ವಿದ್ಯುತ್ ದರ ಏರಿಕೆ ಮಾಡುವುದು ರಾಜ್ಯ ಸರ್ಕಾರ ಅಲ್ಲ: ಇಂಧನ ಸಚಿವ ಸುನಿಲ್ ಕುಮಾರ್ ಹೇಳಿಕೆ
3 ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡುತ್ತಾ ಬರಲಾಗುತ್ತಿದೆ. ಇಲ್ಲಿ ಸರ್ಕಾರದಿಂದ ಯಾವುದೇ ದರ ಹೆಚ್ಚಳ ಮಾಡಿಲ್ಲ. ಇಂಧನ ದರ ಪರಿಷ್ಕರಣೆಯನ್ನ ಕೆಇಆರ್ಸಿಯೇ ಮಾಡಿದೆ ಎಂದು ಹೇಳಿದರು.
ಬೆಂಗಳೂರು: ವಿದ್ಯುತ್ ದರ ಏರಿಕೆ ಮಾಡುವುದು ರಾಜ್ಯ ಸರ್ಕಾರ ಅಲ್ಲ. ವಿದ್ಯುತ್ ದರ (Electricity Rate) ಏರಿಕೆ ಕುರಿತು ಕೆಇಆರ್‌ಸಿ ನಿರ್ಧರಿಸುತ್ತದೆ ಎಂದು ನಗರದಲ್ಲಿ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿಕೆ ನೀಡಿದರು. ಸಿದ್ದರಾಮಯ್ಯ ಸರ್ಕಾರದಲ್ಲಿ 2013-14ರಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೂ ದರ ಪರಿಷ್ಕರಣೆ ಮಾಡಲಾಗುತ್ತಿದೆ. 3 ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡುತ್ತಾ ಬರಲಾಗುತ್ತಿದೆ. ಇಲ್ಲಿ ಸರ್ಕಾರದಿಂದ ಯಾವುದೇ ದರ ಹೆಚ್ಚಳ ಮಾಡಿಲ್ಲ. ಇಂಧನ ದರ ಪರಿಷ್ಕರಣೆಯನ್ನ ಕೆಇಆರ್ಸಿಯೇ ಮಾಡಿದೆ ಎಂದು ಹೇಳಿದರು.
ರಕ್ತದೋಕುಳಿ ಆದಾಗ ಕಾಂಗ್ರೆಸ್ನವರು ಉಸಿರೆತ್ತಲ್ಲ
ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣ ಸಂಬಂಧ ವಿಧಾನಸೌಧದಲ್ಲಿ ಸಚಿವ ವಿ.ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಇಸ್ಲಾಮಿಕ್ ಭಯೋತ್ಪಾದನೆಯ ಮುಂದುವರಿದ ಭಾಗವಿದು. ಇಲ್ಲಿಯವರೆಗೆ ಕಾಶ್ಮೀರ, ಕೇರಳದಲ್ಲಿ, ಕರ್ನಾಟಕದಲ್ಲಾಗಿತ್ತು. ಆದರೆ ಇಂದು ರಾಜಸ್ಥಾನದಲ್ಲೂ ಆಗಿದೆ. ಹೀಗೆ ಮುಂದುವರಿದರೆ ಬದುಕುವುದು ಬಹಳ ಕಷ್ಟವಾಗುತ್ತದೆ. ರಾಜಸ್ಥಾನ ಸರ್ಕಾರ ಯಾಕೆ ಬಿಗಿ ಕ್ರಮ ತೆಗೆದುಕೊಳ್ಳಲಿಲ್ಲ. ಈ ಘಟನೆಯ ಹಿಂದೆ ಸಾವಿರಾರು ಜನರ ಕೈವಾಡ ಇದೆ. ಪ್ರಧಾನಿ ಮೋದಿಯನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ.
