ಒಂದು ಪಕ್ಷದ ಚಿಹ್ನೆವುಳ್ಳ 3 ಕೋಟಿ ರೂ. ಮೌಲ್ಯದ ಕುಕ್ಕರ್ ಸೇರಿ ಇತರೆ ವಸ್ತುಗಳು ಜಪ್ತಿ: ತುಷಾರ್ ಗಿರಿನಾಥ್
ಒಂದು ಪಕ್ಷದ ಚಿಹ್ನೆವುಳ್ಳ 3 ಕೋಟಿ ರೂ. ಮೌಲ್ಯದ ಕುಕ್ಕರ್ ಸೇರಿ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನಗರದ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಜಪ್ತಿ ಮಾಡಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assmbly Election) ಹತ್ತಿರದಲ್ಲಿದ್ದು, ರಾಜಕೀಯ ನಾಯಕರು (Political Leaders) ಮತದಾರರನ್ನು ಸೆಳೆಯಲು ನಾನಾ ತಂತ್ರ, ಕಸರತ್ತುಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆ ಮತದಾರರಿಗೆ ಹಂಚಲು ತಂದಿದ್ದ ಒಂದು ಪಕ್ಷದ ಚಿಹ್ನೆವುಳ್ಳ 3 ಕೋಟಿ ರೂ. ಮೌಲ್ಯದ ಕುಕ್ಕರ್ ಸೇರಿ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನಗರದ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಜಪ್ತಿ ಮಾಡಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಖರ್ಚು-ವೆಚ್ಚಗಳ ಮೇಲ್ವಿಚಾರಣೆ ಮಾಡಲು EC ಅಧಿಕಾರಿಯು ವಿವಿಧ ಕ್ಷೇತ್ರಗಳಲ್ಲಿ ಹಲವಾರು ಸಹಾಯಕ ವೆಚ್ಚ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ 1.54 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ
ಮಂಡ್ಯ: ಜಿಲ್ಲೆಯಲ್ಲಿ ಮತದಾರರಿಗೆ ಹಂಚಲು ತಂದಿದ್ದ 1.54 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಗೋಪಾಲಕೃಷ್ಣ ಹೇಳಿದರು. ರೌಡಿಪಟ್ಟಿಯಲ್ಲಿದ್ದ 7 ಜನರನ್ನು ಗಡಿಪಾರು ಮಾಡಲಾಗಿದೆ. ಶಸ್ತ್ರಾಸ್ತ್ರ ಹೊಂದಿರುವವರು 690 ಲೈಸೆನ್ಸ್ ಪಿಸ್ತೂಲ್ಗಳನ್ನು ಸಂಬಂಧಿಸಿದ ಠಾಣೆಗೆ ಒಪ್ಪಿಸಬೇಕು. 45.03 ಲಕ್ಷ ನಗದು, 3.85 ಲಕ್ಷ ರೂ. ಮೌಲ್ಯದ 1009 ಲೀಟರ್ ಮದ್ಯ, 1.5 ಲಕ್ಷ ಮೌಲ್ಯದ ಗಿಫ್ಟ್ ಬಾಕ್ಸ್, ₹35290 ಮೌಲ್ಯದ 3.5 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಚುನಾವಣೆ ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ.
ದಾಖಲೆ ಇಲ್ಲದೆ ಇಂಡಿಕಾ ಕಾರಿನಲ್ಲಿ ಸಾಗಿಸುತ್ತಿದ್ದ 70 ಲಕ್ಷ ಹಣ ಪತ್ತೆ
ಬೆಳಗಾವಿ: ದಾಖಲೆ ಇಲ್ಲದೆ ಇಂಡಿಕಾ ಕಾರಿನಲ್ಲಿ ಸಾಗಿಸುತ್ತಿದ್ದ 70 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಜಿಲ್ಲೆಯ ಕಾಗವಾಡ ಹೊರವಲಯದ ಕಾಗವಾಡ-ಮಿರಜ್ ಚೆಕ್ಪೋಸ್ಟ್ನಲ್ಲಿ ಮಹಾರಾಷ್ಟ್ರದ ಮಿರಜ್ನಿಂದ ಹಣ ಸಾಗಿಸುತ್ತಿದ್ದಾಗ ಪತ್ತೆಯಾಗಿದೆ. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಜಾಸ್ ಟೋಲ್ ಬಳಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 30 ಸಾವಿರ ಲೀಟರ್ ಸ್ಪಿರಿಟ್ನ್ನು ಅಬಕಾರಿ ಪೊಲೀಸರಿಂದ ಸೀಜ್ ಮಾಡಲಾಗಿದೆ. ದಾಬಸ್‌ಪೇಟೆಯಿಂದ ಬೆಂಗಳೂರಿನ ಕಡೆ ಲಾರಿಯಲ್ಲಿ ಸಾಗಿಸುತ್ತಿದ್ದಾಗ ಜಪ್ತಿ ಮಾಡಲಾಗಿದ್ದು, ಚಾಲಕ ಶ್ರೀಧರ್ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ.
