ದೂರು ಪ್ರತಿದೂರು ದಾಖಲಿಸಿದ ಐಎಎಸ್-ಐಪಿಎಸ್: ಇಬ್ಬರಿಗೂ ಖಡಕ್ ಸೂಚನೆ ಕೊಟ್ಟ ಮುಖ್ಯಕಾರ್ಯದರ್ಶಿ
ಇಬ್ಬರು ಉನ್ನತ ಮಟ್ಟದ ಮಹಿಳಾ ಅಧಿಕಾರಿಗಳ ಕಾಳಗ ಈಗ ಹಾದಿ ರಂಪ, ಬೀದಿ ರಂಪಾಟಕ್ಕೆ ಮುಖ್ಯಕಾರ್ಯದರ್ಶಿ ಸದ್ಯ ಬ್ರೇಕ್ ಹಾಕಿದ್ದಾರೆ.
ಬೆಂಗಳೂರು (ಫೆ.20): ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರ(Rohini Sindhuri) ಕೆಲ ಫೋಟೋಗಳನ್ನು ಐಪಿಎಸ್ ಡಿ. ರೂಪಾ ಮೌದ್ಗಿಲ್ (D Roopa Moudgil) ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದೇ ತಡ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ವಿಚಾರವಾಗಿ ಇಬ್ಬರು ಮಹಿಳಾ ಅಧಿಕಾರಿಗಳ ಮಧ್ಯೆ ಹೊತ್ತಿರುವ ಜ್ವಾಲಾಗ್ನಿ ಆರುತ್ತಿಲ್ಲ. ಸಮರದ ಸೇಡು ತಣ್ಣಗಾಗುತ್ತಿಲ್ಲ. ಇದೀಗ IAS, IPS ಅಧಿಕಾರಿಗಳಿಬ್ಬರ ನಡುವಿನ ವೈಯಕ್ತಿಕ ಯುದ್ಧ ವಿಧಾನಸೌಧಕ್ಕೆ ತಲುಪಿದೆ. ಇದಕ್ಕೆ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ ಇಬ್ಬರಿಗೂ ಖಡಕ್ ಸೂಚನೆಯೊಂದನ್ನು ಕೊಟ್ಟಿದ್ದಾರೆ. ಈ ಮೂಲಕ ಐಎಎಸ್ ವರ್ಸಸ್ ಐಪಿಎಸ್ ಅಧಿಕಾರಿಗಳ ನಡುವಿನ ಸೇಡಿನ ಸಮರಕ್ಕೆ ಅಂತ್ಯ ಹಾಡಿದ್ದಾರೆ.
ಇಬ್ಬರಿಗೂ ಖಡಕ್ ಸೂಚನೆ ಕೊಟ್ಟ ಮುಖ್ಯಕಾರ್ಯದರ್ಶಿ
ನಿಮ್ಮಿಬ್ಬರ ನಡೆಯಿಂದ ರಾಜ್ಯ ಸರ್ಕಾರಕ್ಕೆ ಮುಜುಗರವಾಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಏನನ್ನೂ ಪೋಸ್ಟ್ ಮಾಡಬಾರದು. ಇಬ್ಬರೂ ಸಹ ಮಾಧ್ಯಮಗಳ ಮುಂದೆ ಹೋಗಬಾರದೆಂದು. ಈ ವಿಚಾರಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡು ಹೋಗಬಾರದು ಎಂದು ಪ್ರತ್ಯೇಕವಾಗಿ ದೂರು ನೀಡಲು ಬಂದಿದ್ದ ಡಿ.ರೂಪಾ, ರೋಹಿಣಿ ಸಿಂಧೂರಿಗೆ ಸಿಎಸ್ ವಂದಿತಾ ಶರ್ಮಾ ಖಡಕ್ ಸೂಚನೆ ನೀಡಿ ಕಳುಹಿಸಿದ್ದಾರೆ.
ನಿನ್ನೆಯಿಂದಲೂ ಈ ಇಬ್ಬರ ನಡುವೆ ಸೋಶಿಯಲ್ ಮಿಡಿಯಾದಲ್ಲಿ ಆರೋಪ-ಪ್ರತ್ಯಾರೋಪಗಳ ಜಟಾಪಟಿ ತಾರಕ್ಕಕೇರಿದ್ದು, ಸಾರ್ವಜನಿಕರು ಇಬ್ಬರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬೆಳವಣಿಗೆ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತದೆ ಎಂದು ತಿಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಮ್ಮ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದ್ದರು.
ದೂರು ಪ್ರತಿದೂರು
ಐಪಿಎಸ್ ಅಧಿಕಾರಿ ರೂಪಾ ವಿರುದ್ಧ ಎಐಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಮರ ಸಾರಿದ್ದಾರೆ. ಪರ್ಸನಲ್ ಫೋಟೋ ರಿಲೀಸ್ ಮಾಡಿದ್ದಕ್ಕೆ ಗರಂ ಆಗಿದ್ದು, ಈ ಬಗ್ಗೆ ಇಂದು(ಫೆ.20) ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರನ್ನು ಭೇಟಿ ಮಾಡಿ ರೂಪಾ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ.
ರೋಹಿಣಿ ಸಿಂಧೂರಿ ಅವರು ವಿಧಾನಸೌಧದಲ್ಲಿ ವಂದಿತಾ ಶರ್ಮ ಅವರ ಜೊತೆ ಸುಮಾರು 15 ನಿಮಿಷಗಳ ಕಾಲ ಚರ್ಚೆ ನಡೆಸಿ ಮೂರು ಪುಟಗಳ ದೂರು ನೀಡಿದ್ದಾರೆ. ಇದರ ಬೆನ್ಲಲ್ಲೇ ಡಿ.ರೂಪಾ ಕೂಡ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ನೀಡಿದ್ದಾರೆ. ಸುಮಾರು 35 ನಿಮಿಷಗಳ ಕಾಲ ಚರ್ಚೆ ಮಾಡಿದ್ದು, ರೋಹಿಣಿ ವಿರುದ್ಧ ಕ್ರಮಕೈಗೊಳ್ಳುವಂತೆ ದಾಖಲೆ ಸಮೇತ ದೂರು ಕೊಟ್ಟಿದ್ದಾರೆ.
ಒಟ್ಟಿನಲ್ಲಿ ಇದೀಗ ಇಬ್ಬರು ಉನ್ನತ ಮಟ್ಟದ ಮಹಿಳಾ ಅಧಿಕಾರಿಗಳ ಕಾಳಗ ಈಗ ಹಾದಿ ರಂಪ, ಬೀದಿ ರಂಪಾಟಕ್ಕೆ ಮುಖ್ಯಕಾರ್ಯದರ್ಶಿ ಸದ್ಯ ಬ್ರೇಕ್ ಹಾಕಿದ್ದಾರೆ. ಆದ್ರೆ ಈ ಅಧಿಕಾರಿಗಳ ವಿರುದ್ಧ ಏನು ಕ್ರಮಕೈಗೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
Published On - 6:27 pm, Mon, 20 February 23