ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ; ನಿಮ್ಮ ರೂಟ್ ಬಸ್ ಎಲ್ಲಿದೆ? ಹತ್ತಿರದ ನಿಲ್ದಾಣದ ಬಗ್ಗೆ ಮೊಬೈಲ್ನಲ್ಲೇ ಸಿಗುತ್ತೆ ಮಾಹಿತಿ
Namma BMTC App: 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಬೆಂಗಳೂರು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ರಜತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರು 'ನಮ್ಮ ಬಿಎಂಟಿಸಿ' ಆ್ಯಪ್ ಮತ್ತು ಲೋಗೋ ಬಿಡುಗಡೆ ಮಾಡಿದರು.
ಬೆಂಗಳೂರು, ಸೆ.27: 25 ವರ್ಷಗಳನ್ನು ಪೂರೈಸಿರುವ ಯಶಸ್ಸಿನಲ್ಲಿರುವ ಬಿಎಂಟಿಸಿ (BMTC) ಸಂಸ್ಥೆಯು ಬೆಂಗಳೂರಿನ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮಹಿಳಾ ಸುರಕ್ಷತೆಯ ಆದ್ಯತೆ ಹಾಗೂ ಬಸ್ ಲೈವ್ ರೂಟ್ ಟ್ರ್ಯಾಕಿಂಗ್ ಸೌಲಭ್ಯ ಹೊಂದಿರುವ ‘ನಮ್ಮ ಬಿಎಂಟಿಸಿ’ (Namma BMTC App) ಎಂಬ ಹೆಸರಿನಲ್ಲಿ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಬೆಂಗಳೂರು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ರಜತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರು ‘ನಮ್ಮ ಬಿಎಂಟಿಸಿ’ ಆ್ಯಪ್ ಮತ್ತು ಲೋಗೋ ಬಿಡುಗಡೆ ಮಾಡಿದರು.
ಈ ಆ್ಯಪ್ ಮೂಲಕ 5,000 BMTC ಬಸ್‌ಗಳ ಟ್ರ್ಯಾಕ್ ಮಾಡುವ ವ್ಯವಸ್ಥೆ ಇದೆ. ಬಸ್‌ಗಳ ಸ್ಥಳ ತಿಳಿಯಲು ಎಐಎಸ್ 140, ಪ್ರಮಾಣಿತ 5000 ವಾಹನ ಟ್ರ್ಯಾಕಿಂಗ್ ಸಾಧನಗಳು, ಎಂಎನ್‌ವಿಆರ್ ವಿಡಿಯೋ ರೆಕಾರ್ಡರ್ ಮತ್ತು ಪ್ಯಾನಿಕ್ ಬಟನ್ ಹಾಗೂ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಲಾಗಿದೆ. 10,000 ಸಿಸಿಟಿವಿ ಕ್ಯಾಮೆರಾಗಳು, ಮಹಿಳಾ ಸುರಕ್ಷತೆಗೆ ಎಸ್‌ಒಎಸ್ ಫೀಚರ್‌ಗಳನ್ನು ಒಳಗೊಂಡಿದೆ. ಬಸ್‌ಗಳ ವೇಳಾಪಟ್ಟಿ, ಹತ್ತಿರದ ಬಸ್ ನಿಲ್ದಾಣ, ಲೈವ್ ರೂಟ್ ಟ್ರ್ಯಾಕ್, ಸಹಾಯವಾಣಿ, ಜರ್ನಿ ಪ್ಲಾನರ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಈ ಆ್ಯಪ್ ಒಳಗೊಂಡಿದೆ. ಈ ಆ್ಯಪ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ. ಪ್ರಯಾಣಿಕರು ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು ಇದರ ಸದುಪಯೋಗ ಪಡಿಯಬಹುದು.
ಇದನ್ನೂ ಓದಿ: ಸಾಲು-ಸಾಲು ರಾಷ್ಟ್ರೀಯ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡ ಕೆಎಸ್ಆರ್ಟಿಸಿ, ಬಿಎಂಟಿಸಿ
ನಿರ್ಭಯ ಯೋಜನೆಯಡಿ ಈ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ 6,500ಕ್ಕೂ ಹೆಚ್ಚು ಬಸ್‌ಗಳಿದ್ದು, 5000 ಬಸ್‌ಗಳನ್ನು ಆ್ಯಪ್ ಮೂಲಕ ಟ್ರ್ಯಾಕ್ ಮಾಡುವ ವ್ಯವಸ್ಥೆ ಇದೆ. ಇನ್ನು ಮೊಬೈಲ್ ಆ್ಯಪ್ ಮೂಲಕ ಬಿಎಂಟಿಸಿ ಬಸ್ ಟಿಕೆಟ್ ಖರೀದಿಸಲು ಅನುಕೂಲ ಮಾಡಿಕೊಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಆದರೆ, ನಮ್ಮ ಬಿಎಂಟಿಸಿಯಲ್ಲಿ ಈ ಸೌಲಭ್ಯ ಇಲ್ಲ. ಅಪ್ಲಿಕೇಶನ್ ಬಳಸಿಕೊಂಡು ಪಾಸ್‌ಗಳನ್ನು (ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ) ಖರೀದಿಸಬಹುದು. “ನಾವು ಡಿಜಿಟಲ್ ಮೋಡ್ ಮೂಲಕ ಟಿಕೆಟ್ ಖರೀದಿಸಲು ಪ್ರಯಾಣಿಕರನ್ನು ಹೇಗೆ ಸಕ್ರಿಯಗೊಳಿಸಬಹುದು ಎಂಬುದರ ಕುರಿತು ನಾವು ವಿವಿಧ ಮಾರ್ಗಗಳ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:47 pm, Wed, 27 September 23