ಬೆಂಗಳೂರು, ಜ.03: ವಿಶ್ವ ಗುರು, ರಾಜ್ಯದ ಸಾಂಸ್ಕೃತಿಕ ನಾಯಕ, ಅಂದಿನ ಸಮಾಜದಲ್ಲಿ ಸಮಾನತೆಯ ಪಾಠ ಮಾಡಿ ಸಂಸತ್ತಿನ ಪರಿಕಲ್ಪನೆಯನ್ನ ಇಡೀ ಜಗತ್ತಿಗೆ ಸಾರಿದ ನಾಯಕ ಬಸವಣ್ಣ (Basavanna). ಇದೇ ಬಸವಣ್ಣನ ಪ್ರತಿಮೆಗೆ ಬೆಳಕಿನ ಭಾಗ್ಯ ಬೇಕಿದೆ. ಕಳೆದ ನಾಲ್ಕು ವರ್ಷದಿಂದ ಉದ್ಘಾಟನೆ ಕಾಣದೇ ಅನಾಥವಾಗಿದ್ದು, ಉದ್ಘಾಟನೆಗೆ ಸ್ಥಳೀಯ ಜಪ್ರತಿನಿಧಿಗಳು ಹಾಗೂ ಶಾಸಕರು ಉತ್ಸಾಹ ತೋರದೇ ಇರುವುದು ವೀರಶೈವ ಲಿಂಗಾಯತ ಮಹಾಸಭಾ ಅಸಮಾಧಾನಕ್ಕೆ ಕಾರಣವಾಗಿದೆ.
ಕರ್ನಾಟಕದ ಸಾಂಸ್ಕೃತಿಕ ನಾಯಕ, 12ನೇ ಶತಮಾನದ ಸಮಾಜ ಸುಧಾರಕ ವಿಶ್ವಗುರು ಬಸವಣ್ಣ. ಇದೇ ಜಗಜ್ಯೋತಿ ಬಸವಣ್ಣನ ಪ್ರತಿಮೆ, ಕಳೆದ ನಾಲ್ಕು ವರ್ಷದಿಂದ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ರಾಜಾಜಿನಗರ ಕ್ಷೇತ್ರದ, ವೆಸ್ಟ್ ಹಾಫ್ ಕಾರ್ಡ್ ರಸ್ತೆಯ, ನವರಂಗ್ ಬ್ರಿಡ್ಜ್ ಬಳಿ, ಬಸವಣ್ಣರ ಪ್ರತಿಮೆಯನ್ನು 2019ರಲ್ಲಿ ತಂದು ನಿಲ್ಲಿಸಲಾಗಿದೆ. ಕಾಮಗಾರಿ ಎಲ್ಲ ಮುಗಿದು, ಸಣ್ಣಪುಟ್ಟ ಕಾಮಗಾರಿ ಮಾತ್ರ ಬಾಕಿಯಿದೆ. ಆದರೆ ಸ್ಥಳೀಯ ಬಿಜೆಪಿ ಶಾಸಕ ಸುರೇಶ್ ಕುಮಾರ್ ಮಾತ್ರ ಉದ್ಘಾಟನೆಗೆ ಉತ್ಸಾಹ ತೋರಿಸ್ತಿಲ್ಲ ಅಂತ ವೀರಶೈವ ಲಿಂಗಾಯತ ಮಹಾಸಭಾದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಮೆಗೆ ಟಾರ್ಪಲ್ ಹಾಕಿ, ಮುಚ್ಚಿದ್ದು, ಆದಷ್ಟು ಬೇಗ ಉದ್ಘಾಟನೆಯ ಭಾಗ್ಯ ಕಲ್ಪಿಸಬೇಕೆಂದು ಒತ್ತಾಯಿಸುತ್ತಿದ್ದು, ಈ ಬಗ್ಗೆ ಸಿಎಂ, ಡಿಸಿಎಂ ಗೆ ಪತ್ರ ಕೂಡ ಬರೆದಿದ್ದಾರೆ.