ನಮ್ಮ ಶಿಕ್ಷಣ ಪದ್ದತಿಯಿಂದ ಶಿಕ್ಷಣ ಪಡೆದವರಿಂದ ಇಂತಹ ಕೃತ್ಯ ಆಗಲು ಸಾಧ್ಯವಿಲ್ಲ. ಇಸ್ಲಾಂ ಭಯೋತ್ಪಾದನೆಯ ಮಾನಸಿಕತೆ ಕುತ್ತಿಗೆ ಕಡಿಯುವ ಮಟ್ಟಕ್ಕೆ ಇದೆ ಅಂತಾದರೆ ಇದರ ಹಿಂದೆ ಎರಡು ಜನ ಮಾತ್ರ ಇದ್ದಾರೆ ಅಂತಾ ಅನ್ನಿಸುತ್ತಿಲ್ಲ. ದೇಶದ ಜನ ಇಸ್ಲಾಂ ಭಯೋತ್ಪಾದನೆಯ ವಿರುದ್ಧ ಎದ್ದು ನಿಲ್ಲಬೇಕು. ವೋಟ್ ಬ್ಯಾಂಕ್ ಪುಷ್ಟೀಕರಣ ಇರುವವರೆಗೂ ಈ ರೀತಿಯ ಘಟನೆ ಆಗುತ್ತಿರುತ್ತದೆ. ಉದಯಪುರದ ಮಾನಸಿಕತೆಯ ವ್ಯಕ್ತಿಗಳೇ ಬೆಂಗಳೂರಿನಲ್ಲಿ ಶಾಸಕನ ಮನೆಗೆ ಬೆಂಕಿ, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಾಕುವ ಪ್ರಯತ್ನ ಮಾಡಿದ್ದರು. ಇಂತಹ ಘಟನಗಳನ್ನು ಲಘುವಾಗಿ ಪರಿಗಣಿಸುವ ಕೆಲಸವನ್ನು ಕಾಂಗ್ರೆಸ್ ಹಲವು ಬಾರಿ ಮಾಡಿದೆ. ಸಿದ್ದರಾಮಯ್ಯನವರ ಎದೆ ನಿಜವಾಗಿಯೂ ನಡುಗಿದೆಯೋ ಅಂತಾ ಮುಂದೆ ನೋಡಬೇಕು.
ಸಿದ್ದರಾಮಯ್ಯ ಅವಧಿಯಲ್ಲಿ 18 ಕ್ಕೂ ಹೆಚ್ಚು ಹಿಂದು ಯುವಕರ ಹತ್ಯೆ ನಡೆದಾಗ ಯಾವತ್ತೂ ಅವರಿಗೆ ಎದೆ ನಡುಗಲಿಲ್ಲ. ಅವರ ಧರ್ಮಗುರುಗಳು ಅವರ ಯುವಕರಿಗೆ ಬುದ್ದಿವಾದ ಹೇಳಬೇಕು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ಯುವಕರು ಇಲ್ಲಿ ಇರಬೇಕಾ ಅಂತಾ ಪ್ರಶ್ನೆ ಉದ್ಭವಿಸುತ್ತದೆ. ಒಂದು ವಾರ ಮೊದಲೇ ಟೈಲರ್ನನ್ನು ಕೊಲ್ಲುವುದಾಗಿ ಹೇಳಿದ್ದರೂ ಯಾಕೆ ರಾಜಸ್ಥಾನ ಸರ್ಕಾರ ಬಿಗಿ ಕ್ರಮ ತೆಗೆದುಕೊಳ್ಳಲಿಲ್ಲ? ಪ್ರಧಾನಿಗೆ ಬೆದರಿಕೆ ಹಾಕುವ ಮಟ್ಟಿಗೆ ಎದ್ದು ನಿಲ್ಲುತ್ತಾರೆಂದರೆ ಇದರ ಹಿಂದೆ ಬೆಂಬಲಿಸುವ ಮಾನಸಿಕ ವ್ಯಕ್ತಿಗಳು, ಸಂಘಟನೆಗಳು ಎಷ್ಟು ಇವೆ ಅಂತಾ ಗೊತ್ತಾಗುತ್ತದೆ. ಕಾಂಗ್ರೆಸ್ಸಿಗರಿಗೆ ಕಲ್ಲಂಗಡಿ ಘಟನೆ ಬಹಳ ದೊಡ್ಡ ಅನ್ಯಾಯ ಅನ್ನಿಸಿತು. ರಸ್ತೆಯಲ್ಲಿ ರಕ್ತದೋಕುಳಿ ಹರಿದಾಗ ಖಂಡಿಸಬೇಕು ಅಂತಾ ಅನ್ನಿಸಲಿಲ್ಲ. ತುಷ್ಟೀಕರಣ ರಾಜಕಾರಣ ನಿಲ್ಲಿಸಲಿಲ್ಲ ಅಂತಾದರೆ ಯಾರ್ಯಾರ ಮನೆಗೆ ಬೆಂಕಿ ಬೀಳುತ್ತದೋ ಗೊತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Paneer Facial: ಪನೀರ್ ಫೇಷಿಯಲ್ ಮಾಡಿ, ನುಣುಪಾದ ಕಾಂತಿಯುತ ತ್ವಚೆ ಪಡೆಯಿರಿ