ಪ್ರೇಮಿಗಳಿಗೆ ಪೋಷಕರೇ ವಿಲನ್: ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ, ಯುವತಿ ಕುಟುಂಬ ಜೈಲು ಪಾಲು
ಮಲತಾಯಿ ಕಾಟಕ್ಕೆ ನೊಂದಿದ್ದ ಯುವತಿ ಅಜ್ಜಿ ಮನೆಯಲ್ಲಿದ್ದುಕೊಂಡು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಳು. ಈ ಮೇಳೆ ತಮಿಳುನಾಡಿನ ಯುವಕನೊಂದಿಗೆ ಪ್ರೀತಿಯಾಗಿ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಇದನ್ನು ತಿಳಿದ ಯುವತಿ ಕುಟುಂಬಸ್ಥರು ಯುವಕನನ್ನು ಥಳಿಸಿ ಇಬ್ಬರನ್ನೂ ಬೇರೆ ಮಾಡಿದ್ದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವತಿ ಕುಟುಂಬಸ್ಥರನ್ನು ಬಂಧಿಸಲಾಗಿದೆ.
ಬೆಂಗಳೂರು, ಅ.10: ಕಾಲೇಜು ದಿನಗಳಲ್ಲಿ ಪ್ರೇಮಾಂಕುರವಾಗಿ (Love) ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದ ಪ್ರೇಮಿಗಳಿಗೆ ಪೋಷಕರೇ ವಿಲನ್ ಆಗಿದ್ದಾರೆ. ತಮ್ಮಿಷ್ಟದಂತೆ ಚಿಕ್ಕದೊಂದು ಗೂಡು ಕಟ್ಟಿಕೊಂಡು ಪ್ರೇಮಿಗಳಿಬ್ಬರು ಸಂತೋಷವಾಗಿ ಜೀವನ ನಡೆಸುತ್ತಿದ್ದರು. ಇದರಿಂದ ಕೋಪಗೊಂಡು ಮನೆಗೆ ಎಂಟ್ರಿ ಕೊಟ್ಟ ಯುವತಿಯ ಪೋಷಕರು ಪ್ರೇಮಿಗಳನ್ನು ದೂರ ಮಾಡಿದ್ದು ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ (Death). ರೈಲಿಗೆ ತಲೆ ಕೊಟ್ಟು ಪ್ರಾಣ ಕಳೆದುಕೊಂಡಿದ್ದಾನೆ. ಯುವತಿಯ ಕುಟುಂಬಸ್ಥರನ್ನು ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದ ಮಣಿಕಂಠ ಮತ್ತು ಐಶ್ವರ್ಯ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ವ್ಯಾಪ್ತಿಯಲ್ಲಿ ಮನೆ ಮಾಡಿಕೊಂಡು ಒಟ್ಟಿಗೆ ವಾಸವಿದ್ದರು. ಇವರಿಬ್ಬರ ಪ್ರೀತಿಗೆ ಯುವಕನ ಕುಟುಂಬಸ್ಥರು ಸಮ್ಮತ್ತಿ ನೀಡಿದ್ದರು. ಆದರೆ ಈ ಪ್ರೀತಿ ಯುವತಿಯ ಕುಟುಂಬಕ್ಕೆ ಇಷ್ಟ ಇರಲಿಲ್ಲ. ವಿಚಾರ ಗೊತ್ತಾಗುತ್ತಿದ್ದಂತೆ ಇವರಿಬ್ಬರಿದ್ದ ಮನೆಗೆ ಯುವತಿ ಕುಟುಂಬಸ್ಥರು ಆಗಮಿಸಿದ್ದಾರೆ. ಮಣಿಕಂಠ ಮತ್ತು ಐಶ್ವರ್ಯ ಇಬ್ಬರನ್ನು ರೂಮ್ ನಲ್ಲಿ ಕೂಡಿ ಹಾಕಿ ಥಳಿಸಿದ್ದಾರೆ. ಬಳಿಕ ಯುವತಿಯನ್ನ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಮನನೊಂದಿದ್ದ ಯುವಕ ಮಣಿಕಂಠ ತಮಿಳುನಾಡಿನ ಜೋಲಾರಪೇಟೆಗೆ ಹೋಗಿ ತನ್ನ ತಾಯಿ, ಪ್ರಿಯತಮೆಗೆ ಕರೆ ಮಾಡಿ ಮಾತಾಡಿ ರೈಲಿಗೆ ತಲೆ ಕೊಟ್ಟು ಪ್ರಾಣ ಕಳೆದುಕೊಂಡಿದ್ದಾನೆ.
