ಬೆಂಗಳೂರು: ಪಠ್ಯ ಪರಿಷ್ಕರಣೆಯನ್ನು ವಿರೋಧಿಸಿ ಇಂದು (ಜೂನ್ 18) ನಗರದಲ್ಲಿ ಬೃಹತ್ ಪ್ರತಿಭಟನೆ (Protest) ನಡೆಯುತ್ತಿದೆ. ಕೆಎಸ್ಆರ್ ರೈಲು ನಿಲ್ದಾಣದಿಂದ ಫ್ರೀಡಂಪಾರ್ಕ್ವರೆಗೂ (Freedom Park) ಪ್ರತಿಭಟನಾ ಮೆರವಣಿಗೆ ಸಡೆಸಲು ಸಜ್ಜಾಗಿದ್ದು, ಈ ವೇಳೆ ರ್ಯಾಲಿಗೆ ಅವಕಾಶ ನೀಡದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ. ಪ್ರತಿಭಟನಾ ಮೆರವಣಿಗೆಯಲ್ಲಿ ಸಂಗೀತ ನಿರ್ದೇಶಕ ಹಂಸಲೇಖ, ಸಿಎಸ್. ದ್ವಾರಕನಾಥ್, ಎಪಿ ರಂಗನಾಥ್, ಪ್ರವೀಣ್ ಶೆಟ್ಟಿ, ಸಾ.ರಾ ಗೋವಿಂದ್, ಮುಖ್ಯಮಂತ್ರಿ ಚಂದ್ರು ಅಕೈ ಪದ್ಮಾಶಾಲಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಇನ್ನು ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ಕುವೆಂಪು ಹೋರಾಟ ಸಮಿತಿ, ಸ್ವಾಮೀಜಿಗಳು, ಕನ್ನಡ ಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಸಾಹಿತಿ, ಚಿಂತಕರು, ಸಾರಿಗೆ ಒಕ್ಕೂಟ, ಸಿಐಟಿಯು ಸೇರಿದಂತೆ ಹಲವು ಸಂಘಟನೆಗಳು ಭಾಗಿಯಾಗಿವೆ. ಸದ್ಯ ಪರಿಷ್ಕೃತ ಆಗಿರುವ ಪಠ್ಯಪುಸ್ತಕವನ್ನ ರದ್ದು ಮಾಡಬೇಕು. ರೋಹಿತ್ ಚಕ್ರತೀರ್ಥರನ್ನ ಬಂಧಿಸಬೇಕೆಂದು ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಆಗ್ರಹಿಸುತ್ತಿದ್ದಾರೆ.
ಖ್ಯಾತ ವಕೀಲ ಸಿಎಚ್ ಹನುಮಂತರಾಯ್ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಆಗುತ್ತಿರುವ ಅನ್ಯಾಯ ಸಹಿಸೋದು ಅಂದರೆ ನಮ್ಮನ್ನು ನಾವೇ ಶಿಕ್ಷೆ ಕೊಟ್ಟುಕೊಂಡ ಹಾಗೆ. ಬಿಸಿ ನಾಗೇಶ್ ಅವರು ರೋಹಿತ್ ಚಕ್ರತೀರ್ಥ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿದ್ದರು. ಈ ಸಮಿತಿಯಲ್ಲಿ ಮೂಲಭೂತವಾಗಿ ದೊಡ್ಡ ತಪ್ಪಾಗಿದೆ. ಆದೇಶವೇ ಇಲ್ಲದೆ ಪರಿಷ್ಕೃತಗೊಂಡ ಪಠ್ಯ ಪುಸ್ತಕಗಳ ಪಾಡೇನು? ಡಾ.