ಇದನ್ನೂ ಓದಿ: ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ: ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಚನಾನಂದ ಸ್ವಾಮೀಜಿ ಮೆಚ್ಚುಗೆ
2018-2029 ನೇ ಸಾಲಿನಲ್ಲಿ, ಮೇಯರ್ ಫಂಡ್ಸ್ ನಲ್ಲಿ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಅಂದಿನ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್ ಅನುಮೋದನೆ ನೀಡಿದ್ದರು. 1 ಕೋಟಿ ವೆಚ್ಚದಲ್ಲಿ, 13 ಅಡಿ ಎತ್ತರ, ಎರಡು ಟನ್ ತೂಕವಿರುವ ಕಂಚಿನ ಪ್ರತಿಮೆ ಸ್ಥಾಪನೆಗಾಗಿ, ಮೇಲ್ಸೆತುವೆಯ ಮೇಲೆ ಪ್ರತ್ಯೇಕವಾದ ಪಿಲ್ಲರ್ ಗಳನ್ನೂ ನಿರ್ಮಿಸಲಾಗಿದೆ. ಪ್ರತಿಮೆಯ ಕೆಲಸ ಎಲ್ಲವೂ ಪೂರ್ತಿಯಾಗಿದೆ. ಪ್ರತಿಮೆಯ ಸುತ್ತ ಸರಳು, ಮೆಟ್ಟಿಲು ಸೇರಿ ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಇದ್ದು, ಇದನ್ನ ಒಂದು ವಾರದೊಳಗೆ ಮುಗಿಸಬಹುದು. ಆದರೆ ಜನಪ್ರತಿನಿಧಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷಕ್ಕೆ ಒಳಗಾಗಿ ಯಾವುದೇ ಸೆಫ್ಟಿ ಇಲ್ಲದೇ ಪ್ರತಿಮೆ ನಿಂತಿದೆ. ಉದ್ಘಾಟನೆ ಮಾಡುವಂತೆ ಸಮುದಾಯದ ನಾಯಕರು ಸ್ಥಳೀಯ ಶಾಸಕರನ್ನ ಭೇಟಿ ಮಾಡಿ, ಮನವಿ ಮಾಡಿದ್ರೂ ಯಾವುದೇ ರೀತಿಯಾಗಿ ಸ್ಪಂದನೆಯಿಲ್ಲ ಅಂತ ಸಾಮಾಜಿಕ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ.
ಜಗಜ್ಯೋತಿ ಬಸವಣ್ಣರ ಪ್ರತಿಮೆಗೆ, ನಾಲ್ಕು ವರ್ಷದಿಂದ ಟಾರ್ಪಲ್ ಸುತ್ತಿದ್ದು, ಕತ್ತಲೆಯಿಂದ ಬೆಳಕಿನ ಭಾಗ್ಯ ಸಿಕ್ಕಿಲ್ಲ. ಸುತ್ತಿದ ಟಾರ್ಪಲ್ ದೂಳು ಹಿಡಿಯುತ್ತಿದೆ. ತಾತ್ಕಾಲಿಕವಾಗಿ ನಿಲ್ಲಿಸಿರೋ ಈ ಪ್ರತಿಮೆಗೆ ಜೋರಾದ ಗಾಳಿ ಬೀಸಿದ್ರೆ ಬೀಳೋ ಸಾಧ್ಯತೆಯೂ ಇದೆ. ಅದೇನೆ ಇರಲಿ ಆದಷ್ಟು ಬೇಗನೆ ಸಣ್ಣಪುಟ್ಟ ಕಾಮಗಾರಿ ಮುಗಿಸಿ ಬಸವಣ್ಣರ ಪ್ರತಿಮೆ ಉದ್ಘಾಟನೆ ಆಗಬೇಕೆನ್ನುವುದು ನಮ್ಮ ನಿಮ್ಮೆಲ್ಲರ ಆಶಯ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