ಚೈತ್ರಾ ಕುಂದಾಪುರ ಪ್ರಕರಣದ ಬಗ್ಗೆ ಮಂಗಳೂರಿನಲ್ಲಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ; ಇಲ್ಲಿದೆ ವಿವರ

ಪ್ರಕರಣದಲ್ಲಿ ಪ್ರಮುಖರ ಹೆಸರು ಹೊರಬೀಳಲಿದೆ ಎಂಬ ಚೈತ್ರಾ ಕುಂದಾಪುರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೆಸರು ಬಹಿರಂಗವಾಗಲಿ. ತನಿಖೆ ನಡೆಯುತ್ತಿದೆ ಮತ್ತು ಅದರಲ್ಲಿ ಶಾಮೀಲಾಗಿರುವವರು ಶಿಕ್ಷೆಗೆ ಅರ್ಹರು ಎಂದು ಹೇಳಿದ್ದಾರೆ.

ಚೈತ್ರಾ ಕುಂದಾಪುರ ಪ್ರಕರಣದ ಬಗ್ಗೆ ಮಂಗಳೂರಿನಲ್ಲಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ; ಇಲ್ಲಿದೆ ವಿವರ
ಬಸವರಾಜ ಬೊಮ್ಮಾಯಿ
Follow us
| Updated By: ಗಣಪತಿ ಶರ್ಮ

Updated on: Sep 14, 2023 | 4:34 PM

ಮಂಗಳೂರು, ಸೆಪ್ಟೆಂಬರ್ 14: ಚೈತ್ರಾ ಕುಂದಾಪುರ (Chaitra Kundapura) ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಮಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಈ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲರನ್ನೂ ಬಂಧಿಸಲಿ. ತನಿಖೆಯ ನಂತರ ಸತ್ಯ ಹೊರಬೀಳಲಿದೆ. ಪಕ್ಷವನ್ನು ದುರುಪಯೋಗಪಡಿಸಿಕೊಂಡಾಗ ಬಿಜೆಪಿ ಆ ವಿಷಯದ ಬಗ್ಗೆ ಗಂಭೀರವಾಗಿ ಯೋಚಿಸುತ್ತದೆ ಎಂದು ಹೇಳಿದರು. ಪ್ರಕರಣದಲ್ಲಿ ಪ್ರಮುಖರ ಹೆಸರು ಹೊರಬೀಳಲಿದೆ ಎಂಬ ಚೈತ್ರಾ ಕುಂದಾಪುರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೆಸರು ಬಹಿರಂಗವಾಗಲಿ. ತನಿಖೆ ನಡೆಯುತ್ತಿದೆ ಮತ್ತು ಅದರಲ್ಲಿ ಶಾಮೀಲಾಗಿರುವವರು ಶಿಕ್ಷೆಗೆ ಅರ್ಹರು ಎಂದು ಹೇಳಿದ್ದಾರೆ.

ಇನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನಸಲ್ಲೇನಿದೆ ಗೊತ್ತಿಲ್ಲ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ತಿಳಿಸಿದ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಮತ್ತೆ ಆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಹಾಗೂ ಸೀಟು ಹಂಚಿಕೆ ಕುರಿತು ಚರ್ಚೆಗಳು ಪ್ರಾಥಮಿಕ ಹಂತದಲ್ಲಿವೆ. ಈ ಬಗ್ಗೆ ಹಿರಿಯ ನಾಯಕರು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷವಾಗಿ ಹೆಚ್ಚು ಸ್ಥಾನ ಪಡೆಯುವ ಉದ್ದೇಶ ಹೊಂದಿದ್ದೇವೆ. ನಾವು ಅಮತಿಮ ಅಭಿಪ್ರಾಯಕ್ಕೆ ಬಂದಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬರ ಘೋಷಣೆ ಮಾಡುವಲ್ಲಿ ವಿಳಂಬ; ಸರ್ಕಾರದ ವಿರುದ್ಧ ವಾಗ್ದಾಳಿ

ಮುಂಗಾರು ಮಳೆ ಸರಿಯಾಗಿ ಆಗದಿದ್ದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ವರದಿ ಪಡೆದು ಬರ ಘೋಷಣೆ ಮಾಡುವಲ್ಲಿ ವಿಳಂಬ ಮಾಡಿದ್ದಾರೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಈಗ ಮುಂಗಾರು ಬಹುತೇಕ ಮುಗಿದಿರುವುದರಿಂದ ರೈತರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸರಕಾರ ಬೆಳೆ ನಷ್ಟಕ್ಕಾದರೂ ಪರಿಹಾರ ನೀಡಬೇಕು. ಕೇಂದ್ರದ ನಿರ್ದೇಶನಕ್ಕೆ ಕಾಯದೆ ನಮ್ಮ ಅವಧಿಯಲ್ಲಿ ಪ್ರವಾಹದ ಒಂದು ತಿಂಗಳೊಳಗೆ ಪರಿಹಾರವನ್ನು ಪಾವತಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ; ವಿಟ್ಲದಲ್ಲಿ ಜ್ವರದಿಂದ ಬಳಲುತ್ತಿದ್ದ ಯುವತಿ ಸಾವು

ಕೇಂದ್ರದ ಷರತ್ತುಗಳ ಮೇರೆಗೆ ಪರಿಹಾರ ನೀಡುವುದಾಗಿ ಸರಕಾರ ಹೇಳುತ್ತಿದೆ. ಅವರು ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಬಯಸುವುದಿಲ್ಲ. ಕುಂಟು ನೆಪ ಹೇಳುತ್ತಿದ್ದಾರೆ. 25,000 ಕೋಟಿ ರೂ. ಸಾಲದ ಬದಲು ಕೇವಲ ಏಳು ಕೋಟಿ ರೂ.ಗಳನ್ನು ರೈತರಿಗೆ ಪಾವತಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಬೊಮ್ಮಾಯಿ ಮಾತನಾಡಿ, ತಮಿಳುನಾಡಿನ ಅಣೆಕಟ್ಟುಗಳಲ್ಲಿ ಹೆಚ್ಚುವರಿ ನೀರು ಇದೆ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಆದರೆ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸದೆ ನೀರು ಬಿಡುತ್ತಿದೆ. ಹೀಗಾಗಿ ಕಾವೇರಿ ನದಿ ದಡದ ರೈತರು ಹಾಗೂ ಬೆಂಗಳೂರಿನ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಕಾನೂನು ಹೋರಾಟ ಮತ್ತು ತಮಿಳುನಾಡು ಸರ್ಕಾರಕ್ಕೆ ಮನವರಿಕೆ ಮಾಡುವುದೊಂದೇ ಪರಿಹಾರ. ಆದರೆ ನಮ್ಮ ಮುಖ್ಯಮಂತ್ರಿಗಳು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರೊಂದಿಗೆ ಮಾತನಾಡಲು ಬಯಸುವುದಿಲ್ಲ. ನೀರು ಬಿಡುವುದಿಲ್ಲ ಎಂದು ಸರಕಾರ ದೃಢವಾಗಿ ನಿಲ್ಲಬೇಕು. ನೀರು ಬಿಟ್ಟರೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