ಬೆಂಗಳೂರು, ಫೆಬ್ರವರಿ 17: ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರು ನಡುವೆ ಸುಗಮ ಸಂಪರ್ಕ ಕಲ್ಪಿಸುವ ಗುರಿ ಹೊಂದಿರುವ 10.8 ಕಿಲೋ ಮೀಟರ್ ಉದ್ದದ ಟೋಲ್ ಫ್ರೀ ಮೇಜರ್ ಆರ್ಟೀರಿಯಲ್ ರಸ್ತೆ (MAR) ಮುಂದಿನ ಕೆಲವೇ ತಿಂಗಳಲ್ಲಿ ಸಂಚಾರಕ್ಕೆ ಸಿದ್ಧವಾಗುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. ಮೈಸೂರು ರಸ್ತೆಯ ಚಲ್ಲಘಟ್ಟದಿಂದ (ನಮ್ಮ ಮೆಟ್ರೋ ಡಿಪೋ ಬಳಿ) ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ವರೆಗೆ ವ್ಯಾಪಿಸಿರಲಿರುವ ಈ ದಶಪಥ ರಸ್ತೆ, ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ನೈಸ್ ಕಾರಿಡಾರ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಲಿದೆ.
ಹೊಸ ರಸ್ತೆಯು ನಾಡಪ್ರಭು ಕೆಂಪೇಗೌಡ ಲೇಔಟ್ (NPKL) ಗೆ ಸಂಪರ್ಕ ಸುಗಮಗೊಳಿಸುವುದರ ಜತೆಗೆ ಪ್ರಯಾಣದ ಸಮಯವನ್ನು 1.5 ಗಂಟೆಗಳಿಂದ ಕೇವಲ 10 ನಿಮಿಷಗಳಿಗೆ ಇಳಿಕೆ ಮಾಡಲಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ತಿಳಿಸಿದೆ.
ಆರಂಭದಲ್ಲಿ 465 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಈಗ ಯೋಜನಾ ವೆಚ್ಚ 585 ಕೋಟಿ ರೂ.ಗೆ ಏರಿಕೆಯಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಈ ದಶಪಥ ರಸ್ತೆಯ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಕಂಬಿಪುರ, ಕೆ ಕೃಷ್ಣ ಸಾಗರ, ಭೀಮನಕುಪ್ಪೆ, ಕೊಮ್ಮಘಟ್ಟ, ಕೆಂಚನಾಪುರ ಮತ್ತು ಸೂಲಿಕೆರೆ ಸೇರಿದಂತೆ ಪ್ರಮುಖ ಗ್ರಾಮಗಳ ಮೂಲಕ ರಸ್ತೆ ನಿರ್ಮಾಣವಾಗುತ್ತಿದೆ.
ಯೋಜನೆಗಾಗಿ ಬಿಡಿಎ 321.1 ಎಕರೆ ಭೂಮಿಯನ್ನು ಯಶಸ್ವಿಯಾಗಿ ಸ್ವಾಧೀನಪಡಿಸಿಕೊಂಡಿದ್ದರೂ, ಸವಾಲುಗಳು ಉಳಿದಿವೆ. ಸೂಲಿಕೆರೆ ಮೀಸಲು ಅರಣ್ಯದಲ್ಲಿ 2 ಎಕರೆ ಭೂಮಿಯ ಸ್ಥಳಾಂತರಕ್ಕೆ ಅರಣ್ಯ ಇಲಾಖೆಯಿಂದ ಅನುಮೋದನೆ ಬಾಕಿ ಇರುವುದರಿಂದ ವಿಳಂಬವಾಗಿದೆ. ರೈಲ್ವೆ ಅಂಡರ್‌ಪಾಸ್ ಇನ್ನೂ ನಿರ್ಮಾಣ ಹಂತದಲ್ಲಿದೆ ಮತ್ತು ಮೈಸೂರು ರಸ್ತೆಯ ಬಳಿ ಸುಮಾರು 300 ಮೀಟರ್ ರಸ್ತೆ ಕಾಮಗಾರಿಯು ಬಾಕಿ ಇದೆ.
ಅಡೆತಡೆಗಳನ್ನು ಪರಿಹರಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಮುಂದಿನ 2 ತಿಂಗಳ ಒಳಗಾಗಿ ರಸ್ತೆ ಸಿದ್ಧಗೊಳ್ಳುವ ನಿರೀಕ್ಷೆ ಇದೆ ಎಂದು ಬಿಡಿಎ ಅಧಿಕಾರಿಯೊಬ್ಬರು ಆಶಾವಾದ ವ್ಯಕ್ತಪಡಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ‘ಟಿವಿ9’ ರಿಯಾಲಿಟಿ ಚೆಕ್: ಅನೇಕ ಕಡೆಗಳಲ್ಲಿ ಕಡಿಮೆಯೇ ಆಗಿಲ್ಲ ಮೆಟ್ರೋ ಟಿಕೆಟ್ ದರ!
ಮೇಜರ್ ಆರ್ಟೀರಿಯಲ್ ರಸ್ತೆಗೆ 2011ರಲ್ಲಿ ಮೊದಲಿಗೆ ಯೋಜನೆ ರೂಪಿಸಲಾಗಿತ್ತು. ನಂತರ ಹಲವಾರು ಕಾರಣಗಳಿಂದ ವಿಳಂಬವಾಯಿತು. 2017 ರಲ್ಲಿ ಟೆಂಡರ್ ನೀಡಲಾಗಿತ್ತು. 2018 ರಲ್ಲಿ ಕಾಮಗಾರಿಯೂ ಆರಂಭವಾಗಿತ್ತು. ಆರಂಭದಲ್ಲಿ ಕಾಮಗಾರಿ ಪೂರ್ಣಗೊಳಿಸಲು 2019ರ ಆಗಸ್ಟ್ ಗುಡಿ ನಿಗದಿಪಡಿಸಲಾಗಿತ್ತು. ಕೊನೆಗೂ ಇದೀಗ ಸಾಕಾರಗೊಳ್ಳುವ ನಿರೀಕ್ಷೆ ಇದೆ.