ಟೋಯಿಂಗ್ ಇಲ್ಲ ಅಂತ ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡುವ ಮುನ್ನ ಎಚ್ಚರ! ಟೋಯಿಂಗ್ ಬದಲು ಹೊಸ ಮಾರ್ಗಕ್ಕೆ ಮುಂದಾದ ಸಂಚಾರಿ ಪೊಲೀಸರು

| Updated By: ಆಯೇಷಾ ಬಾನು

Updated on: Aug 02, 2022 | 10:03 PM

ಕಳೆದ ಏಳು ತಿಂಗಳಿನಿಂದ ಪೊಲೀಸರು ನಗರದಲ್ಲಿ ಟೋಯಿಂಗ್ ನಿಲ್ಲಿಸಿದ್ದಾರೆ. ಸಂಚಾರ ಪೊಲೀಸರ ವಿರುದ್ಧ ಹಲವು ದೂರು ಬಂದ ಹಿನ್ನಲೆ ಸರ್ಕಾರ ಟೋಯಿಂಗ್ ನಿಲ್ಲಿಸಿದೆ.

ಟೋಯಿಂಗ್ ಇಲ್ಲ ಅಂತ ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡುವ ಮುನ್ನ ಎಚ್ಚರ! ಟೋಯಿಂಗ್ ಬದಲು ಹೊಸ ಮಾರ್ಗಕ್ಕೆ ಮುಂದಾದ ಸಂಚಾರಿ ಪೊಲೀಸರು
ಟೋಯಿಂಗ್‌ ವಾಹನ
Image Credit source: Deccan Herald
Follow us on

ಬೆಂಗಳೂರು: ಟೋಯಿಂಗ್ ಇಲ್ಲ ಅಂತ ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡುವ ಮುನ್ನ ಎಚ್ಚರ. ಏಕೆಂದರೆ ಸಂಚಾರ ಪೊಲೀಸರು ನಗರದಲ್ಲಿ ಟೋಯಿಂಗ್ ಬದಲು ವ್ಹೀಲ್ ಕ್ಲ್ಯಾಂಪ್ ಅಳವಡಿಸುತ್ತಿದ್ದಾರೆ. ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುವ ವಾಹನಗಳಿಗೆ ವ್ಹೀಲ್ ಕ್ಲ್ಯಾಂಪ್ ಅಳವಡಿಸಿ ದಂಡ ವಸೂಲಿ ಮಾಡಿ ವಾಹನ ರಿಲೀಸ್ ಮಾಡಲಾಗುತ್ತಿದೆ.

ಕಳೆದ ಏಳು ತಿಂಗಳಿನಿಂದ ಪೊಲೀಸರು ನಗರದಲ್ಲಿ ಟೋಯಿಂಗ್ ನಿಲ್ಲಿಸಿದ್ದಾರೆ. ಸಂಚಾರ ಪೊಲೀಸರ ವಿರುದ್ಧ ಹಲವು ದೂರು ಬಂದ ಹಿನ್ನಲೆ ಸರ್ಕಾರ ಟೋಯಿಂಗ್ ನಿಲ್ಲಿಸಿದೆ. ಟೋಯಿಂಗ್ ಇಲ್ಲ ಅಂತ ಸವಾರರು ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ವಾಹನ ಮಾಲೀಕರು ಬಂದ ಬಳಿಕ ಸ್ಥಳದಲ್ಲೇ ದಂಡ ವಸೂಲಿ ಮಾಡಿ ವಾಹನ ಬಿಟ್ಟುಕಳಿಸಲಾಗುತ್ತಿದೆ.

ಕೆಲ ತಿಂಗಳ ಹಿಂದೆ ವಸ್ತುಗಳನ್ನು ಡೆಲಿವರಿ ಮಾಡಲು ಬಂದಿದ್ದ ಯುವಕ ತನ್ನ ದ್ವಿಚಕ್ರ ವಾಹನ ನಿಲ್ಲಿಸಿದ್ದಾಗ ಅದನ್ನು ಎತ್ತಿಕೊಂಡು ಹೋಗಲಾಗಿತ್ತು. ಈ ವೇಳೆ ತನ್ನ ವಾಹನ ಬಿಡಿಸಿಕೊಳ್ಳಲು ಟೋಯಿಂಗ್‌ ವಾಹನದ ಹಿಂದೆ ಓಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಆಗ ಸಂಚಾರ ಪೊಲೀಸರು ಹಾಗೂ ಟೋಯಿಂಗ್‌ ವಾಹನ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಆನೆಕಲ್ ಭಾಗದಲ್ಲಿ ಸವಾರರು ನಿಲ್ಲಿಸಿದ್ದ ವಾಹನಗಳನ್ನು ಸುಖಾಸುಮ್ಮನೆ ಟೋಯಿಂಗ್‌ ವಾಹನದಲ್ಲಿ ಎತ್ತಿಕೊಂಡು ಹೋಗಿ ದಂಡ ವಿಧಿಸಲಾಗುತ್ತಿದೆ ಎಂದು ಕೆಲವರು ಆರೋಪಿಸಿದ್ದರು. ಈ ರೀತಿ ಅನೇಕ ಆರೋಪಗಳು ಬಂದ ಹಿನ್ನೆಲೆ ಸಂಚಾರ ಪೊಲೀಸರು ವ್ಹೀಲ್ ಕ್ಲ್ಯಾಂಪ್ ಅಳವಡಿಸಲು ಮುಂದಾಗಿದ್ದಾರೆ.

Published On - 10:03 pm, Tue, 2 August 22