ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ: ಬೆಂಗಳೂರು ಬಂದ್​​ ಹಿಂಪಡೆದ ಖಾಸಗಿ ಸಾರಿಗೆ ಒಕ್ಕೂಟ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 11, 2023 | 3:08 PM

ಕರ್ನಾಟಕ ಸರ್ಕಾರ ಜಾರಿಗೆ ಶಕ್ತಿಯೋಜನೆಯಿಂದ ಖಾಸಗಿ ಸಾರಿಗೆಗಳಿಗೆ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇಂದು ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ನಗರ ಬಂದ್​ ಕರೆ ನೀಡಿತ್ತು. ಆದರೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮನವಿ ಮಾಡಿ, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಬಳಿಕ ಖಾಸಗಿ ಸಾರಿಗೆ ಒಕ್ಕೂಟ ಬಂದ್​ ಹಿಂಪಡೆದಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ: ಬೆಂಗಳೂರು ಬಂದ್​​ ಹಿಂಪಡೆದ ಖಾಸಗಿ ಸಾರಿಗೆ ಒಕ್ಕೂಟ
ಪ್ರತಿನಿಧಿಕ ಚಿತ್ರ
Follow us on

ಬೆಂಗಳೂರು, ಸೆಪ್ಟೆಂಬರ್​ 11: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದಾಗಿ ಖಾಸಗಿ ವಾಹನಗಳ ಚಾಲಕರು ಮತ್ತು ಮಾಲೀಕರಿಗೆ ಹೊಡೆತಬಿದ್ದಿದೆ. ಹಾಗಾಗಿ ಇಂದು ಆಟೋ ಚಾಲಕರು, ಖಾಸಗಿ ಬಸ್ ಮಾಲೀಕರು, ಕ್ಯಾಬ್ ಮಾಲೀಕರು ಬಂದ್​ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದರು. ಆದರೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (Ramalinga Reddy) ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ನಗರ ಬಂದ್ ಅನ್ನು​​ ಹಿಂಪಡೆದಿದ್ದಾರೆ.

ಬೇಡಿಕೆಗಳನ್ನು ಈಡೇರಿಸಲು ಸಮಯ ಬೇಕು: ಸಚಿವ ರಾಮಲಿಂಗಾರೆಡ್ಡಿ

ಟಿವಿ9ಗೆ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು, ಖಾಸಗಿ ಸಾರಿಗೆ ಕೆಲ ಬೇಡಿಕೆ ಈಡೇರಿಸಲು ಭರವಸೆ ನೀಡಿದ್ದೇನೆ. ಕೆಲವು ಬೇಡಿಕೆಗಳನ್ನು ಈಡೇರಿಸಲು ಸಮಯ ಬೇಕಾಗುತ್ತದೆ. ನಾನೇ ಖಾಸಗಿ ಸಾರಿಗೆಯವರ ಪರ ಇದ್ದೇನೆ. ಯಾವುದೇ ಅನುಮತಿ ಇಲ್ಲದೆ ಬೈಕ್​ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಸದ್ಯದಲ್ಲೇ ಹೊಸ ಆ್ಯಪ್ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಂಡ್ಯ; ಬೆಂಗಳೂರು ಮೈಸೂರು ಹೆದ್ದಾರಿ ಬಂದ್ ಹಿಂಪಡೆದ ರೈತ ಸಂಘ

ಖಾಸಗಿ ಸಾರಿಗೆಯವರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡುತ್ತೇವೆ. ನಾನು ನಿಮ್ಮ ಪರವಾಗಿಯೇ ಇದ್ದೇನೆ. ವಸತಿ ನೀಡುವ ಬಗ್ಗೆ ಜಮೀರ್ ಜೊತೆ ಮತ್ತೊಮ್ಮೆ ಚರ್ಚಿಸೋಣ. ಖಾಸಗಿ ಬಸ್​ ಮಾಲೀಕರ ಸಮಸ್ಯೆ ಬಗ್ಗೆ ಸಿಎಂ ಜತೆ ಚರ್ಚೆ ಮಾಡುತ್ತೇನೆ. ಕಾನೂನು ಬಾಹಿರವಾಗಿ ಗೂಡ್ಸ್​ ವಾಹನ ಓಡಿಸಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈಡೇರಿಸಬಹುದಾದ ಖಾಸಗಿ ಸಾರಿಗೆ ಒಕ್ಕೂಟಗಳ ಬೇಡಿಕೆಗಳನ್ನು ಈಡೇರಿಸುತ್ತೇವೆ: ರಾಮಲಿಂಗಾರೆಡ್ಡಿ

ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಏರ್​ಪೋರ್ಟ್​ ಬಳಿ ಇಂದಿರಾ ಕ್ಯಾಂಟೀನ್​ ಓಪನ್​ ಮಾಡುತ್ತೇವೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವ ಬಗ್ಗೆ ಸಿಎಂ ಜತೆ ಚರ್ಚಿಸುವೆ. ಓಲಾ, ಉಬರ್, ರಾಪಿಡೊ ಬಗ್ಗೆ ಕೋರ್ಟ್​​ನಲ್ಲಿ ಕೇಸ್ ನಡೆಯುತ್ತಿದೆ. ಒಂದು ನಗರ, ಒಂದು ದರ ಮಾಡುವ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇವೆ. ವಸತಿ ಹಂಚಿಕೆ ಬಗ್ಗೆ ಸಚಿವ ಜಮೀರ್ ಅಹ್ಮದ್ ಜೊತೆ ಮಾತನಾಡುತ್ತೇನೆ. ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 17 ಕೋಟಿ ರೂ. ಅನುದಾನ ಇಡಲಿದ್ದೇವೆ. ಬಸ್ ಮಾಲೀಕರ ಸಂಘದ ಬೇಡಿಕೆ ಬಗ್ಗೆ ಸಿಎಂ ಜತೆ ಚರ್ಚೆ ಆಗಬೇಕು ಎಂದಿದ್ದಾರೆ.

ಬೇಡಿಕೆ ಈಡೇರಿಸದಿದ್ದರೆ ಮತ್ತೆ ಹೋರಾಟ: ನಟರಾಜ್ ಶರ್ಮಾ

ಬಂದ್​​ ಹಿಂಪಡೆದು ಬಳಿಕ ಮಾತನಾಡಿದ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ, 32ರಲ್ಲಿ 27 ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಹಾಗಾಗಿ ಬಂದ್​ ಹಿಂಪಡೆಯುತ್ತಿದ್ದೇವೆ. ಟ್ಯಾಕ್ಸ್​ ಕಡಿಮೆ ಬಗ್ಗೆಯೂ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ನಾಡಿದ್ದು ಮತ್ತೆ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:40 pm, Mon, 11 September 23