ಹೈಕೋರ್ಟ್ ಆದೇಶ ಪ್ರಶ್ನಿಸಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ಮಾಡಲು ನಿರಾಕರಿಸಿದ ಸುಪ್ರೀಂಕೋರ್ಟ್

|

Updated on: Feb 20, 2023 | 4:48 PM

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಕೆಲ ಸದಸ್ಯರ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಹೈಕೋರ್ಟ್ ಆದೇಶ ಪ್ರಶ್ನಿಸಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ಮಾಡಲು ನಿರಾಕರಿಸಿದ ಸುಪ್ರೀಂಕೋರ್ಟ್
ಯಡಿಯೂರಪ್ಪ
Image Credit source: indianexpress.com
Follow us on

ಬೆಂಗಳೂರು: ತಮ್ಮ ಹಾಗೂ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa)  ಅವರು ಸಲ್ಲಿಸಿದ್ದ ಅರ್ಜಿಯನ್ನು ಇಂದು (ಫೆಬ್ರವರಿ 20) ವಿಚಾರಣೆ ನಡೆಸಲು ಸುಪ್ರೀಂಕೋರ್ಟ್(supreme court of india) ನಿರಾಕರಿಸಿದೆ. ಯಡಿಯೂರಪ್ಪ ಹಾಗೂ ಅವರ ಕೆಲವು ಕುಟುಂಬ ಸದಸ್ಯರ ವಿರುದ್ಧ ಖಾಸಗಿ ದೂರನ್ನು ಹೈಕೋರ್ಟ್ ಮರು ತನಿಖೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಬಿಎಸ್​ವೈ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದ್ರೆ, ಇದೀಗ ಸುಪ್ರೀಂಕೋರ್ಟ್ ಸಿಜೆಐ, ಇಂದು ಪ್ರಕರಣದ ವಿಚಾರಣೆ ನಡೆಸಲು ನಿರಾಕರಿಸಿದ್ದು, ಮತ್ತೊಂದು ದಿನ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.ಅಲ್ಲದೇ ಮಂಗಳವಾರ ಅಥವಾ ಸಾಮಾನ್ಯ ವಿಚಾರಣಾ ದಿನ ಪಟ್ಟಿಗೆ ಸೇರಿಸುವಂತೆ ಸೂಚಿಸಿದರು.

ಇದನ್ನೂ ಓದಿ: ಬಿಎಸ್ ಯಡಿಯೂರಪ್ಪ ವಿರುದ್ಧದ ತನಿಖೆಗೆ ಸುಪ್ರೀಂ ಮಧ್ಯಂತರ ತಡೆ

ಭ್ರಷ್ಟಾಚಾರ ಆರೋಪ ಪ್ರಕರಣ (Corruption Case) ಸಂಬಂಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕುಟುಂಬದ ವಿರುದ್ಧ ಮರು ವಿಚಾರಣೆಗೆ ಹೈಕೋರ್ಟ್ (Karnataka High Court) ಆದೇಶ ನೀಡಿತ್ತು. ಈ ಹಿಂದೆ ಪ್ರಾಸಿಕ್ಯೂಷನ್​​ಗೆ ಪೂರ್ವಾನುಮತಿ ಸಿಗದ ಕಾರಣ ಈ ಕೇಸ್ ವಜಾಗೊಂಡಿದ್ದು, ಮಾಜಿ ಸಿಎಂಗೆ ಕೊಂಚ ನೆಮ್ಮದಿ ಕೊಟ್ಟಿತ್ತು. ಬಳಿಕ ಹೈಕೋರ್ಟ್ ವಿಚಾರಣಾ ಕೋರ್ಟ್​​​ ಹಿಂದಿನ ವಜಾ ಆದೇಶ ರದ್ದುಪಡಿಸಿ, ಪ್ರಕರಣ ಮರು ವಿಚಾರಣೆಗೆ ಆದೇಶಿಸಿತ್ತು, ತನಿಖೆ ನಡೆಸುವಂತೆ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ಜಡ್ಜ್ ಕೋರ್ಟ್ ಸೂಚಿಸಿತ್ತು. ಈ ಆದೇಶ ಪ್ರಶ್ನಿಸಿ ಬಿಎಸ್​ವೈ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಅಧಿಕಾರ ದುರ್ಬಳಕೆ ಮಾಡಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗಂ ಕನಸ್ಟ್ರಕ್ಷನ್‌ ಕಂಪನಿಯಿಂದ ಕೋಟ್ಯಾಂತರ ರೂಪಾಯಿ ನಗದು ಮತ್ತು ಶೆಲ್‌ ಕಂಪೆನಿಗಳ ಮೂಲಕ ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಖಾಸಗಿ ದೂರು ದಾಖಲಿಸಿದ್ದರು.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮತ್ತು ಅವರ ಕುಟುಂಬದವರ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿ ತನಿಖೆಗೆ ವಹಿಸಬೇಕೆಂದು ಕೋರಿ ಪಿಐಎಲ್ ಸಲ್ಲಿಸುವುದಕ್ಕೆ ಅವಕಾಶ ನೀಡುವಂತೆ ಹೈಕೋರ್ಟ್​ನಲ್ಲಿ ಟಿ.ಜೆ.ಅಬ್ರಹಾಂ ಅರ್ಜಿ ಸಲ್ಲಿಸಿದ್ದರು. ಆದರೆ ಟಿ.ಜೆ.ಅಬ್ರಹಾಂ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್​, ಈ ಹಿಂದೆ ಅರ್ಜಿದಾರರು ಖಾಸಗಿ ದೂರು ಸಲ್ಲಿಸಿದ್ದ ಹಿನ್ನೆಲೆ ಈಗಿನದನ್ನು ಪಿಐಎಲ್ ಆಗಿ ಪರಿಗಣಿಸಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ತಿರಸ್ಕರಿಸಿತ್ತು.

ಇದನ್ನೂ ಓದಿ: ಬಿಎಸ್ ಯಡಿಯೂರಪ್ಪ, ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ: ಎಫ್ಐಆರ್ ದಾಖಲಿಸಿ, ತನಿಖೆಗೆ ವಿಶೇಷ ಕೋರ್ಟ್ ಆದೇಶ

ಅದೇ ವೇಳೆ, ಅರ್ಜಿಯನ್ನು ಮಾರ್ಪಡಿಸಿ ಸಂಬಂಧಿಸಿದ ಪೀಠಕ್ಕೆ ವರ್ಗಾಯಿಸಲು ರಿಜಿಸ್ಟ್ರಾರ್ ಜನರಲ್‌ರಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಪೂರ್ವಾನುಮತಿ ನಿರಾಕರಣೆ ಹಿನ್ನೆಲೆ ಇತ್ತೀಚೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶಿಸಲು ನಿರಾಕರಿಸಿತ್ತು. ಹೀಗಾಗಿ ಟಿ.ಜೆ.ಅಬ್ರಹಾಂ ಹೈಕೋರ್ಟ್ ಮೆಟ್ಟಿಲೇರಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.