ಸದನದಲ್ಲೂ ಪ್ರತಿಧ್ವನಿಸಿದ ಮಹಿಳಾ ಐಎಎಸ್ vs ಐಪಿಎಸ್ ವಾರ್; ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಕ್ಸಮರ
ರೋಹಿಣಿ ಸಿಂಧೂರಿ ಮೇಲೆ ಮುಗಿ ಬೀಳುತ್ತಿರುವ ಡಿ.ರೂಪಾ ಅವರು ಮೇಲಿಂದ ಮೇಲೆ ಸಿಂಧೂರಿ ವಿರುದ್ಧ ಪೋಸ್ಟ್ಗಳನ್ನು ಮಾಡುತ್ತಲೇ ಇದ್ದಾರೆ. ಇವರಿಬ್ಬರ ಜಟಾಪಟಿ ಇದೀಗ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ್ದು, ಆಡಳಿತ ಮತ್ತು ವಿಪಕ್ಷ ನಡುವೆ ವಾಕ್ಸಮರ ನಡೆಯಿತು.
ವಿಧಾನಸಭೆ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮೇಲೆ ಮುಗಿ ಬೀಳುತ್ತಿರುವ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗೀಲ್ (D.Roopa Moudgil) ಅವರು ಮೇಲಿಂದ ಮೇಲೆ ಸಿಂಧೂರಿ ವಿರುದ್ಧ ಪೋಸ್ಟ್ಗಳನ್ನು ಮಾಡುತ್ತಲೇ ಇದ್ದಾರೆ. ಇವರಿಬ್ಬರ ಜಟಾಪಟಿ ಇದೀಗ ವಿಧಾನಸಭೆಯಲ್ಲೂ (Karnataka Legislative Assembly) ಪ್ರತಿಧ್ವನಿಸಿದ್ದು, ಆಡಳಿತ ಮತ್ತು ವಿಪಕ್ಷ ನಡುವೆ ವಾಕ್ಸಮರ ನಡೆಯಿತು. ಬಜೆಟ್ ಮೇಲಿನ ಚರ್ಚೆ ವೇಳೆ ಮಳವಳ್ಳಿ ಜೆಡಿಎಸ್ ಶಾಸಕ ಅನ್ನದಾನಿ ಅವರು ಇಬ್ಬರು ಮಹಿಳಾ ಅಧಿಕಾರಿಗಳ ಜಟಾಪಟಿ ಬಗ್ಗೆ ಪ್ರಸ್ತಾಪ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಅಧಿಕಾರಿಗಳ ಕಿತ್ತಾಟದಿಂದ ನಮ್ಮ ಮಾನ ಮರ್ಯಾದೆ ಹರಾಜು ಆಗುತ್ತಿದೆ ಎಂದರು. ಈ ವೇಳೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಮಹಿಳಾ ಐಎಎಸ್, ಐಪಿಎಸ್ ವಾರ್ ಬಗ್ಗೆ ಆ ಮೇಲೆ ಮಾತಾಡೋಣ ಎಂದರು. ಸ್ಪೀಕರ್ ಭರವಸೆ ನೀಡಿದ ಬಳಿಕ ಅನ್ನದಾನಿ ಸುಮ್ಮನಾದರು.
ಮಾತು ಮುಂದುವರಿಸಿದ ಸಿದ್ದರಾಮಯ್ಯ ಅವರು, ನಾವು ಡಿ.ಕೆ. ರವಿ, ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದೇವೆ. ನೀವು ಅಧಿಕಾರದಲ್ಲಿದ್ದಾಗ ಒಂದೇ ಒಂದು ಸಿಬಿಐಗೆ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದರು. ಈ ವೇಳೆ ಎದ್ದುನಿಂತು ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಜಿ, ಬಜೆಟ್ ಮೇಲೆ ಮಾತಾಡುವಂತೆ ಮನವಿ ಮಾಡಿದರು. ಈ ವೇಳೆ ಸಿದ್ದರಾಮಯ್ಯ ಅವರು, ನೀವು ನನ್ನ ಮೇಲೆ ಆರೋಪ ಮಾಡುವುದು ಸರೀನಾ ಎಂದು ಹೇಳಿ ತನ್ನ ಕಾಲದಲ್ಲಿ ಸಿಬಿಐಗೆ ಕೊಟ್ಟಿದ್ದ 8 ಕೇಸ್ಗಳ ಬಗ್ಗೆ ವಿವರ ಕೊಟ್ಟರು. ಅಲ್ಲದೆ, ಆಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತಲ್ಲ ಎಂದರು. ಈ ವೇಳೆ ಎದ್ದುನಿಂತ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ್, ಸಾಕ್ಷ್ಯಗಳನ್ನೇ ನಾಶ ಮಾಡಿ ಕೊಟ್ರಲ್ಲಾ ಎಂದರು. ನಂತರ ಸದನದಲ್ಲಿ ನಡೆದಿದ್ದು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಕ್ಸಮರ.
