ಅಂಚೆ ಮೂಲಕ ಗಿಫ್ಟ್ ಬಾಕ್ಸ್ನಲ್ಲಿ ನಗರಕ್ಕೆ ಡ್ರಗ್ಸ್ ಆಮದು, ಆರೋಪಿಯನ್ನ ಬಂಧಿಸಿದ ಸಿಸಿಬಿ
ಬೆಂಗಳೂರಿನಲ್ಲಿ ಡ್ರಗ್ಸ್ ಪೆಡ್ಲರ್ಗಳ ಹಾವಳಿ ಹೆಚ್ಚಾಗಿದೆ. ಅಮಾಯಕ ಯುವಕ, ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ಡ್ರಗ್ಸ್ ಮಾರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಡ್ರಗ್ಸ್ ಪೆಡ್ಲರ್ಗಳ ಮೇಲೆ ಕಣ್ಣಿಟ್ಟಿದ್ದು, ಆರೋಪಿಗಳ ಹೆಡೆಮುರಿ ಕಟ್ಟುತ್ತಿದ್ದಾರೆ. ಅದರಂತೆ ಇದೀಗ ಸಿಸಿಬಿ ಪೊಲೀಸರು ಅಂಚೆ ಮೂಲಕ ನಗರಕ್ಕೆ ಡ್ರಗ್ಸ್ ಆಮದು ಮಾಡಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 03: ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ (Drugs) ಮತ್ತು ಡ್ರಗ್ ಪೆಡ್ಲರ್ಗಳ (Drug Peddler) ಹಾವಳಿ ಹೆಚ್ಚಾಗಿದೆ. ಇದನ್ನು ಶಮನಗೊಳಿಸಲು ಕೇಂದ್ರ ಅಪರಾಧ ವಿಭಾಗದ (CCB) ಅಧಿಕಾರಿಗಳು ಟೊಂಕ ಕಟ್ಟಿ ನಿಂತಿದ್ದಾರೆ. ಇಷ್ಟು ದಿನಗಳ ಕಾಲ ಡ್ರಗ್ ಪೆಡ್ಲರ್ಗಳು ವಿದೇಶದಿಂದ ಮಾದಕ ವಸ್ತು ತಂದು ಇಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ ಇದೀಗ ಡ್ರಗ್ಸ್ ಭಾರತೀಯ ಅಂಚೆ ಮೂಲಕವೇ ನಗರಕ್ಕೆ ಬರುತ್ತಿದೆ. ಹೌದು ಹೊರ ರಾಜ್ಯಗಳಿಂದ ಅಂಚೆ ಮೂಲಕ ಮೂಲಕ ನಗರಕ್ಕೆ ಮಾದಕವಸ್ತು ಆಮದಾಗಿದ್ದು, ಈ ವಿಚಾರ ತಿಳಿದ ಸಿಸಿಬಿ ಪೊಲೀಸರು ಡ್ರಗ್ಸ್ ಬಂದ ಪಾರ್ಸಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಅಂಚೆ ಮೂಲಕ ಡ್ರಗ್ಸ್ ಬಂದ ವಿಚಾರವನ್ನು ತಿಳಿದ ಸಿಸಿಬಿ ಪೊಲೀಸರು ಕೂಡಲೆ ಫಿಲ್ಡ್ಗೆ ಇಳಿದಿದ್ದಾರೆ. ಚರಸ್ ಮಾದಕ ವಸ್ತು ಗಿಫ್ಟ್ ಬಾಕ್ಸ್ ರೂಪದಲ್ಲಿ ಅಂಚೆ ಮೂಲಕ ನಗರಕ್ಕೆ ಬಂದಿದೆ. ಈ ಗಿಫ್ಟ್ ಬಾಕ್ಸ್ ಅನ್ನು ಜಾರ್ಖಂಡ್ ಮೂಲದ ರಿತಿಕ್ ರಾಜ್ ಎಂಬುವನು ಪಡೆಯುತ್ತಿದ್ದಾಗ, ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಂತರ ಸಿಸಿಬಿ ಪೊಲೀಸರು ಆರೋಪಿಯಿಂದಲೇ ಬಾಕ್ಸ್ ಓಪನ್ ಮಾಡಿಸಿದ್ದಾರೆ. ಬಾಕ್ಸ್ ಓಪನ್ ಮಾಡಿದಾಗ ಚರಸ್ ಇರುವುದು ಪತ್ತೆಯಾಗಿದೆ.
