ಲಾರಿ ಚಾಲಕರಿಗೆ ಬಿಸಿ ಮುಟ್ಟಿಸಲು ಸಂಚಾರ ಪೊಲೀಸರ ಪ್ಲಾನ್: ಜಾಗೃತಿ ಮೂಡಿಸಲು ಅಭಿಯಾನ

ಲಾರಿ ಚಾಲಕರಿಗೆ ಬಿಸಿ ಮುಟ್ಟಿಸಲು ಸಂಚಾರ ಪೊಲೀಸರ ಪ್ಲಾನ್: ಜಾಗೃತಿ ಮೂಡಿಸಲು ಅಭಿಯಾನ
ಬೆಂಗಳೂರಿನಲ್ಲಿ ಭಾನುವಾರ (ಜ.23) ಸಂಭವಿಸಿದ ಅಪಘಾತದಲ್ಲಿ ಪಲ್ಟಿ ಆಗಿರುವ ಲಾರಿ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಲಾರಿ ಚಾಲಕರಿಂದ ಅತಿಹೆಚ್ಚು ಅಪಘಾತಗಳು ವರದಿಯಾಗಿವೆ. ಒಂದೇ ವರ್ಷದಲ್ಲಿ 123 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಈ ಪೈಕಿ ಬಿಬಿಎಂಪಿ ಕಸದ ಲಾರಿಗಳಿಂದ ಹತ್ತಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 24, 2022 | 4:56 PM

ಬೆಂಗಳೂರು: ನಗರದಲ್ಲಿ ಅಪಘಾತಗಳು  (Accidents in Bengaluru) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾರಿ ಚಾಲಕರಲ್ಲಿ (Lorry Drivers) ಜಾಗೃತಿ ಮೂಡಿಸಲು ಸಂಚಾರ ಪೊಲೀಸರು  (Traffic Police) ಮುಂದಾಗಿದ್ದಾರೆ. ಕ್ಯಾಂಟರ್, ಲಾರಿ, ಟಿಪ್ಪರ್, ಟೆಂಪೊ ಚಾಲಕರಿಗೆ ರಾತ್ರಿ ವೇಳೆ ಸಂಚಾರ ನಿಯಮಗಳ ಬಗ್ಗೆ ಪಾಠ ಮಾಡಲಾಗುತ್ತಿದೆ. ವಾಹನಗಳ ಮೇಲೆ ಇರುವ ಹಳೇ ಪ್ರಕರಣಗಳ ಬಗ್ಗೆಯೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ನಿರ್ಲಕ್ಷ್ಯ ಚಾಲನೆ ಮಾಡುವ ಲಾರಿ ಚಾಲಕರ ವಿರುದ್ಧ ದಾಖಲಿಸುವುದಾಗಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಪೊಲೀಸರು, ರಾತ್ರಿ ವೇಳೆ ವಾಹನಗಳ ತಪಾಸಣೆಗಾಗಿ ಚೆಕ್‌ಪೋಸ್ಟ್ ನಿರ್ಮಿಸಿದ್ದಾರೆ. ನಗರದಲ್ಲಿ ಕೇವಲ ಒಂದೇ ವರ್ಷದಲ್ಲಿ 123 ಭೀಕರ ಅಪಘಾತಗಳಾಗಿವೆ. ಈ ಪೈಕಿ ಬಿಬಿಎಂಪಿ ಕಸದ ಲಾರಿಗಳಿಂದ 10ಕ್ಕೂ ಹೆಚ್ಚು ಅಪಘಾತ ಸಂಭವಿಸಿದೆ. ಹೀಗಾಗಿ ಬೆಂಗಳೂರು ಸಂಚಾರ ಪೊಲೀಸರು ಲಾರಿಗಳನ್ನು ತಡೆದು, ತಪಾಸಣೆ ನಡೆಸುವ ಕೆಲಸವನ್ನು ಚುರುಕು ಮಾಡಿದ್ದಾರೆ.

ಸಂಚಾರ ಪೊಲೀಸರು ರಾತ್ರಿ ಚೆಕ್​ ಪೋಸ್ಟ್​ ಹಾಕಿ, ಚಾಲಕರಿಗೆ ನಡುರಸ್ತೆಯಲ್ಲೇ ಸಂಚಾರ ನಿಯಮಗಳ ಬಗ್ಗೆ ಪಾಠ ಮಾಡುತ್ತಿದ್ದಾರೆ. ಲಾರಿ ಮೇಲೆ ದಾಖಲಾಗಿರುವ ಹಳೇ ಪ್ರಕರಣಗಳನ್ನು ನೋಡಿ ದಂಡ ವಸೂಲು ಮಾಡಿದ್ದಾರೆ. ಜೊತೆಗೆ ಲಾರಿ ಚಾಲಕರ ವಿರುದ್ಧವೂ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡುತ್ತಿದ್ದಾರೆ. ಸರಕು ಕೊಂಡೊಯ್ಯುವ ಚಾಲಕರು ಎಂಥ ತುರ್ತು ಪರಿಸ್ಥಿತಿ ಇದ್ದರೂ ಟ್ರಾಫಿಕ್ ಇನ್​ಸ್ಪೆಕ್ಟರ್​ಗಳ ಪಾಠ ಕೇಳಿಯೇ ಹೋಗಬೇಕು. ಪ್ರತಿದಿನ ಮೂವತ್ತಕ್ಕೂ ಹೆಚ್ಚು ಚಾಲಕರಿಗೆ ತರಬೇತಿ ನೀಡುತ್ತಿರುವ ಸಂಚಾರ ಪೊಲೀಸರು ಅಗತ್ಯ ಸಂದರ್ಭಗಳಲ್ಲಿ ಲಾರಿ ಮಾಲೀಕರನ್ನು ಸ್ಥಳಕ್ಕೆ ಕರೆಸಿ ಎಚ್ಚರಿಕೆ ನೀಡುತ್ತಿದ್ದಾರೆ.