ಇದನ್ನೂ ಓದಿ: ಡಿ.ರೂಪಾ ಮತ್ತು ರೋಹಿಣಿ ಸಿಂಧೂರಿ ಜಟಾಪಟಿ: ಸತ್ಯಶೋಧನೆ ಜವಾಬ್ದಾರಿ ಪತ್ರಕರ್ತರದ್ದು ಎಂದ ಪ್ರತಾಪ್ ಸಿಂಹ
ಸಾಕ್ಷ್ಯಗಳನ್ನೇ ನಾಶ ಮಾಡಿ ಕೊಟ್ರಲ್ಲಾ ಎಂದ ರೂಪಾಲಿ ನಾಯ್ಕ್ ವಿರುದ್ಧ ಕಾಂಗ್ರೆಸ್ ಶಾಸಕರು ವಾಗ್ದಾಳಿ ನಡೆಸಿದರು. ಈ ವೇಳೆ ಸಭಾಪತಿ ಅವರು, ರೂಪಾಲಿಗೆ ಕುಳಿತುಕೊಳ್ಳುವಂತೆ ಹೇಳಿದರು. ಆದರೆ ಸ್ಪೀಕರ್ ಮಾತು ಕೇಳದ ಶಾಸಕಿ ರೂಪಾಲಿ ನಾಯ್ಕ್, ಹಲವು ಬಾರಿ ಮನವಿ ಮಾಡಿದರೂ ಮಾತು ಕೇಳದೇ ವಿಪಕ್ಷಗಳ ವಿರುದ್ಧ ಕೂಗಾಡಿದರು. ಈ ವೇಳೆ ರೂಪಾಲಿ ನಾಯ್ಕ್ಕ್ ಮೇಲೆ ಕ್ರಮ ಯಾಕೆ ತಗೆದುಕೊಳ್ಳಲ್ಲ ಅಂತ ಸ್ಪೀಕರ್ ಅವರನ್ನೇ ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದರು.
ಈ ಹಿಂದೆ ನಡೆದ ಸದನದಲ್ಲಿ ಈಶ್ವರ್ ಖಂಡ್ರೆ ಎದ್ದುನಿಂತು ಕಿರುಚಾಡುತ್ತಾ ಮಾತನಾಡಿದಾಗ ಆಕ್ರೋಶಗೊಂಡಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಆದರೀಗ ರೂಪಾಲಿ ನಾಯ್ಕ್ ವಿರುದ್ಧ ಕ್ರಮಕೈಗೊಳ್ಳದ ಸ್ಪೀಕರ್ಗೆ ಕಾಂಗ್ರೆಸ್ ಸದಸ್ಯರ ಪ್ರಶ್ನೆ ಇರುಸು ಮುರುಸು ಉಂಟುಮಾಡಿತು. ಒಬ್ಬೊಬ್ಬರಿಗೊಂದೊಂದು ಮಾಡಬಾರದು ಅಂತ ಸ್ಪೀಕರ್ ಅವರಿಗೆ ಕಾಂಗ್ರೆಸ್ ಶಾಸಕರು ಹೇಳಿದರು. ಬಳಿಕ ಸ್ಪೀಕರ್ ಎಲ್ಲರನ್ನೂ ಸುಮ್ಮನಿರಿಸಿದರು. ಸಿದ್ದರಾಮಯ್ಯ ಅವರು ಚರ್ಚೆ ಮುಂದುವರಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:28 pm, Mon, 20 February 23