ಬಿಆರ್ ಅಂಬೇಡ್ಕರ್, ಬಸವಣ್ಷ ಅವರ ವಿಚಾರಗಳನ್ನು ತಿರುಚಿದರು. ಶಂಕರ ಎನ್ನುವ ಪದಕ್ಕೆ ಅನರ್ಥ ಬರುವಂತೆ ನಡೆದುಕೊಂಡರು. ಸಂತ ಶಿಶುನಾಳ ಶರೀಫರ ವಿಚಾರಗಳನ್ನು ಕಿತ್ತುಹಾಕಿದ್ರು. ಬುದ್ಧನ ಪಾಠವನ್ನು ತೆಗೆದು ಹಾಕಿದರು. ನಿರುದ್ಯೋಗ ಸಮಸ್ಯೆಯನ್ನು ಕೈ ಬಿಟ್ಟರು. ಕೆಲವೊಂದು ಸಿದ್ಧಾಂತಗಳನ್ನು ಮುನ್ನಲೆಗೆ ತರಲು ಮುಂದಾದರು. ಈ ಸಿದ್ಧಾಂತಗಳು ದೂರವಾಗಬೇಕು. ಬಸವಣ್ಣ ಅವರ ವಿಚಾರಕ್ಕೂ ಕೈ ಹಾಕಿದರು. ಸಾಹಿತ್ಯ, ನಾಡಗೀತೆಗೆ ಅಪಮಾನ ಮಾಡಿದರು. ಮುಂದೆ ಹೇಗೆ ಹೆಜ್ಜೆ ಇಡಬೇಕು ಎಂದು ಗಮನಿಸಬೇಕಾಗಿದೆ. ಮುಖ್ಯಮಂತ್ರಿಗಳು ಸ್ವಲ್ಪ ಆಚೆ ಬಂದು ನೋಡಬೇಕು ಎಂದು ಆಗ್ರಹಿಸಿದರು.
ಆರ್‌ಎಸ್‌ಎಸ್ ಚಡ್ಡಿ ಸುಡಲು ವಿರೋಧ:
ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಆರ್‌ಎಸ್‌ಎಸ್ ಚಡ್ಡಿ ಸುಡಲು ಮುಂದಾಗಿದ್ದಾರೆ. ಈ ವೇಳೆ ಧರಣಿನಿರತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಪೊಲೀಸರ ವಿರೋಧದ ನಡುವೆಯೂ ಆರ್‌ಎಸ್‌ಎಸ್ ಚಡ್ಡಿಗೆ ಬೆಂಕಿ ಹಚ್ಚಿದ್ದಾರೆ.
ಇದನ್ನೂ ಓದಿ: ಭಾರೀ ಮಳೆಗೆ ಕೃಷ್ಣ ಥಿಯೇಟರ್ ಗೋಡೆ ಕುಸಿತ; ಬೈಕ್ ಜಖಂ ಆಗಿದ್ದಕ್ಕೆ ಜನರ ಆಕ್ರೋಶ
ಬಿಸಿ ನಾಗೇಶ್ ಹೇಳಿದ್ದೇನು?:
ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿರ ಬಿಸಿ ನಾಗೇಶ್,ಪಠ್ಯ ಪರಿಷ್ಕರಣೆ ಸಂಬಂಧ ನಿರ್ಧಾರ ಪ್ರಕಟಿಸಲಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರತಿಭಟನೆ ಮಾಡಲು ಅವರಿಗೆ ಅವಕಾಶ ಇದೆ, ಮಾಡಲಿ ಎಂದು ಹೇಳಿದರು.
ಬೆಳಗಾವಿಯಲ್ಲೂ ಪ್ರತಿಭಟನೆ:
ಇನ್ನು ಪಠ್ಯಪರಿಷ್ಕರಣೆ ಖಂಡಿಸಿ ಬೆಳಗಾವಿಯಲ್ಲೂ ಕರವೇಯಿಂದ ಪ್ರತಿಭಟನೆ ನಡೆಯುತ್ತಿದೆ. ಧರಣಿಯಲ್ಲಿ ರೋಹಿತ್ ಚಕ್ರತೀರ್ಥ ಪ್ರತಿಕೃತಿ ದಹಿಸಲು ಕರವೇ ಯತ್ನಿಸಿದೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಹೈಡ್ರಾಮಾ ನಡೆದಿದೆ. ಬೆಳಗಾವಿ ಚನ್ನಮ್ಮ ವೃತ್ತದ ಬಳಿ ಸಾಹಿತ್ಯ ಭವನದಲ್ಲಿ ಪ್ರತಿಕೃತಿ ವಶಕ್ಕೆ ಪಡೆಸಿಕೊಳ್ಳಲು ಪೊಲೀಸರು ಹರಸಾಹಸ ಪಟ್ಟರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:55 pm, Sat, 18 June 22