ಬಿಜೆಪಿ ಜತೆ ಮೈತ್ರಿ ಬೆನ್ನಲ್ಲೇ ತಮ್ಮ ಸೆಕ್ಯುಲರಿಸಂ ಪ್ರಶ್ನಿಸಿದವರಿಗೆ ಖಡಕ್ ಉತ್ತರ ಕೊಟ್ಟ ದೇವೇಗೌಡ
ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಅವರ ಸೆಕ್ಯುಲರಿಸಂ ಬಗ್ಗೆ ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಇದೀಗ ಅವರಿಗೆ ದೇವೇಗೌಡ ಖಡಕ್ ಆಗಿಯೇ ಉತ್ತರಿಸಿದ್ದಾರೆ. ಹಾಗಾದ್ರೆ, ದೇವೇಗೌಡ ಸುದ್ದಿಗೋಷ್ಟಿಯಲ್ಲಿ ಏನೆಲ್ಲ ಮಾತನಾಡಿದ್ದಾರೆ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.
ಬೆಂಗಳೂರು, (ಸೆಪ್ಟೆಂಬರ್, 27): ಜೆಡಿಎಸ್ (JDS) ಎನ್ಡಿಎ ಮೈತ್ರಿಕೂಟ (jds bjp alliance) ಸೇರಿದ್ದರಿಂದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ (HD Devegowda) ಅವರ ಸೆಕ್ಯುಲರಿಸಂ (Secularism) ಬಗ್ಗೆ ಪ್ರಶ್ನಿಸಿಸುತ್ತಿದ್ದಾರೆ. ಅಲ್ಲದೇ ಪಕ್ಷದಲ್ಲೇ ಮುಸ್ಲಿಂ ನಾಯಕರ ಸೇರಿದಂತೆ ಇತರೆ ಕೆಲ ನಾಯಕರು ಸಿದ್ಧಾಂತ ಆಧಾರದ ಮೇಲೆ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಅವರು ಇಂದು(ಸೆ.27) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಮನಸ್ಸಲ್ಲಿ ಕಿಂಚಿತ್ತೂ ಸೆಕ್ಯುಲರ್ ತೆಗೆದು ಹಾಕುವ ಮನಸ್ಸು ಮಾಡಿಲ್ಲ. ಮುಂದೆಯೂ ನಾವು ಮಾಡುವುದಿಲ್ಲ. ಇದನ್ನ ಖಂಡಾತುಂಡವಾಗಿ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ತಮ್ಮ ಪಕ್ಷದ ನಾಯಕರಿಗೆ ಹಾಗೂ ತಮ್ಮ ಸೆಕ್ಯುಲರಿಸಂ ಬಗ್ಗೆ ಕುಹಕವಾಡುತ್ತಿದ್ದವರಿಗೆ ಖಡಕ್ ಉತ್ತರ ಕೊಟ್ಟರು.
ಕುಮಾರಸ್ವಾಮಿ ಅವರು ಬಿಜೆಪಿ ನಾಯಕರನ್ನ ಭೇಟಿ ಆಗುವ ಮೊದಲು ಗೃಹ ಸಚಿವ ಅಮಿತ್ ಶಾ ಬಳಿ ನಾನು ಚರ್ಚೆ ಮಾಡಿದ್ದೇನೆ. ಕದ್ದು ಮುಚ್ಚಿ ಮಾತನಾಡುವ ಅಗತ್ಯ ಇಲ್ಲ. ಕರ್ನಾಟಕ ಪರಿಸ್ಥಿತಿ ಏನಿದೆ ಅಂತ ಶಾ ಹತ್ತಿರ ಎಲ್ಲಾ ವಿಚಾರ ಮಾತಾಡಿದ್ದೇನೆ. ಇದನ್ನು ಮೊದಲು ಸರಿ ಮಾಡಿ ನಂತರ ಕುಮಾರಸ್ವಾಮಿ ಅವರು ಬಂದು ಮಾತಾಡುತ್ತಾರೆ ಎಂದು ಹೇಳಿದ್ದೆ. ಯಾವುದೇ ಸಮುದಾಯಕ್ಕೆ ಈ ಪಕ್ಷದಿಂದ ಅನ್ಯಾಯ ಆಗಲು ಬಿಡಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಜೆಡಿಎಸ್ಗೆ ಬಿಗ್ ಶಾಕ್, ಸಾಮೂಹಿಕವಾಗಿ ಪಕ್ಷ ತೊರೆಯಲು ತೀರ್ಮಾನಿಸಿದ ಮುಸ್ಲಿಂ ನಾಯಕರು