ಆತ್ಮಹತ್ಯೆಗೂ ಮುನ್ನ ಕರೆ ಮಾಡಿ ಬೆಕ್ಕಿನ ಮರಿಯನ್ನು ಚನ್ನಾಗಿ ನೋಡಿಕೋ ಎಂದ ಯುವಕ
ಸಾವಿಗೂ ಮುನ್ನ ಮೃತ ಮಣಿಕಂಠ ತನ್ನ ತಾಯಿಗೆ ಲೊಕೇಶನ್ ಕಳುಹಿಸಿದ್ದ. ಅಲ್ಲದೆ ವಾಯ್ಸ್ ಮೆಸೇಜ್ ಕಳಿಸಿ ಕ್ಷಮೆ ಕೇಳಿದ್ದ. ಯುವತಿಗೆ ಫೋನ್ ಮಾಡಿ ಮಾತನಾಡಿದ್ದ. ನಮ್ಮಿಬ್ಬರ ನೆನಪಿಗೆ ಬೆಕ್ಕಿನ ಮರಿ ಇದೆ. ಅದನ್ನು ಚನ್ನಾಗಿ ನೋಡಿಕೋ ಎಂದಿದ್ದನಂತೆ. ಸದ್ಯ ಮೃತದೇಹ ಪತ್ತೆ ಆದ ಬಳಿಕ ತನಿಖೆ ಕೈಗೊಂಡಿದ್ದ ಜೋಲಾರಪೇಟೆ ರೈಲ್ವೇ ಪೊಲೀಸರು ಕೃತ್ಯ ನಡೆದ ಆಧಾರದ ಮೇಲೆ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ಕೇಸ್ ವರ್ಗಾವಣೆ ಮಾಡಿದ್ದಾರೆ. ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ಬಂದು ಯುವತಿ ಕೂಡ ತನ್ನ ಹೇಳಿಕೆ ದಾಖಲಿಸಿದ್ದಾಳೆ. ಸಾವಿಗೆ ಕಾರಣ ಆದ ತಮ್ಮ ಕುಟುಂವಸ್ಥರಿಗೆ ಶಿಕ್ಷೆ ಆಗಬೇಕು ಎಂದು ಮನವಿ ಮಾಡಿದ್ದಾಳೆ.
ಇದನ್ನೂ ಓದಿ: ಪ್ರಿಯತಮೆ, ಸ್ನೇಹಿತರ ನಗ್ನ ಚಿತ್ರಗಳು ಪೋಸ್ಟ್: ಪೊಲೀಸರಿಗೆ ದೂರು ಕೊಟ್ಟವನೇ ಸಿಕ್ಕಿಬಿದ್ದ, ವಿಕೃತ ಕಾಮಿಯ ನವರಂಗಿ ಆಟ ಬಯಲು
ಒಬ್ಬಟ್ಟಿಯಾಗಿ ಬದುಕು ಕಟ್ಟಿಕೊಂಡ ಯುವತಿ
ಇನ್ನು ತನ್ನ ಪ್ರೀತಿಯ ಸಾವಿಗೆ ಕಾರಣರಾದ ಕುಟುಂಬಸ್ಥರಿಂದ ಐಶ್ವರ್ಯ ದೂರವಾಗಿದ್ದು ಪ್ರತ್ಯೇಕವಾಗಿ ಬದುಕು ಕಟ್ಟಿಕೊಂಡಿದ್ದಾಳೆ. ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾಳೆ.
ಪೊಲೀಸರಿಗೆ ಯುವತಿ ನೀಡಿದ ಹೇಳಿಕೆಯಲ್ಲಿ ಏನಿದೆ?
ನಾನು ಒಂದೂವರೆ ವರ್ಷದವಳಿದ್ದಾಗ ತಾಯಿ ತೀರಿಕೊಂಡ್ರು. ಆಗ ನಮ್ಮ ತಂದೆ ಮತ್ತೊಂದು ವಿವಾಹವಾದ್ರು. ನನ್ನ ಮಲತಾಯಿ ನನಗೆ ಸಾಕಷ್ಟು ತೊಂದರೆ ನೀಡಿದ್ರು. ಆ ಕ್ಷಣದಿಂದ ನನ್ನ ಅಜ್ಜಿ ಮನೆಯಲ್ಲಿ ಬೆಳೆದಿದ್ದೆ. ಓದೋದಕ್ಕಾಗಿ ಬೆಂಗಳೂರಿನ ಖಾಸಗಿ ಕಾಲೇಜಿಗೆ ಸೇರಿದ್ದಾಗ ಅಲ್ಲಿ ಮಣಿಕಂಠನ ಪರಿಚಯವಾಗಿ ಪ್ರೀತಿ ಆಗಿತ್ತು. ಇಬ್ಬರು ಒಟ್ಟಿಗೆ ವಾಸ ಕೂಡ ಮಾಡ್ತಿದ್ವಿ. ನಮ್ಮ ಸಂಬಂಧಿಕರು ಬಂದು ಗಲಾಟೆ ಮಾಡಿದ್ರು. ಆತನ ಸಾವಿಗೆ ನಮ್ಮ ಕುಟುಂಬಸ್ಥರೇ ಕಾರಣ. ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳಿಕೆ ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ದೀಕ್ಷಿತ್, ಹೇಮಂತ್ ,ಚಿಕ್ಕಪ್ಪ ರವಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:05 am, Wed, 11 October 23