‘ಟಿವಿ9’ ರಿಯಾಲಿಟಿ ಚೆಕ್: ಅನೇಕ ಕಡೆಗಳಲ್ಲಿ ಕಡಿಮೆಯೇ ಆಗಿಲ್ಲ ಮೆಟ್ರೋ ಟಿಕೆಟ್ ದರ!
ಬಿಎಂಆರ್ಸಿಎಲ್ ಶೇ 46 ರಿಂದ 47 ರಷ್ಟು ದರ ಏರಿಕೆ ಮಾಡಲಾಗುವುದು ಎಂದು ಹೇಳಿ ಬರೋಬ್ಬರಿ ಶೇ 100 ರಷ್ಟು ಹೆಚ್ಚಳ ಮಾಡಿದ್ದು, ಜನಾಕ್ರೋಶಕ್ಕೆ ಕಾರಣವಾಗಿತ್ತು. ಸಿಎಂ ಸೂಚನೆಯ ನಂತರ ದರ ಪರಿಷ್ಕರಣೆ ಮಾಡುತ್ತೇವೆ ಎಂದು ಹೇಳಿ ಇದೀಗ ಕೆಲವೊಂದು ಸ್ಟೇಷನ್ಗಳಿಗೆ ಮಾತ್ರ ಕಡಿಮೆ ಮಾಡಿ ಕೈ ತೊಳೆದುಕೊಂಡಿದೆ. ಹೀಗಾಗಿ ಪ್ರಯಾಣಿಕರ ಆಕ್ರೋಶ ಮುಂದುವರಿದಿದೆ. ಮೆಟ್ರೋ ಟಿಕೆಟ್ ದರದ ಬಗ್ಗೆ ‘ಟಿವಿ’ ಮಾಡಿರುವ ರಿಯಾಲಿಟಿ ಚೆಕ್ನಲ್ಲಿ ಕಂಡುಬಂದ ಮಾಹಿತಿ ಇಲ್ಲಿದೆ.

ಬೆಂಗಳೂರು, ಫೆಬ್ರವರಿ 16: ಕಳೆದ ಏಳು ವರ್ಷಗಳಿಂದ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳ ಮಾಡಿಲ್ಲ. ಹಾಗಾಗಿ ಶೇ 46 ರಿಂದ 47 ರಷ್ಟು ದರ ಹೆಚ್ಚಳ ಮಾಡುತ್ತೇವೆಂದ ಬಿಎಂಆರ್ಸಿಎಲ್ ಬರೋಬ್ಬರಿ ಶೇ 90 ರಿಂದ 100 ರಷ್ಟು ದರ ಏರಿಕೆ ಮಾಡಿತ್ತು. ಸಾರ್ವಜನಿಕರ ಆಕ್ರೋಶದ ನಂತರ ಬಿಎಂಆರ್ಸಿಎಲ್ ಎಂಡಿ ಮಹೇಶ್ವರ ರಾವ್ ದುಪ್ಪಟ್ಟಾಗಿರುವ ಸ್ಟೇಷನ್ಗಳಿಗೆ ಕಡಿಮೆ ಮಾಡುತ್ತೇವೆ ಎಂದಿದ್ದರು. ಆದರೆ ಕೆಲವೊಂದು ಸ್ಟೇಷನ್ ಗಳಿಗೆ ಮಾತ್ರ ಶೇ 10 ರಷ್ಟು ದರ ಕಡಿಮೆ ಮಾಡಿ ಕೈತೊಳೆದುಕೊಂಡಿದ್ದಾರೆ. ಈ ಬಗ್ಗೆ ‘ಟಿವಿ9’ ಭಾನುವಾರ ರಿಯಾಲಿಟಿ ಚೆಕ್ ಮಾಡಿದೆ. ಈ ವೇಳೆ, ಪ್ರಯಾಣಿಕರು ನಮ್ಮ ಸ್ಟೇಷನ್ನಲ್ಲಿ ಯಾವುದೇ ದರ ಪರಿಷ್ಕರಣೆ ಆಗಿಲ್ಲ, ಹಿಂದೆ ಇದ್ದಷ್ಟೇ ಇದೆ ಎಂದು ದೂರಿದ್ದಾರೆ.