ಇದನ್ನೂ ಓದಿ: ದೇವನಹಳ್ಳಿ: ಲಕ್ಷಾಂತರ ಮೌಲ್ಯದ ಹೆಲ್ಮೆಟ್, ಕ್ರೀಡಾ ಕಿಟ್ ಪತ್ತೆ: ಕಾಂಗ್ರೆಸ್ ನಾಯಕನಿಗೆ ಸೇರಿದ ದಾಖಲೆ ಇಲ್ಲದ ಹಣ ಜಪ್ತಿ
35.50 ಲಕ್ಷ ನಗದು ಜಪ್ತಿ: ಮೂವರು ವಶಕ್ಕೆ
ಕಲಬುರಗಿ: ದಾಖಲಾತಿ ಇಲ್ಲದೇ ಸಾಗಾಟ ಮಾಡುತ್ತಿದ್ದ 35.50 ಲಕ್ಷ ನಗದು ಜಪ್ತಿ ಮಾಡಿರುವಂತಹ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ರಿಬ್ಬನಪಲ್ಲಿ ಚೆಕ್ ಪೋಸ್ಟ್ನಲ್ಲಿ ನಡೆದಿದೆ. ಕಾರ್ನಲ್ಲಿ ಪತ್ತೆಯಾದ ಹಣಕ್ಕೆ ಸೂಕ್ತ ದಾಖಲಾತಿ ನೀಡದೇ ಇರೋದರಿಂದ ಹಣ ಜಪ್ತಿ ಮಾಡಿದ್ದು, ಮುಧೋಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಮೂವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಚೆಕ್ ಪೋಸ್ಟ್ನಲ್ಲಿ ಕಾರ್ ತಪಾಸಣೆ ಮಾಡಿದಾಗ ಹಣ ಸಿಕ್ಕಿಬಿದಿದ್ದು, ಕಂದಾಯ ಇಲಾಖೆ ಮತ್ತು ಪೊಲೀಸರಿಂದ ಜಪ್ತಿ ಮಾಡಲಾಗಿದೆ.
ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 22 ಲಕ್ಷ ಮೌಲ್ಯದ ಸೀರೆಗಳನ್ನು ಜಪ್ತಿ
ಚಿಕ್ಕಬಳ್ಳಾಪುರ: ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 22 ಲಕ್ಷ ಮೌಲ್ಯದ 2 ಲೋಡ್ ಸೀರೆಗಳನ್ನು GST ಅಧಿಕಾರಿಗಳು ನಿನ್ನೆ (ಮಾ.26) ರಂದು ಜಪ್ತಿ ಮಾಡಿಕೊಂಡಿದ್ದರು. ಬೆಂಗಳೂರಿನಿಂದ ಚಿಂತಾಮಣಿಗೆ ಟೆಂಪೋದಲ್ಲಿ ಸಾಗಿಸುತ್ತಿದ್ದಾಗ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಕ್ರಾಸ್ ಬಳಿ ದಾಳಿ ಮಾಡಿ ಜಪ್ತಿ ಮಾಡಲಾಗಿತ್ತು. ಶಿಡ್ಲಘಟ್ಟ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಸೀಕಲ್ ರಾಮಚಂದ್ರಗೌಡ ಎಂಬುವರಿಗೆ ಸೇರಿದ್ದು ಎನ್ನಲಾಗಿತ್ತು. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮತದಾರರಿಗೆ ಹಂಚಲು ಬ್ಯಾಗ್ ಸಂಗ್ರಹಿಸಿದ್ದ ಆರೋಪ: ಕೆಸಿ ನಾರಾಯಣಗೌಡ ಫೋಟೋ ಇರುವ 450 ಶಾಲಾ ಬ್ಯಾಗ್ ಜಪ್ತಿ
ಮತ್ತೊಂದು ಪ್ರಕರಣದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15 ಲಕ್ಷ ರೂಪಾಯಿಯನ್ನು ಪೊಲೀಸರು ಹುಬ್ಬಳ್ಳಿಯ ಕಾರವಾರ ರಸ್ತೆಯ ಚೆಕ್ಪೋಸ್ಟ್ನಲ್ಲಿ ಜಪ್ತಿ ಮಾಡಿದ್ದರು. ಅಂಕೋಲಾದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕಾರಿನಲ್ಲಿ 15 ಲಕ್ಷ ರೂ. ಹಣ ಪತ್ತೆ ಆಗಿತ್ತು. ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ಚೆಕ್ ಪೋಸ್ಟ್ ಸಿಬ್ಬಂದಿಗಳು ತಂದಿದ್ದರು.
ಸ್ಥಳಕ್ಕೆ ತಹಶಿಲ್ದಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರುಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಸದ್ಯ ಕಾರು ಚಾಲಕನನ್ನು ವಶಕ್ಕೆ ಪಡೆದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಿದ್ದಾರೆ. 60 ಲಕ್ಷ ರೂ. ಬೆಲೆಬಾಳುವ ಇಸ್ತ್ರಿ ಪೆಟ್ಟಿಗೆಗಳು ಸೀಜ್
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:59 pm, Wed, 29 March 23