ಜಾಗೃತಿ ಅಭಿಯಾನ ಹಿನ್ನೆಲೆಯಲ್ಲಿ ಮಡಿವಾಳದಲ್ಲಿ ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದು ಎಲ್ಲಾ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಪೊಲೀಸರು ಪಾಠ ಮಾಡಿದ್ದಾರೆ. ಹೀಗೆ ತರಬೇತಿ ಪಡೆದ ಚಾಲಕರು ಮತ್ತೊಮ್ಮೆ ಅತಿವೇಗ, ಅಜಾಗರೂಕ ಚಾಲನೆ ಮಾಡಿ, ಅಪಘಾತ ಸಂಭವಿಸಿದರೆ, ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಹಿರಿಯ ಅಧಿಕಾರಿಗಳ ಸೂಚನೆ ಹಿನ್ನಲೆಯಲ್ಲಿ ನಗರದ ಹಲವೆಡೆ ನಾಕಾಬಂದಿ ಹಾಕಿ ಬಿಬಿಎಂಪಿ ಕಸದ ಲಾರಿ ಚಾಲಕರಿಗೂ ಸಂಚಾರ ಪೊಲೀಸರು ಕ್ಲಾಸ್ ಮಾಡುತ್ತಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಲಾರಿ ಚಾಲಕರಿಂದ ಅತಿಹೆಚ್ಚು ಅಪಘಾತಗಳು ವರದಿಯಾಗಿವೆ. ಒಂದೇ ವರ್ಷದಲ್ಲಿ 123 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಈ ಪೈಕಿ ಬಿಬಿಎಂಪಿ ಕಸದ ಲಾರಿಗಳಿಂದ ಹತ್ತಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ.

ಪಾದಚಾರಿಗಳಿಗೂ ದಂಡ ಎಲ್ಲೆಂದರಲ್ಲಿ ರಸ್ತೆ ದಾಟುವ ಮೂಲಕ ಸುಗಮ ಸಂಚಾರಕ್ಕೆ ತಡೆಯುಂಟು ಮಾಡುವ ಪಾದಚಾರಿಗಳಿಗೂ 10 ರೂಪಾಯಿ ದಂಡ ವಿಧಿಸಲು ಸಂಚಾರ ಪೊಲೀಸರು ಚಿಂತನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲೆಂದರಲ್ಲಿ ರಸ್ತೆ ದಾಟುವಂತಿಲ್ಲ. ನಿಗದಿತ ಸ್ಥಳದಲ್ಲಿಯೇ ಜನರು ರಸ್ತೆ ದಾಟಬೇಕು. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಬಗ್ಗೆ ಪೊಲೀಸ್ ಅಧಿಕಾರಿಗಳ ವಲಯದಲ್ಲಿ ಗಂಭೀರ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ನಿಗದಿತ ಸ್ಥಳ ಹೊರತುಪಡಿಸಿ ರಸ್ತೆ ದಾಟಿದ ಕಾರಣದಿಂದ ಈಚೆಗೆ ಯಲಹಂಕ ಬಳಿ ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಪಾದಚಾರಿಗಳು ಮೃತಪಟ್ಟಿದ್ದರು. ಕಳೆದ ವರ್ಷವೂ ಎಲ್ಲೆಂದರಲ್ಲಿ ರಸ್ತೆ ದಾಟಿದ ಕಾರಣದಿಂದ ಸಾಕಷ್ಟು ಅಪಘಾತ ಪ್ರಕರಣಗಳು ವರದಿಯಾಗಿದ್ದವು. ಕಳೆದ ವರ್ಷ ಸುಮಾರು 69 ಜನ ನಿಗದಿತವಲ್ಲದ ಸ್ಥಳದಲ್ಲಿ ರಸ್ತೆ ದಾಟಿದ ಕಾರಣ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟಿದ್ದರು. ಇನ್ಮುಂದೆ ಜೀಬ್ರಾ ಕ್ರಾಸಿಂಗ್​​ನಲ್ಲಿ ಮಾತ್ರ ಪಾದಚಾರಿಗಳು ರಸ್ತೆ ದಾಟಬೇಕು. ರಸ್ತೆ ಮಧ್ಯ ಭಾಗದಲ್ಲಿ ದಾಟಿದರೆ ಪೊಲೀಸರು ದಂಡ ವಿಧಿಸುತ್ತಾರೆ. ನಿಯಮ ಉಲ್ಲಂಘಿಸಿದವರು ಕಂಡು ಬಂದಾಗ ಸ್ಥಳದಲ್ಲೇ ದಂಡ ವಸೂಲಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕೆಮಿಕಲ್ ಆಯಿಲ್ ತುಂಬಿದ್ದ ಲಾರಿ‌ ಪಲ್ಟಿ; ಲಾರಿ ಅಡಿಗೆ ಸಿಲುಕಿ ಹಿರಿಯ ಪತ್ರಕರ್ತ ಗಂಗಾಧರ ಮೂರ್ತಿ ಸಾವು ಇದನ್ನೂ ಓದಿ: ತುಮಕೂರು: ಅಪಘಾತದಲ್ಲಿ ಮೂವರ ಸಾವಿಗೆ ಕಾರಣನಾಗಿದ್ದ ಲಾರಿ ಚಾಲಕ 16 ವರ್ಷಗಳ ಬಳಿಕ ಪೊಲೀಸರ ವಶಕ್ಕೆ!

Follow us on

Related Stories

Most Read Stories

Click on your DTH Provider to Add TV9 Kannada