ಕೋಣನಕುಂಟೆ ಕ್ರಾಸ್ನಿಂದ ಆರ್ವಿ ರೋಡ್ಗೆ 20 ರುಪಾಯಿ ಇತ್ತು, ದರ ಏರಿಕೆ ಆದ ಮೇಲೆ 40 ರುಪಾಯಿ ಆಗಿದೆ. ದರ ಪರಿಷ್ಕರಣೆ ಆದ ಮೇಲೂ 40 ರುಪಾಯಿಯೇ ಇದೆ ಎಂದು ಹಿರಿಯ ನಾಗರಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಟ್ರೋ ಹಳೆಯ ದರ, ದರ ಏರಿಕೆಯ ನಂತರದ ಮತ್ತು ಮರು ಪರಿಷ್ಕರಣೆ ನಂತರದ ವಿವರ
- ಟಿಕೆಟ್ ದರ ಏರಿಕೆಯ ಹಿಂದೆ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಯಿಂದ ಜಯನಗರ 33 ರುಪಾಯಿ ಇತ್ತು. ದರ ಏರಿಕೆಯ ನಂತರ 60 ರುಪಾಯಿ ಆಗಿದೆ. ಯಾವುದೇ ದರ ಪರಿಷ್ಕರಣೆ ಆಗಿಲ್ಲ (ಏರಿಕೆ 27 ರುಪಾಯಿ).
- ವಾಜರಹಳ್ಳಿ ಯಿಂದ ನ್ಯಾಷನಲ್ ಕಾಲೇಜಿಗೆ ದರ ಏರಿಕೆಯ ಹಿಂದೆ 28.5 ರುಪಾಯಿ ಇತ್ತು, ದರ ಏರಿಕೆ ಆದ ಮೇಲೆ 50 ರುಪಾಯಿ ಆಗಿದೆ. ಆದರೆ ಇಲ್ಲಿ ಯಾವುದೇ ದರ ಪರಿಷ್ಕರಣೆ ಆಗಿಲ್ಲ (22 ರುಪಾಯಿ ಏರಿಕೆ).
- ಮೈಸೂರು ರೋಡ್ನಿಂದ ಕೆಂಪೇಗೌಡ ಮೆಟ್ರೋ ಸ್ಟೇಷನ್ಗೆ ಹಿಂದೆ 23 ರುಪಾಯಿ ಇತ್ತು, ಏರಿಕೆಯ ಆದ ಮೇಲೆ 40 ರುಪಾಯಿ ಆಗಿದ್ದು, ಯಾವುದೇ ಪರಿಷ್ಕರಣೆ ಆಗಿಲ್ಲ (17 ರುಪಾಯಿ ಏರಿಕೆ ಆಗಿದೆ).
- ಆರ್ ವಿ ರೋಡ್ನಿಂದ ವಿಧಾನಸೌಧ ದರ ಏರಿಕೆಗೆ ಮೊದಲು 28.50 ರುಪಾಯಿ ಇತ್ತು, ದರ ಏರಿಕೆ ಆದ ಮೇಲೆ 47.50 ರುಪಾಯಿ ಆಗಿದೆ. ಇಲ್ಲಿ ಯಾವುದೇ ಪರಿಷ್ಕರಣೆ ಆಗಿಲ್ಲ (19 ರುಪಾಯಿ ಏರಿಕೆ ಆಗಿದೆ).
- ದರ ಏರಿಕೆಯ ಮೊದಲು ಯಶವಂತಪುರ ದಿಂದ ಯಲಚೇನಹಳ್ಳಿಗೆ 42.75 ರುಪಾಯಿ ಇತ್ತು, ದರ ಏರಿಕೆ ಆದ ಮೇಲೆ 70 ರುಪಾಯಿ ಆಗಿದೆ. ಇಲ್ಲಿ ಯಾವುದೇ ದರ ಪರಿಷ್ಕರಣೆ ಆಗಿಲ್ಲ (28 ರುಪಾಯಿ ಆಗಿದೆ).
- ದರ ಏರಿಕೆಯ ಮೊದಲು ಸಂಪಿಗೆ ಮೆಟ್ರೋ ಸ್ಟೇಷನ್ನಿಂದ ನಾಗಸಂದ್ರಕ್ಕೆ 33.25 ರುಪಾಯಿ ಇತ್ತು, ದರ ಏರಿಕೆಯ ಆದ ಮೇಲೆ 60 ರುಪಾಯಿ ಆಗಿದೆ. ಇಲ್ಲಿ ಯಾವುದೇ ದರ ಪರಿಷ್ಕರಣೆ ಆಗಿಲ್ಲ (27 ರುಪಾಯಿ ಏರಿಕೆ ಆಗಿದೆ).
