ಬೆಂಗಳೂರು: ಪೆಟ್ರೋಲ್, ಡೀಸೆಲ್ ಆಯ್ತು ಈಗ ಟೊಮೆಟೊ ಸರದಿ. ಮಹಾಮಾರಿ ಕೊರೊನಾ ಮಧ್ಯೆ ಟೊಮೆಟೊ ಬೆಲೆ ಕೂಡ ಗಗನಕ್ಕೇರಿದೆ. ರಾಜ್ಯದ ಭಾರೀ ಮಳೆಗೆ ಟೊಮೆಟೊ ದುಬಾರಿಯಾಗಿದೆ. ಒಂದು ಕೆ.ಜಿಗೆ 10 ರೂಪಾಯಿ ಇದ್ದ ಟೊಮೆಟೊ ದಿಢೀರನೆ ಏರಿಕೆ ಕಂಡಿದೆ.
ಕಳೆದ ತಿಂಗಳು ಒಂದು ಕೆ.ಜಿ 10 ರಿಂದ 15 ರೂಪಾಯಿ ಇದ್ದ ಟೊಮೆಟೊ ಬೆಲೆ. ಈಗ ಬರೋಬ್ಬರಿ 60 ರಿಂದ 70 ರೂಪಾಯಿಗೆ ಏರಿಕೆಯಾಗಿದೆ. ದಿಢೀರನೆ ಒಂದು ಕೆ.ಜಿಗೆ 60 ರೂಪಾಯಿ ಏರಿಕೆ ಕಂಡಿದೆ. ರಾಜ್ಯದಲ್ಲಾಗುತ್ತಿರುವ ಭಾರೀ ಮಳೆಗೆ ಬೆಳೆ ನಾಶವಾಗಿದೆ. ಜೊತೆಗೆ ನೆರೆ ರಾಜ್ಯಗಳಿಂದ, ಬೆಂಗಳೂರಿನ ಸುತ್ತಮುತ್ತಲಿನ ಭಾಗಗಳಿಂದ ಬರುತ್ತಿದ್ದ ಟೊಮೆಟೊ ಬರುತ್ತಿಲ್ಲ. ಹೀಗಾಗಿ ಟೊಮೆಟೊ ಹಣ್ಣಿನ ಬೆಲೆ ಏರಿಕೆ ಕಾಣುತ್ತಿದೆ.
ಮಹಾರಾಷ್ಟ್ರದಿಂದಲೂ ಈ ಬಾರಿ ನಗರಕ್ಕೆ ಟೊಮೆಟೊ ಪೂರೈಕೆಯಾಗಿಲ್ಲ. ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆ 100 ರೂಪಾಯಿ ದಾಟಿದ್ರೂ ಅಚ್ಚರಿಯಿಲ್ಲ. ದಿನ ಬಳಕೆ ಸಾಮಾಗ್ರಿಗಳ ಬೆಲೆ ಏರಿಕೆ ನಡುವೆ ಮತ್ತೊಂದು ದುಬಾರಿ ಹೊಡೆತ ಕೊಟ್ಟಿದೆ. ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ 20 ರಿಂದ 22 ಕೆ.ಜಿ ತೂಕದ ಬಾಕ್ಸ್ ಗೆ ಬರೋಬ್ಬರಿ 1,200 ರೂ ಇದೆ. ಆನ್ ಲೈನ್ ಮೂಲಕ ಖರೀದಿ ಮಾಡುವವರಿಗೆ ಡಬಲ್ ಶಾಕ್. ವಿವಿಧ ಶಾಪಿಂಗ್ ಆಪ್ ಮೂಲಕ ಟೊಮೆಟೊ ಖರೀದಿಸುವವರಿಗೆ ಕೆ.ಜಿ 80 ರೂಗೆ ಸಿಗುತ್ತಿದೆ. ಎಪಿಎಂಸಿಗೆ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಾಗಡಿ, ಚಿಂತಾಮಣಿ ಭಾಗಗಳಿಂದ ಬರುತ್ತಿದ್ದ ಟೊಮೆಟೊ ಪ್ರಮಾಣ ಶೇ.40 ರಷ್ಟು ಇಳಿಮುಖವಾಗಿದೆ.
ಇದನ್ನೂ ಓದಿ: ಅಪಾರ ಪ್ರಮಾಣದ ಹೂಗಳನ್ನು ತಿಪ್ಪೆಗೆ ಸುರಿದ ಚಿಕ್ಕಬಳ್ಳಾಪುರ ರೈತರು