ಇಂದಿರಾ ಕ್ಯಾಂಟೀನ್​​ ಬಾಕಿ ಬಿಲ್​ ಷಡ್ಯಂತ್ರ: ಚೈತ್ರಾ ಕುಂದಾಪುರ ಆರೋಪಕ್ಕೆ ತುಷಾರ್​ ಗಿರಿನಾಥ್​ ಸ್ಪಷ್ಟನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 14, 2023 | 7:39 PM

ಇಂದಿರಾ ಕ್ಯಾಂಟೀನ್ ಬಿಲ್ ಪೆಂಡಿಂಗ್ ಇದೆ. ಅದಕ್ಕಾಗಿ ಈ ಷಡ್ಯಂತ್ರ ಮಾಡಿದ್ದಾರೆ ಎಂಬ ಚೈತ್ರಾ ಕುಂದಾಪುರ ಆರೋಪಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ಸ್ಪಷ್ಟನೆ ನೀಡಿದ್ದು, ಇಂದಿರಾ ಕ್ಯಾಂಟೀನ್ ಬಹುತೇಕ ಬಿಲ್ ಕ್ಲಿಯರ್ ಮಾಡಲಾಗಿದೆ. ಕೆಲವು ಸಣ್ಣಪುಟ್ಟ ಬಿಲ್​ ಬಾಕಿ ಉಳಿಸಿಕೊಂಡಿರಬೇಕು.ಗುತ್ತಿಗೆದಾರರಿಗೆ ಯಾವುದೇ ರೀತಿಯ ಬಿಲ್ ಬಾಕಿ ಉಳಿಸಿಕೊಂಡಿಲ್ಲ ಎಂದಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್​ 14: ಬಿಜೆಪಿ ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ಮಹಾ ವಂಚನೆಯೇ ನಡೆದಿದೆ. ಹಿಂದೂ ಕಾರ್ಯಕರ್ತೆ, ಫೈರ್ ಬ್ರಾಂಡ್ ಲೇಡಿ ಅಂತ ಖ್ಯಾತಿ ಗಳಿಸಿದ್ದ ಚೈತ್ರಾ ಕುಂದಾಪುರ (Chaitra Kundapura) ಅವರನ್ನು ಈಗಾಗಲೇ ಬಂಧಿಸಿ ಸಿಸಿಬಿ ವಿಚಾರಣೆ ನಡೆಸುತ್ತಿದೆ. ವಿಚಾರಣೆಗೆ ಎಂದು ಇಂದು ಕಚೇರಿ ಒಳಗೆ ಹೋಗುವಾಗ ಚೈತ್ರಾ ಕುಂದಾಪುರ ಮತ್ತೊಂದು ಬಾಂಬ್ ಹಾಕಿದ್ದರು. ಇಂದಿರಾ ಕ್ಯಾಂಟೀನ್ ಬಿಲ್ ಪೆಂಡಿಂಗ್ ಇದೆ. ಅದಕ್ಕಾಗಿ ಈ ಷಡ್ಯಂತ್ರ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಸದ್ಯ ಚೈತ್ರಾ ಕುಂದಾಪುರ ಆರೋಪಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಬಹುತೇಕ ಬಿಲ್ ಕ್ಲಿಯರ್ ಮಾಡಲಾಗಿದೆ. ಕೆಲವು ಸಣ್ಣಪುಟ್ಟ ಬಿಲ್​ ಬಾಕಿ ಉಳಿಸಿಕೊಂಡಿರಬೇಕು. ಕಾನೂನಾತ್ಮಕವಾಗಿ ಇಂದಿರಾ ಕ್ಯಾಂಟೀನ್ ಬಿಲ್ ಪಾವತಿ ಆಗಿದೆ. ಗುತ್ತಿಗೆದಾರರಿಗೆ ಯಾವುದೇ ರೀತಿಯ ಬಿಲ್ ಬಾಕಿ ಉಳಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