- ದರ ಏರಿಕೆಯ ಮೊದಲು ಕೆಂಪೇಗೌಡ ಮೆಟ್ರೋ ಸ್ಟೇಷನ್ ನಿಂದ ಮಾದಾವರ ಮೆಟ್ರೋ ಸ್ಟೇಷನ್ ಗೆ 40 ರುಪಾಯಿ ಇತ್ತು, ದರ ಏರಿಕೆಯ ನಂತರ 70 ರುಪಾಯಿ ಆಗಿದೆ. ಇಲ್ಲಿ ಯಾವುದೇ ದರ ಪರಿಷ್ಕರಣೆ ಆಗಿಲ್ಲ (30 ರುಪಾಯಿ ಏರಿಕೆ ಆಗಿದೆ).
- ದರ ಏರಿಕೆಯ ಮೊದಲು ಕೋಣನಕುಂಟೆ ಕ್ರಾಸ್ನಿಂದ ನ್ಯಾಷನಲ್ ಕಾಲೇಜಿಗೆ 20 ರುಪಾಯಿ ಇತ್ತು, ದರ ಏರಿಕೆಯ ನಂತರ 40 ಆಗಿದೆ. ಇಲ್ಲೂ ಯಾವುದೇ ದರ ಪರಿಷ್ಕರಣೆ ಆಗಿಲ್ಲ (20 ರುಪಾಯಿ ಏರಿಕೆ ಆಗಿದೆ).
- ದರ ಏರಿಕೆಯ ಹಿಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ಸ್ಟೇಷನ್ನಿಂದ ಕೆಂಗೇರಿ ಬಸ್ ಸ್ಟ್ಯಾಂಡ್ಗೆ 35 ರುಪಾಯಿ ಇತ್ತು, ದರ ಏರಿಕೆಯ ನಂತರ 60 ರುಪಾಯಿ ಆಗಿದ್ದು, ಇಲ್ಲಿ ಯಾವುದೇ ದರ ಪರಿಷ್ಕರಣೆ ಮಾಡಿಲ್ಲ (25 ರುಪಾಯಿ ದರ ಏರಿಕೆ ಆಗಿದೆ).
ಶೇ 90 ರಿಂದ 100 ರಷ್ಟು ಹೆಚ್ಚಳವಾಗಿದ್ದ ದರವನ್ನು ಕೇವಲ ಶೇ 10 ರಷ್ಟು ಕಡಿಮೆ ಮಾಡಿ ಬಿಎಂಆರ್ಸಿಎಲ್ ಕೈ ತೊಳೆದುಕೊಂಡಿದೆ. ಸಿಎಂ ಮಾತಿಗೂ ಪ್ರಯಾಣಿಕರ ಒತ್ತಡಕ್ಕೂ ಮಣಿದಿಲ್ಲ. ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳ ಮಾಡಿ ಇಂದಿಗೆ ಒಂದು ವಾರ ಆಯಿತು. ಸಾಕಷ್ಟು ಸ್ಟೇಷನ್ ಗಳಲ್ಲಿ ಶೇ 90 ರಿಂದ 100 ರ ದರ ಏರಿಕೆಯನ್ನೇ ಉಳಿಸಿಕೊಳ್ಳಲಾಗಿದೆ. ಇದಕ್ಕೆ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಶೇ 30 ರ ವರೆಗೆ ಇಳಿಕೆ: ಆದರೆ ಎಲ್ಲೆಡೆಯೂ ಅಲ್ಲ!
ಒಟ್ಟಿನಲ್ಲಿ ದರ ಕಡಿಮೆ ಮಾಡುತ್ತೇವೆಂದು ಮಾತು ನೀಡಿದ ಬಿಎಂಆರ್ಸಿಎಲ್ ಅಲ್ಲೊಂದು ಇಲ್ಲೊಂದು ಸ್ಟೇಷನ್ಗಳಿಗೆ ಮಾತ್ರ ಶೇ 10 ರಷ್ಟು ದರ ಕಡಿಮೆ ಮಾಡಿ, ದುಪ್ಪಟ್ಟು ದರ ಹೆಚ್ಚಾದ ಎಲ್ಲೆಡೆಯೂ ಕಡಿಮೆ ಮಾಡುತ್ತೇವೆ ಎಂದು ಹುಸಿ ಭರವಸೆ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