ಇವತ್ತು ಯಾಕೆ ಹೀಗಾಯ್ತು, ಯಾರು ಇದಕ್ಕೆ ಕಾರಣ? ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರ ಸರ್ಕಾರ ತೆಗೆದದ್ದು ಯಾರು? 17 ಜನ ಎಮ್ ಎಲ್ ಎ ಗಳನ್ನ ಮುಂಬೈಗೆ ಕಳುಹಿಸಿದ್ದು ಯಾರು? ಬಿಜೆಪಿ ಸರ್ಕಾರ ಬರಲು ಅವಕಾಶ ಕೊಟ್ಟಿದ್ದು ಯಾರು? ಇದೆಲ್ಲಾ ಚರ್ಚೆ ಆಗಲಿ, ಚರ್ಚೆ ಮಾಡೋಣ. ಯಾರು ಇದಕ್ಕೆಲ್ಲ ಕಾರಣ ಕುಮಾರಸ್ವಾಮಿ ನಾ? ಕುಮಾರಸ್ವಾಮಿ ಸಿಎಂ ಆಗಲಿ ಎಂದು ಯಾರಾದರೂ ಮನೆ ಬಾಗಿಲಿಗೆ ಹೋಗಿದ್ರಾ? ಅವರೇ ನಮ್ಮ ಮನೆ ಬಾಗಿಲಿಗೆ ಬಂದಿದ್ದು. ಯಾವ ಕಾರಣಕ್ಕೂ ಸಹವಾಸ ಬೇಡ ಅಂದೆ. ಆಗ ನನಗೆ ಒತ್ತಾಯ ಮಾಡಿದ್ರು ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಯಾವುದೇ ಕಾರಣಕ್ಕೂ ಅಧಿಕಾರಕ್ಕಾಗಿ ರಾಜಕೀಯ ಮಾಡಿಲ್ಲ. ರಾಹುಲ್ ಗಾಂಧಿ ಕೈಯಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಮ್ ಅಂತ ಹೇಳಿಸಿದ್ರು. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಾಗ ಏನು ಮಾಡಿದ್ರು ಎಂದು ನಾನು ನೋಡಿಲ್ವಾ. ಈಗ ಮೈತ್ರಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ದೇಶದಲ್ಲಿ ಒಂದೇ ಕುಟುಂಬ ಆಡಳಿತ ಮಾಡಬೇಕಾ? ಎಂದು ಪರೋಕ್ಷವಾಗಿ ಗಾಂಧಿ ಕುಟುಂಬದ ವಿರುದ್ಧ ಕಿಡಿಕಾರಿದರು.
ಅಲ್ಪಸಂಖ್ಯಾತ ಆ ದಿನ ಸೋಲಿಸಿದ್ರು. ಫಾರೂಕ್ ಅಬ್ದುಲ್ ಅವರನ್ನ ಯಾಕೆ ಸೋಲಿಸಿದ್ರು. ಕಾಂಗ್ರೆಸ್ ಜೆಡಿಎಸ್ ಗೆ ಮೋಸ ಮಾಡಿರುವ 100 ಉದಾಹರಣೆಗಳನ್ನ ಕೊಡವೆ. ಕಾಂಗ್ರೆಸ್ ಹಲವಾರು ಬಾರಿ ಬ್ಲಂಡರ್ ಮಾಡಿದೆ. ಈಗ ನೀವು ಜಾತ್ಯತೀತ ಬಗ್ಗೆ ಮಾತನಾಡುತ್ತಿರಾ ಎಂದ ದೇವೇಗೌಡ ನಾವು ಯಾವುದಕ್ಕೂ ಕೇರ್ ಮಾಡಲ್ಲ ಎಂದು ಗುಡುಗಿದರು.
ಮೈತ್ರಿ ಕುರಿತು ಮೊದಲ ಬಾರಿಗೆ ಗೃಹ ಸಚಿವ ಬಳಿ ಚರ್ಚೆ ಮಾಡಿದ್ದೆ. ಪ್ರಧಾನಿ ಮೋದಿಯವರು ತುಂಬಾ ಬ್ಯುಸಿ ಇದ್ದರು.ಅದಕ್ಕೆ ಚರ್ಚೆ ಮಾಡಿಲ್ಲ. ನಾನು ಎಲ್ಲಾ ಶಾಸಕರು, ಎಂಎಲ್ಸಿಗಳ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದರು.
ಇನ್ನು ಇದೇ ವೇಳೆ ಮೈತ್ರಿಗೆ ಶಾಸಕಿ ಕರೆಮ್ಮ ವಿರೋಧದ ಬಗ್ಗೆ ಮಾತನಾಡಿದ ದೇವೇಗೌಡ, ನಾನು ನಿನ್ನೆ ಕರೆಯಮ್ಮ ಜತೆ ಚರ್ಚೆ ಮಾಡಿದ್ದೇನೆ. ಕುಮಾರಸ್ವಾಮಿ, ನೀವು ಬದುಕಿರುವವರೆಗೂ ನಮ್ಮನ್ನ ನಿಮ್ಮನ್ನ(ಹೆಚ್ಡಿ ದೇವೇಗೌಡ) ಯಾರು ಬೇರು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ನೀವು(ದೇವೇಗೌಡ), ಕುಮಾರಸ್ವಾಮಿ ಬದುಕಿರುವವರೆಗೂ ನಾನು ಯಾವುದೇ ಪಕ್ಷದ ಕಡೆ ಹೋಗಲ್ಲ ಎಂದು ಪ್ರಮಾಣ ಮಾಡಿದ್ದಾರೆ. ಕೆಲವರು ಮಾತನಾಡುತ್ತಿದ್ದಾರೆ ಅಷ್ಟೇ ಎಂದು ದೇವೇಗೌಡ ಅವರು ತಮ್ಮ ಬಳಿ ಕರೆಮ್ಮ ಹೇಳಿದ್ದನ್ನು ಬಿಚ್ಚಿಟ್ಟರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:23 pm, Wed, 27 September 23