98 ಇಂದಿರಾ ಕ್ಯಾಂಟೀನ್ ಗುತ್ತಿಗೆ ಹೊಂದಿದ್ದ ಗೋವಿಂದಬಾಬು

ಅಸಲಿಗೆ ದೂರುದಾರ ಗೋವಿಂದ ಬಾಬು ಪೂಜಾರಿ ಚೆಫ್​ ಟ್ಯಾಕ್ ಎನ್ನುವ ಕಂಪನಿ ನಡೆಸುತ್ತಿದ್ದು, 2017ರಿಂದ ಇಂದಿರಾ ಕ್ಯಾಂಟೀನ್ ಟೆಂಡರ್ ಪಡೆದಿದ್ದಾರೆ. ಗೋವಿಂದಬಾಬು ಒಟ್ಟು 98 ಇಂದಿರಾ ಕ್ಯಾಂಟೀನ್ ಗುತ್ತಿಗೆ ಹೊಂದಿದ್ದಾರೆ. ಗೋವಿಂದ ಬಾಬುಗೆ ಅಂದಾಜು 35 ಕೋಟಿ ರೂ. ಹಣ ಬರಬೇಕಿದೆ ಎನ್ನಲಾಗಿದೆ. ಇದಕ್ಕಾಗೇ ಚೈತ್ರಾ ಕುಂದಾಪುರ ಇಂಥಾದ್ದೊಂದು ಆರೋಪ ಮಾಡಿದ್ದಾರೆ ಎನ್ನುವ ಅನುಮಾನ ಇದೆ.

ಇಂದಿರಾ ಕ್ಯಾಂಟಿನ್‌ಗೂ, ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ: ಗೋವಿಂದ‌ಬಾಬು 

ಈ ಕುರಿತಾಗಿ ಬೆಂಗಳೂರಿನ ಸಿಸಿಬಿ ಕಚೇರಿ ಬಳಿ ಗೋವಿಂದ‌ಬಾಬು ಪೂಜಾರಿ ಹೇಳಿಕೆ ನೀಡಿದ್ದು, ಇಂದಿರಾ ಕ್ಯಾಂಟಿನ್‌ಗೂ, ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅದು ನನ್ನ ಬಿಸಿನೆಸ್, ಇದು ನನಗೆ ಆಗಿರುವ ವಂಚನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: MLA ticket cheating case: ನಕಲಿ ನಾಯಕರುಗಳ ಮಧ್ಯೆ ಒಮ್ಮೆ ಅಸಲಿ ಸಚಿವರನ್ನೇ ಭೇಟಿ ಮಾಡಿಸಿದ್ದ ಮಿಸ್​​ ಚೈತ್ರಾ ಕುಂದಾಪುರ, ಅಂದಿನ ಸಚಿವ ಸುನಿಲ್ ಕುಮಾರ್​ಗೆ ಇಂದು ಶಾಕ್​!

ಸಿಸಿಬಿ ಅಧಿಕಾರಿಗಳು ಕರೆದಿದ್ದಕ್ಕೆ ವಿಚಾರಣೆಗೆ ಆಗಮಿಸಿದ್ದೇನೆ. ದೂರಿನಲ್ಲಿ ಯಾರೆಲ್ಲಾ ಇದ್ದಾರೋ ಅವರನ್ನೆಲ್ಲಾ ಭೇಟಿಯಾಗಿದ್ದೇನೆ. ವಂಚನೆ ಸಂಬಂಧ ಎಲ್ಲಾ ಮಾಹಿತಿ ನೀಡಿದ್ದೇನೆ, ವಿಚಾರಣೆ ನಡೆಯುತ್ತಿದೆ. ಸಿಸಿಬಿ ಅಧಿಕಾರಿಗಳ ವಿಚಾರಣೆ ಮುಗಿಸಿಕೊಂಡು ಮತ್ತೆ ಮಾತನಾಡುತ್ತೇನೆ ಎಂದಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ತೆರಳಿದ ಹಾಲಶ್ರೀ

MLA ಟಿಕೆಟ್ ಕೊಡಲು ಹಗಡಲಿ ತಾಲೂಕಿನ ಹಿರೇಹಡಗಲಿ ಹಾಲು ಮಠದ ಅಭಿನವ ಹಾಲಶ್ರೀ 1.50 ಕೋಟಿ ರೂ. ಹಣ ಪಡೆದಿದ್ದಾರೆ ಎನ್ನಲಾಗುತ್ತಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಾಲಶೀ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಹಿಂದೂಪರ ಸಂಘಟನೆಗಳಲ್ಲಿ ಹಾಲಶ್ರೀ ಗುರುಸಿಕೊಂಡಿದ್ದರು. ವಂಚನೆ ಪ್ರಕರಣದಲ್ಲಿ A3 ಆರೋಪಿ ಕೂಡ ಆಗಿದ್ದಾರೆ. ಬೆಳಗಿನಿಂದ ಹಾಲಶ್ರೀ ಮೊಬೈಲ್ ಸ್ವೀಚ್ ಆಫ್​ ಆಗಿದ್ದು, ಹಾಲ ಮಠಕ್ಕೂ ಬಾರದೇ, ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಹಾಗಾಗಿ ಸ್ವಾಮೀಜಿ ನಡೆ ಹಲವು ನಿಗೂಢಕ್ಕೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:26 pm, Thu, 14 September 23