎಂಪಿ ಉತ್ತಮ ಸಾಧನೆ ತೋರಿದೆ. ಈ ಸಾಧನೆಗಾಗಿ ನಮ್ಮ ಬೆಂಗಳೂರಿನ ನಾಗರಿಕರು ಮತ್ತು ಬಿಬಿಎಂಪಿಯ ಅಧಿಕಾರಿಗಳು, ಎಲ್ಲಾ ಕಾರ್ಮಿಕರು ಪ್ರಶಂಸೆಗೆ ಅರ್ಹರು. ಬೆಂಗಳೂರು ಕರ್ನಾಟಕದಲ್ಲಿ 3 ನೇ ಸ್ವಚ್ಛ ನಗರವಾಗಿದೆ. ಇದೇ ಮೊದಲ ಬಾರಿಗೆ, ವಾಟರ್ ಪ್ಲಸ್ ಪ್ರಮಾಣೀಕರಣವನ್ನು ಪಡೆದಿದೆ. ಜೊತೆಗೆ ನೈರ್ಮಲ್ಯ ಸಮೀಕ್ಷೆಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನವನ್ನು ನೀಡಲಾಗಿದೆ ಎಂದು ಡಿಕೆ ಶಿವಕುಮಾರ್ ಉಲ್ಲೇಖಿಸಿದ್ದಾರೆ.
A matter of great pride that BBMP has performed extremely well in many prominent categories of Swachh Sarvekshan-2023, bagging 125th rank out of 446 cities with a population above 1 lakh.
Our Bengaluru citizens and the officials & workers of BBMP deserve all the accolades for… pic.twitter.com/sCNky2P9ZA
— DK Shivakumar (@DKShivakumar) January 11, 2024
ಅತ್ಯುತ್ತಮ ಕಾರ್ಯವನ್ನು ಮುಂದುವರೆಸುತ್ತಾ, ಬಿಬಿಎಂಪಿ ಸೇವಾ ಮಟ್ಟದ ಪ್ರಗತಿ ಮತ್ತು ನಾಗರಿಕರ ಧ್ವನಿ ವಿಭಾಗಗಳ ಅಡಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಆಡಳಿತಕ್ಕಾಗಿ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಈ ಸುವರ್ಣ ಓಟ ಮುಂದುವರಿಯಲಿ ಮತ್ತು ಮುಂಬರುವ ವರ್ಷಗಳಲ್ಲಿ ಆಡಳಿತ ಮತ್ತು ಸಾರ್ವಜನಿಕ ಸೇವೆಗಾಗಿ ಹೊಸ ಮಾನದಂಡಗಳನ್ನು ರೂಪಿಸಲಿ ಎಂದು ಅವರು ಆಶಿಸಿದ್ದಾರೆ.
ಇದನ್ನೂ ಓದಿ: ಸತತ 7ನೇ ಬಾರಿಗೆ ಇಂದೋರ್ಗೆ ಸ್ವಚ್ಛ ನಗರಿ ಪ್ರಶಸ್ತಿ ಗರಿ
ನವೀ ಮುಂಬೈ ದೇಶದ ಮೂರನೇ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಾರಾಷ್ಟ್ರವು ಸ್ವಚ್ಛ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರೆ, ಈ ವಿಭಾಗದಲ್ಲಿ ನಂತರದ ಸ್ಥಾನದಲ್ಲಿ ಮಧ್ಯಪ್ರದೇಶವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:21 am, Fri, 12 January 24