ಸುಮಾರು 6.50 ಲಕ್ಷ ಮೌಲ್ಯದ 130 ಗ್ರಾಂ ಚರಸ್ ಪತ್ತೆಯಾಗಿದೆ. ಕೇರಳ ಮೂಲದ ಆರೋಪಿ ಅದಿತ್ ಸರ್ವೋತ್ತಮ್ ರಿಷಿಕೇಷದಿಂದ ಅಂಚೆ ಮೂಲಕ ಚರಸ್ ಕಳುಸಿದ್ದನು. ಇತ್ತ ರಿತಿಕ್ ರಾಜ್ ಅರೆಸ್ಟ್ ಆಗಿರುವ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಅದಿತ್ ಸರ್ವೋತ್ತಮ್ ತಲೆಮರೆಸಿಕೊಂಡಿದ್ದಾನೆ. ಈ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರಿಂದ ಡ್ರಗ್ಸ್ ವಿರುದ್ದ ಜಾಗೃತಿ; ನೋ ಡ್ರಗ್ಸ್ ಎಂದ ನಟ ಗಣೇಶ್
1 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಜಪ್ತಿ
ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ಕೆಲವು ದಿನಗಳ ಹಿಂದೆ ನಗರದಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದು, ಏಳು ಜನ ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದ್ದರು. ಪುಲಿಕೇಶಿನಗರ, ಬಾಣಸವಾಡಿ, ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿ ಸೇರಿದಂತೆ ನಗರದ ಹಲವೆಡೆ ಆರೋಪಿಗಳು ಡ್ರಗ್ಸ್ ಮಾರುತ್ತಿದ್ದರು. 219 ಎಕ್ಸ್ಟೆಸಿ ಪಿಲ್ಸ್, 505 ಗ್ರಾಂ ಎಂಡಿಎಂಎ ಕ್ರಿಸ್ಟಲ್, 130 ಗ್ರಾಂ ತೂಕದ ಚರಸ್, ಕೊಕೇನ್ ಒಟ್ಟು 1 ಕೋಟಿ 52 ಲಕ್ಷದ 50 ಸಾವಿರ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದರು.
21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ಆಫ್ರಿಕಾ ಮೂಲದ ಆರೋಪಿ ಬಂಧನ
ಹೊಸ ವರ್ಷಕ್ಕೆಂದು ಮಾರಾಟಕ್ಕೆ 21 ಕೋಟಿ ಮೌಲ್ಯದ ಡ್ರಗ್ಸ್ ತಂದಿದ್ದ ಆಫ್ರಿಕಾ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಲಿಯೋನಾರ್ಡ್ ಓಕ್ವುಡಿಲಿ ಬಂಧಿತ ಆರೋಪಿ. ಬಂಧಿತನಿಂದ 21 ಕೋಟಿ ಮೌಲ್ಯದ 16 ಕೆಜಿ ಎಂಡಿಎಂಎ, 500 ಗ್ರಾಂ ಕೊಕೆನ್ ಜಪ್ತಿ ಮಾಡಲಾಗಿತ್ತು.
ಬ್ಯುಸಿನೆಸ್ ವೀಸಾ ಪಡೆದುಕೊಂದು ಆರೋಪಿ ಲಿಯೋನಾರ್ಡ್ ಬೆಂಗಳೂರಿಗೆ ಬಂದು ರಾಮಮೂರ್ತಿನಗರದಲ್ಲಿ ನೆಲೆಸಿದ್ದನು. ಈ ಹೊಸ ವರ್ಷಕ್ಕೆ ಮತ್ತೇರಿಸಲು ಅಪಾರ ಪ್ರಮಾಣದ ಡ್ರಗ್ಸ್ ತಂದಿದ್ದನು. ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಡ್ರಗ್ಸ್ ವಶಕ್ಕೆ ಪಡೆದಿದ್ದರು. ಆರೋಪಿಯು ಬೆಡ್ಶೀಟ್ ಕವರ್, ಸೋಪ್ ಬಾಕ್ಸ್ ಹಾಗೂ ಚಾಕೊಲೇಟ್ ಬಾಕ್ಸ್ನಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದನು. ಹೊಸ ವರ್ಷಕ್ಕೆ ರೇವ್ ಪಾರ್ಟಿಗೆ ಡ್ರಗ್ಸ್ ಸಾಗಿಸಲು ಮುಂದಾಗಿದ್ದ ವೇಳೆ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದನು. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