ವಿಶ್ವ ಪರಿಸರ ದಿನವೇ ಅರ್ಧದಶಕದ ಮರವನ್ನು ಕಡಿದು ಧರೆಗುರುಳಿಸಿದರು!
ವಿಶ್ವ ಪರಿಸರ ದಿನವೇ ಅರ್ಧದಶಕಕ್ಕೂ ಹೆಚ್ಚು ಕಾಲ ಬದುಕಿದ್ದ ಮರವೊಂದನ್ನು ಕಡಿದು ಹಾಕಿದ ಘಟನೆ ಆನೆಕಲ್ನಲ್ಲಿ ನಡೆದಿದೆ. ಸ್ಥಳದಲ್ಲಿ ಗ್ರಾಮಸ್ಥರು ಸೇರುತ್ತಿದ್ದಂತೆ ಕೆಇಬಿ ಮತ್ತು ಕ್ರೇನ್ ಸಿಬ್ಬಂದಿ ಕಾಲ್ಕಿತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಆನೇಕಲ್: ವಿಶ್ವ ಪರಿಸರ ದಿನ (World Environment Day)ವೇ ಅರ್ಧದಶಕಕ್ಕೂ ಹೆಚ್ಚು ಕಾಲ ಬದುಕಿದ್ದ ಬೃಹತ್ ಮರ (Tree)ವೊಂದನ್ನು ಧರೆಗುರುಳಿಸಿದ ಆರೋಪ ಕೇಳಿಬಂದಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ರಸ್ತೆಯಲ್ಲಿ ಇರುವ ಅದಿತಿ ನರ್ಸೀಂಗ್ ಹೋಮ್ ಕಾಲೇಜು ಬಳಿ ಹಸಿರು ಭರಿತ ಮರವನ್ನು ಕಡಿಯಲಾಗಿದೆ. ಅದಿತಿ ನರ್ಸಿಂಗ್ ಹೋಮ್ಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಈ ಮರವನ್ನು ಕತ್ತರಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲದೆ ಕೂಡಲೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬರುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Aniruddha Jatkar: ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸಲಹೆಗಳನ್ನು ಮುಂದಿಟ್ಟ ನಟ ಅನಿರುದ್ಧ; ವಿವರ ಇಲ್ಲಿದೆ
50-60 ವರ್ಷದ ಮರ ಮಾತ್ರವಲ್ಲದೆ ಒಟ್ಟಿಗೆ ಮತ್ತೊಂದು ಮರವನ್ನೂ ಕಡಿಯಲಾಗಿದೆ. ಈ ಮರಗಳನ್ನು ಅನುಮತಿ ಇಲ್ಲದೇ ಕಟ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮರಗಳನ್ನು ಕಡಿಯುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಕೆಇಬಿ ಹಾಗೂ ಕ್ರೇನ್ ಸಿಬ್ಬಂದಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಆಧುನಿಕ ಕಾಲದಲ್ಲಿ ಮರಗಳನ್ನು ಸ್ಥಳಾಂತರ ಮಾಡುವ ಸಾಧನಗಳು ಇವೆ. ಅವುಗಳನ್ನು ಬಳಸಿ ಮರಗಳನ್ನು ಸ್ಥಳಾಂತರಿಸಿ ರಸ್ತೆ ಅಗಲಿಕರಣ ಇತ್ಯಾದಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವಂತೆ ಒತ್ತಾಯಿಸಿದ ಗ್ರಾಮಸ್ಥರೊಬ್ಬರು, ಈ ರೀತಿಯಾಗಿ ಮರಗಳನ್ನು ಕಡಿದು ಹಾಕಿರುವುದನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ; ಬೆಂಗಳೂರು, ಕರಾವಳಿಯಲ್ಲಿ ಹೈ ಅಲರ್ಟ್
ಇಂದು ಮರಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವ ಬದಲು ಈ ರೀತಿ ಮರಗಳನ್ನು ಕಡಿದು ಹಾಕುವುದು ಸರಿಯಲ್ಲ. ಈ ಹಿಂದೆ ಬೇರೆ ಗಿಡಗಳನ್ನು ತಂದು ನಡುತ್ತೇವೆ ಎಂದು ಹೇಳಿದರೂ ಇದುವರೆಗೆ ತಂದು ನಟ್ಟಿಲ್ಲ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಮರಗಳ ಉಳಿಸುವಿಕೆಗೆ ಸರಿಯಾದ ಕಾನೂನು ಜಾರಿ ಮಾಡಬೇಕು ಎಂದು ಮತ್ತೊಬ್ಬ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